ಕನ್ನಡಪ್ರಭ ವಾರ್ತೆ ಬೆಂಗಳೂರು
ನೇಮಣ್ಣಗೌಡ ಅಲಿಯಾಸ್ ಮನ್ಮಥ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕೆಂಗೇರಿ ಬಳಿಯ ಬಿ.ಎಂ. ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ 482 ಎಕರೆ ಸೇರಿ ಒಟ್ಟು 532 ಎಕರೆ ಭೂಮಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಎಂದು ಆದೇಶಿಸಿತ್ತು. ಅಲ್ಲದೆ, 3 ತಿಂಗಳೊಳಗಾಗಿ ದಾಖಲೆಗಳನ್ನು ನೇಮಣ್ಣಗೌಡ ಹೆಸರಿಗೆ ಮಾಡುವಂತೆಯೂ ಸೂಚಿಸಲಾಗಿತ್ತು. ಈ ಪ್ರಕರಣದ ಸರ್ಕಾರದ ಹೆಚ್ಚುವರಿ ವಕೀಲರಾದ ಯೋಗಣ್ಣ ಎಂಬುವರು ಈ ಮಾಹಿತಿಯನ್ನು ಸರ್ಕಾರಕ್ಕಾಗಲಿ, ಅರಣ್ಯ ಇಲಾಖೆಗಾಗಲಿ ನೀಡಿರಲಿಲ್ಲ. ಜತೆಗೆ ಮೇಲ್ಮನವಿ ಸಲ್ಲಿಸಲು ಸೂಕ್ತ ಪ್ರಕರಣವಲ್ಲ ಎಂದು ನಮೂದಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದರು. ಕೊನೆಗೆ ಪರಿಶೀಲಿಸಿದಾಗಿ ಅಂದಾಜು 25 ಸಾವಿರ ಕೋಟಿ ರು. ಬೆಲೆ ಬಾಳುವ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿರುವುದು ತಿಳಿದು ಬಂದಿದೆ. ಈ ಹಿಂದೆಯೂ ಇದೇ ರೀತಿ ಸುಳ್ಳು ಮತ್ತು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿರುವುದು ಪತ್ತೆಯಾಗಿದೆ.
ಈ ಸಂಬಂಧ ಚಿಕ್ಕಮಗಳೂರಿನ ಅಂದಿನ ಉಪವಿಭಾಗಾಧಿಕಾರಿ ದಬ್ಜೀತ್‌ಕುಮಾರ್ ಅವರು ನನ್ನ ಗಮನಕ್ಕೆ ತಂದಿದ್ದು, ಆ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಿರ್ದೇಶಿಸಿದ್ದೆ. ಅದರ ಆಧಾರದಲ್ಲಿ 2025ರ ನ. 28ರಂದು ಮೂಡಿಗೆರೆ ಆರಕ್ಷಕ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದರೂ, ಈವರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ. ಈ ಎಲ್ಲ ನಡೆಗಳು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿರಾರು ಕೋಟಿ ರು. ಬೆಲೆ ಬಾಳುವ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಸಲು ಸರ್ಕಾರಿ ಅಧಿಕಾರಿಗಳು ವಕೀಲರು ನೆರವಾಗುತ್ತಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಈ ಕುರಿತಂತೆ ವಿಶೇಷ ತಂಡ ರಚಿಸಿ ಅಥವಾ ಸಿಐಡಿಗೆ ಪ್ರಕರಣದ ಸಮಗ್ರ ತನಿಖೆಗೆ ವಹಿಸಬೇಕು ಎಂದು ಪತ್ರದ ಮೂಲಕ ಸಿಎಂ ಅವರಲ್ಲಿ ಈಶ್ವರ್ ಖಂಡ್ರೆ ಕೋರಿದ್ದಾರೆ.