ರಬಕವಿ- ಮಹಿಷವಾಡಗಿ ಸೇತುವೆ ಕಾಮಗಾರಿ ಮುಕ್ತಾಯ ಎಂದು ?

KannadaprabhaNewsNetwork |  
Published : Dec 06, 2025, 03:30 AM IST
ಬೆಳಗಾವಿ-ಬಾಗಲಕೋಟೆ ಜಿಲ್ಲೆಗೆ ಪ್ರಮುಖ ಸಂಪರ್ಕದ ಕೊಂಡಿಯಾಗಿರುವ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದು. | Kannada Prabha

ಸಾರಾಂಶ

ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ರಬಕವಿ-ಬನಹಟ್ಟಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಅಳಿದುಳಿದ ಅವಶೇಷಗಳ ಅಸ್ತಿ ಪಂಜರದಂತೆ ಸೇತುವೆ ಅನಾಥವಾಗಿ ನಿಂತಿರುವುದು ರಬಕವಿ ನಾಗರಿಕರಲ್ಲಿ ಬೇಸರ ಮೂಡಿಸಿದೆ. ಹೀಗಾಗಿ ನಿಷ್ಕ್ರಿಯ ಜನಪ್ರತಿನಿಧಿಗಳ, ಸರ್ಕಾರದ ನಡೆಯ ವಿರುದ್ಧ ಜನಾಕ್ರೋಶ ಹೆಚ್ಚಳಗೊಂಡಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ರಬಕವಿ-ಬನಹಟ್ಟಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಅಳಿದುಳಿದ ಅವಶೇಷಗಳ ಅಸ್ತಿ ಪಂಜರದಂತೆ ಸೇತುವೆ ಅನಾಥವಾಗಿ ನಿಂತಿರುವುದು ರಬಕವಿ ನಾಗರಿಕರಲ್ಲಿ ಬೇಸರ ಮೂಡಿಸಿದೆ. ಹೀಗಾಗಿ ನಿಷ್ಕ್ರಿಯ ಜನಪ್ರತಿನಿಧಿಗಳ, ಸರ್ಕಾರದ ನಡೆಯ ವಿರುದ್ಧ ಜನಾಕ್ರೋಶ ಹೆಚ್ಚಳಗೊಂಡಿದೆ.

೨೦೧೮ರಲ್ಲಿ ಅಂದಿನ ಸಚಿವೆ ಡಾ.ಉಮಾಶ್ರೀ ಒತ್ತಾಸೆಯ ಪರಿಣಾಮ ₹೩೦ ಕೋಟಿ ಟೆಂಡರ್ ಮೂಲಕ ನಾಗಾರ್ಜುನ ಕನಸ್ಟ್ರಕ್ಷನ್ಸ್ ಕಂಪನಿಗೆ ಕಾಮಗಾರಿ ನೀಡಲಾಗಿತ್ತು. ನಾಗರಿಕರ ಸತತ ಆಗ್ರಹದ ನಡುವೆ ಆರಂಭವಾದ ಕಾಮಗಾರಿ 8 ವರ್ಷಗಳಲ್ಲಿ ಕೇವಲ ಶೇ.೨೫ರಷ್ಟು ಮಾತ್ರ ನಡೆದಿದೆ. ೨೦೨೧ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ತಮ್ಮ ಸರ್ಕಾರದ ಮೇಲೆ ಒತ್ತಡ ಹೇರಿ ಟೆಂಡರ್ ಕಾಮಗಾರಿ ₹೫೦ ಕೋಟಿವರೆಗೆ ಹೆಚ್ಚಿಸುವ ಮೂಲಕ ಗುಣಮಟ್ಟದ ಕಾಮಗಾರಿ ಮತ್ತು ಸೇತುವೆ ವಿಸ್ತರಣೆಗೆ ಸರ್ಕಾರದಿಂದ ಅನುಮೋದನೆ ಪಡೆದಿದ್ದರು. ಜನತೆಯ ಪಾಲಿಗೆ ವರವಾಗಬೇಕಿದ್ದ ಕಾಮಗಾರಿ 15 ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡು ಹಳ್ಳ ಹಿಡಿದಿದೆ. ಟೆಂಡರ್ ಕಾರ್ಯದಲ್ಲಿ ವೈಫಲ್ಯ:

ಟೆಂಡರ್ ಸಮಯದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕೃಷ್ಣಾ ನದಿಯಲ್ಲಿನ ನೀರು ಇಲ್ಲದಂತೆ ನಿರ್ಮಿಸಿಕೊಂಡು ಸೇತುವೆಗಳ ಪಿಲ್ಲರ್‌ ಅಳವಡಿಸಬೇಕಿದೆ. ಆದರೆ ಸಮೀಪವೇ ಹಿಪ್ಪರಗಿ ಜಲಾಶಯವಿರುವ ಕಾರಣ ವರ್ಷಪೂರ್ತಿ ನದಿಯಲ್ಲಿ ನೀರಿರುತ್ತದೆ. ನದಿಯಲ್ಲಿ ನೀರಿದ್ದಾಗಲೂ ಆಧುನಿಕ ತಂತ್ರಜ್ಞಾನದ ಕ್ರಮದಲ್ಲಿ ಸೇತುವೆ ನಿರ್ಮಾಣದ ವೆಚ್ಚದ ವ್ಯವಸ್ಥೆ ಬದಲಿಸಬೇಕಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ಜನಪ್ರತಿನಿಧಿಗಳು:

ಕಾಮಗಾರಿ ಸ್ಥಗಿತಗೊಂಡಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ನಾಲ್ಕೈದು ಎಕರೆಯಷ್ಟು ಭೂಮಿ ವಶಪಡಿಸಿಕೊಂಡಿದ್ದು ಬಿಟ್ಟರೆ ರಬಕವಿಯ ತ್ರಿಶಲಾದೇವಿ ಆಸ್ಪತ್ರೆವರೆಗಿನ ನಿಯೋಜಿತ ರಸ್ತೆ ನಿರ್ಮಾಣ ಹಾಗೂ ಇತರೆ ಅಗತ್ಯ ಜಮೀನುಗಳಿಗೆ ಸರ್ಕಾರದಿಂದ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ನದಿಯಲ್ಲಿನ ಪಿಲ್ಲರ್‌ ಸೇರಿದಂತೆ ರಬಕವಿಯಿಂದ ಸೇತುವೆ ಮತ್ತು ಸೇತುವೆಯಿಂದ ಮಹಿಷವಾಡಗಿಗೆ ಸಂಪರ್ಕ ಕಲ್ಪಿಸಲು ಅಗತ್ಯವಾಗಿರುವ ರಸ್ತೆ ಕಾಮಗಾರಿಯ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಕಾಮಗಾರಿ ಸ್ಥಗಿತವಾಗಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ.

ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಾರಣಿಕ ಅಂಶಗಳನ್ನು ಗುರುತಿಸಿ, ಕಾರಣಿಕರ ಮೇಲೆ ಕ್ರಮ ಕೈಗೊಳ್ಳಲಾಗದಿದ್ದರೆ ಸಾರ್ವಜನಿಕವಾಗಿ ಕಾರಣ ತಿಳಿಸಬೇಕು, ಇಲ್ಲವೇ ಸೂಕ್ತ ಕ್ರಮ ಕೈಗೊಂಡು, ಶೀಘ್ರ ಕಾಮಗಾರಿ ಪುನರ್ ಪ್ರಾರಂಭಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

ಕಾಮಗಾರಿ ನಿಲ್ಲಲು ಸರ್ಕಾರದ ನಿರ್ಲಕ್ಷ್ಯ ಕಾರಣವಾಗಿದೆ. ಬರುವ ಬೆಳಗಾವಿ ಅಧಿವೇಶನದಲ್ಲಿ ಸೇತುವೆ ಕಾಮಗಾರಿ ಚರ್ಚಿಸಿ ಅಧಿಕಾರಿಗಳು ಮುತುವರ್ಜಿ ವಹಿಸಿ ಭೂಮಿ ಪರಿಹಾರದ ಜೊತೆಗೆ ಕಾಮಗಾರಿ ಪ್ರಾರಂಭಿಸಲು ಯತ್ನಿಸುವೆ.

-ಸಿದ್ದು ಸವದಿ ಶಾಸಕರು, ತೇರದಾಳ

ಸೇತುವೆ ಕಾಮಗಾರಿಗೆ 7-8 ವರ್ಷ ಅಡೆತಡೆ ಸಲ್ಲದು. ನೀ ಅತ್ತಂತೆ ಮಾಡು, ನಾ ಸತ್ತಂತೆ ಮಾಡುವೆ ಎಂಬ ನಾಟಕೀಯ ರೀತಿಯಲ್ಲಿ ನಿಂತಿರುವುದಕ್ಕೆ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ವಾರ ರಬಕವಿ ಜನತೆ ಉಗ್ರ ಹೋರಾಟ ನಡೆಸಲಾಗುವುದು.

-ಡಾ.ರವಿ ಜಮಖಂಡಿ, ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ಸಮಿತಿ, ರಬಕವಿ

ದುರಾಸೆ ಮತ್ತು ಸ್ವಜನಹಿತಕ್ಕಾಗಿ ಜಿಲ್ಲೆಗಳ ಸಂಪರ್ಕದ ಅಂತರ ಕಡಿತವಾಗುವ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಗೆ ನಿರ್ಲಕ್ಷ್ಯ ಸಲ್ಲದು. ಸ್ವಾರ್ಥ ಬಿಟ್ಟು ಜನಹಿತ ಕಾಯಲು ಮುಂದಾದರೆ ಕಾಮಗಾರಿ ಸರಳವಾಗುತ್ತದೆ. ಇಲ್ಲವಾದಲ್ಲಿ ರಬಕವಿ ಜನತೆ ತಮ್ಮ ಸಂಯಮ ಕಳೆದುಕೊಂಡು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.

- ಚಿದಾನಂದ ಸೊಲ್ಲಾಪುರ ಧುರೀಣರು ಕನ್ನಡಪರ ಹೋರಾಟಗಾರರು ರಬಕವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಗುರು ವೀರಘಂಟೆ ಮಡಿವಾಳೇಶ್ವರರ ಜಾತ್ರೋತ್ಸವ
ಕೃಷಿಕ ಪ್ರಶಸ್ತಿ, ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇಂದು