ದ್ವೀಪ ಅಗೆದು ಮರಳು ದಂಧೆ: ನದಿಯಲ್ಲಿ ನಿಂತು ವಿಶಿಷ್ಟ ಪ್ರತಿಭಟನೆ!

KannadaprabhaNewsNetwork | Published : Sep 16, 2024 1:52 AM

ಸಾರಾಂಶ

ದ್ವೀಪದ ಅಸ್ತಿತ್ವಕ್ಕೇ ಸಂಚಕಾರ ಬಂದಿದೆ. ಕೊನೆಗೆ ವಿಧಿಯಿಲ್ಲದೆ ‘ಒಂದೋ ನಮ್ಮನ್ನು ಬದುಕಿಸಿ, ಇಲ್ಲವೇ ಸಾಯಿಸಿ’ ಎಂಬ ಮನವಿಯೊಂದಿಗೆ ಮಹಿಳೆಯರು, ಹಿರಿಯರ ಸಹಿತ ದ್ವೀಪವಾಸಿಗಳು ನದಿಯಲ್ಲಿ ಅರ್ಧ ಮುಳುಗುವಷ್ಟು ನೀರಿನಲ್ಲಿ ನಿಂತು ಪ್ಲೆಕಾರ್ಡ್‌ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಹೊರವಲಯದಲ್ಲಿ 50ರಷ್ಟು ಕುಟುಂಬಗಳಿಗೆ ಜೀವನಾಧಾರವಾಗಿರುವ ಪಾವೂರು- ಉಳಿಯ ದ್ವೀಪವನ್ನೇ ಅಗೆದು ಮರಳು ತೆಗೆಯುವ ಕಾಯಕಕ್ಕೆ ಮರಳು ಮಾಫಿಯಾ ಮತ್ತೆ ಕೈಹಾಕಿದ್ದು, ಇದನ್ನು ವಿರೋಧಿಸಿ ದ್ವೀಪವಾಸಿಗಳು ಭಾನುವಾರ ನೇತ್ರಾವತಿ ನದಿಗಿಳಿದು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.

ಎರಡು ತಿಂಗಳ ಹಿಂದಷ್ಟೆ ಅಕ್ರಮ ಮರಳುಗಾರಿಕೆಯಿಂದ ಈ ದ್ವೀಪದ ಅಸ್ತಿತ್ವಕ್ಕೆ ಸಮಸ್ಯೆ ಇರುವುದಾಗಿ ದ್ವೀಪವಾಸಿಗಳು ಆತಂಕ ವ್ಯಕ್ತಪಡಿಸಿ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಇದಾಗಿ ಕೆಲ ಸಮಯ ದ್ವೀಪದ ಆಸುಪಾಸಿನಲ್ಲಿ ಅಕ್ರಮ ಮರಳುಗಾರಿಕೆ ನಿಂತಿತ್ತು. ಇದೀಗ ಮತ್ತೆ ಮರಳು ದಂಧೆ ಆರಂಭವಾಗಿದ್ದು, ದ್ವೀಪದ ಭಾಗವನ್ನೇ ಅಗೆದು ಮರಳು ತೆಗೆಯಲು ಆರಂಭಿಸಿದ್ದಾರೆ.

ಇದರಿಂದ ದ್ವೀಪದ ಅಸ್ತಿತ್ವಕ್ಕೇ ಸಂಚಕಾರ ಬಂದಿದೆ. ಕೊನೆಗೆ ವಿಧಿಯಿಲ್ಲದೆ ‘ಒಂದೋ ನಮ್ಮನ್ನು ಬದುಕಿಸಿ, ಇಲ್ಲವೇ ಸಾಯಿಸಿ’ ಎಂಬ ಮನವಿಯೊಂದಿಗೆ ಮಹಿಳೆಯರು, ಹಿರಿಯರ ಸಹಿತ ದ್ವೀಪವಾಸಿಗಳು ನದಿಯಲ್ಲಿ ಅರ್ಧ ಮುಳುಗುವಷ್ಟು ನೀರಿನಲ್ಲಿ ನಿಂತು ಪ್ಲೆಕಾರ್ಡ್‌ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ದ್ವೀಪವನ್ನು ಉಳಿಸಲು ಜಿಲ್ಲಾಡಳಿತ ಕೂಡಲೆ ಅಗತ್ಯ ಕ್ರಮ ಕೈಗೊಂಡು, ಅಕ್ರಮ ಮರಳು ತೆಗೆಯುವುದನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಡಿಸೋಜ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿ ಮರಳು ತೆಗೆಯುವುದನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದ್ವೀಪ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯಿಂದ ದ್ವೀಪದ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಈಗ ಮತ್ತೆ ಅಕ್ರಮ ದಂಧೆ ಶುರುವಾಗಿದೆ. ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಬೇಕು. ಅಕ್ರಮ ಮರಳು ದಂಧೆಕೋರರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

Share this article