ನಗರ ವ್ಯಾಪ್ತಿಯ ಆಸ್ತಿಗಳಿಗೂ ಎ-ಖಾತಾ?

KannadaprabhaNewsNetwork |  
Published : Jan 08, 2026, 02:00 AM IST
Property

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವಂತೆ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ, ಫ್ಲ್ಯಾಟ್‌ಗಳಿಗೆ ಎ-ಖಾತಾ ನೀಡುವ ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

 ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವಂತೆ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬಿ-ಖಾತಾ ನಿವೇಶನ, ಕಟ್ಟಡ, ಫ್ಲ್ಯಾಟ್‌ಗಳಿಗೆ ಎ-ಖಾತಾ ನೀಡುವ ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ ನಿವೇಶನಗಳಿಗೆ ಬಿ-ಖಾತಾ ನೀಡಲಾಗಿದೆ. ಬಿ-ಖಾತಾ ವಹಿಯಲ್ಲಿ ಆಸ್ತಿಗಳ ದಾಖಲೆ ನಿರ್ವಹಣೆ ಮಾಡಿ ತೆರಿಗೆ ಸಂಗ್ರಹಿಸುತ್ತಿದ್ದರೂ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ. ನಕ್ಷೆ ಮಂಜೂರಾತಿ, ಓಸಿ, ಸಿಸಿ, ಬ್ಯಾಂಕ್‌ ಸೌಲಭ್ಯದಂತಹ ಸೌಲಭ್ಯ ಪಡೆಯಲು ಅನುವಾಗುವಂತೆ ಜಿಬಿಎ ವ್ಯಾಪ್ತಿಯಲ್ಲಿ ಜಾರಿ ಮಾಡಿರುವ ರೀತಿಯಲ್ಲೇ ಎ-ಖಾತಾ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಆಸ್ತಿ ಮಾಲೀಕರು ಆಸ್ತಿಯ ಮಾರ್ಗಸೂಚಿ ದರದ ನಿರ್ದಿಷ್ಟ ಪ್ರಮಾಣದ ಶುಲ್ಕವನ್ನು ಪಾವತಿಸಿ ಎ-ಖಾತಾ ಪಡೆಯಲು ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಎಷ್ಟು ವಿಸ್ತೀರ್ಣದವರೆಗಿನ ಯಾವ ರೀತಿಯ ಆಸ್ತಿಗಳಿಗೆ ಅವಕಾಶ ನೀಡಬೇಕು ಎಂಬ ಕುರಿತು ಗುರುವಾರದ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

31 ಜಿಲ್ಲೆಗಳಲ್ಲೂ ‘ಅಕ್ಕಪಡೆ’ ಅನುಷ್ಠಾನ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾಯೋಗಿಕವಾಗಿ ಜಾರಿ ಮಾಡಿರುವ ಅಕ್ಕ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಗುರುವಾರದ ಸಂಪುಟ ಸಭೆಯಲ್ಲಿ ನಿರ್ಧರಿಸುವ ನಿರೀಕ್ಷೆಯಿದೆ.

ಗೃಹ ಇಲಾಖೆಯ ಸಹಯೋಗದಲ್ಲಿ ರಾಜ್ಯದ 31 ಜಿಲ್ಲೆ ಹಾಗೂ 5 ಪೊಲೀಸ್ ಆಯುಕ್ತಾಲಯಗಳಲ್ಲಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಗೃಹಲಕ್ಷ್ಮೀ ಟ್ರಸ್ಟ್‌ ಸ್ಥಾಪನೆ ಉಪವಿಧಿಗಳಿಗೆ ಅನುಮೋದನೆ:

ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಸ್ಥಾಪನೆ ಹಾಗೂ ಸಂಘದ ಉಪವಿಧಿಗಳಿಗೆ ಅನುಮೋದನೆ ನೀಡುವ ಮೂಲಕ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಸೂಕ್ತ ನಿಯಮಗಳನ್ನು ರೂಪಿಸಲು ಸಂಪುಟ ಒಪ್ಪಿಗೆ ಸೂಚಿಸಲಿದೆ.

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವುದು, ಸ್ವಯಂ ಉದ್ಯಮಗಳಿಗಾಗಿ ಕಡಿಮೆ ಬಡ್ಡಿದರದಲ್ಲಿ 3 ಲಕ್ಷ ರೂ. ವರೆಗೆ ಸಾಲ ನೀಡುವುದು, ಮತ್ತು ಗೃಹಲಕ್ಷ್ಮೀ ಹಣವನ್ನು ಉಳಿತಾಯ ಮಾಡಿ ಆದಾಯ ಗಳಿಸಲು ಪ್ರೋತ್ಸಾಹಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಟ್ರಸ್ಟ್‌ ಸ್ಥಾಪಿಸಲು ಸರ್ಕಾರ ಈಗಾಗಲೇ ತೀರ್ಮಾನಿಸಿದ್ದು, ಈ ಬಗ್ಗೆ ನಿಯಮ ರೂಪಿಸುವ ಸಾಧ್ಯತೆಯಿದೆ. ಜತೆಗೆ 33 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಸೇರಿದಂತೆ ವಿವಿಧ ತೀರ್ಮಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲೇ ಮೊದಲ ಬಾರಿಗೆ ಮನೆ ಕೆಲಸದವರ ಭದ್ರತೆಗೆ ಕಾಯಿದೆ:

ಕರ್ನಾಟಕ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ವಿಧೇಯಕ - 2026 ಜಾರಿ ಮೂಲಕ ಗೃಹ ಕಾರ್ಮಿಕರ (ಮನೆ ಕೆಲಸದವರು) ಬದುಕಿಗೆ ಭದ್ರತೆ ಒದಗಿಸಲು ಸರ್ಕಾರ ಗುರುವಾರ ನಡೆಯಲಿರುವ ಸಂಪುಟದಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ. ಮನೆ ಕೆಲಸ ಮಾಡುವವರನ್ನು ಇದುವರೆಗೂ ಕಾರ್ಮಿಕರ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಪರಿಗಣಿಸಿರಲಿಲ್ಲ. ಆದರೆ, ಹೊಸ ಕಾಯ್ದೆಯು ಅವರಿಗೂ ಹಕ್ಕುಗಳನ್ನು ಕಲ್ಪಿಸಲಿದೆ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ