2024ರಲ್ಲಿ ಹುಬ್ಬಳ್ಳಿ ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದ ವರ್ಷವಿದು : ಜಗದೀಶ ಶೆಟ್ಟರ್‌ ಬಿಜೆಪಿಗೆ ಮರಳಿದ್ದು ಪ್ರಮುಖ

KannadaprabhaNewsNetwork | Updated : Dec 26 2024, 01:04 PM IST

ಸಾರಾಂಶ

ಎಂಪಿ ಚುನಾವಣೆಯಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್‌ ಧಾರವಾಡ ಜಿಲ್ಲೆಯಲ್ಲಿ ಕೊಂಚ ಉಸಿರಾಡುವಂತಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:  ಜಗದೀಶ ಶೆಟ್ಟರ್‌ ಮರಳಿ ಬಿಜೆಪಿಗೆ, ನಿರೀಕ್ಷೆಗೂ ಮೀರಿ ರಂಗೇರಿದ್ದ ಲೋಕಸಭಾ ಚುನಾವಣೆ. ನಗರಕ್ಕೆ ಮೂವರು ಎಂಪಿ. ಪಾಲಿಕೆಗೆ ಮತ್ತೆ ಬಂತು ಗೌನು..!

ಇವು 2024ರಲ್ಲಿ ರಾಜಕೀಯ ರಂಗದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಬಗ್ಗೆ ಒಂದೇ ಸಾಲಿನ ವಿವರಣೆ. 2024ರಲ್ಲಿ ರಾಜಕೀಯ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾದವು.

ಬಿಜೆಪಿಗೆ ಮರಳಿದ ಶೆಟ್ಟರ್‌:

2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ಸಿಡಿದೆದ್ದು ಕಾಂಗ್ರೆಸ್‌ಗೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಅಲ್ಲಿಂದ ವಿಧಾನಪರಿಷತ್‌ ಸದಸ್ಯರೂ ಆದರು. ಆದರೆ 2024ರ ಪ್ರಾರಂಭದಲ್ಲೇ ಮರಳಿ ಬಿಜೆಪಿಗೆ ಬಂದಿದ್ದು ವಿಶೇಷ. ಬರೀ ಬಿಜೆಪಿಗೆ ಬಂದಿದ್ದು ಅಲ್ಲದೇ, ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿಯಿಂದ ಸ್ಪರ್ಧಿಸಿ ಎಂಪಿ ಕೂಡ ಆದರು.

ಇನ್ನು ಧಾರವಾಡ ಲೋಕಸಭೆಗೆ 5ನೇ ಬಾರಿಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇತಿಹಾಸ ಸೃಷ್ಟಿಸಿದರು. ಆದರೆ ಪ್ರತಿಸಲದ ಚುನಾವಣೆಗಿಂತಲೂ ಈ ಸಲ ಲೋಕಸಭೆ ಚುನಾವಣೆ ಭಾರಿ ತುರುಸಿನಿಂದ ಕೂಡಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನೋದ ಅಸೂಟಿ ಭಾರೀ ಪೈಪೋಟಿ ನೀಡುವ ಮೂಲಕ ಪಕ್ಷದ ಇಮೇಜ್‌ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಇನ್ನು 5ನೇ ಬಾರಿ ಗೆಲ್ಲುವ ಮೂಲಕ ಜೋಶಿ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದರು. ಈ ಕ್ಷೇತ್ರದಲ್ಲಿ ಈ ಹಿಂದೆ 5ನೆಯ ಬಾರಿಗೆ ಯಾರೂ ಗೆದ್ದಿರಲಿಲ್ಲ. ಅತ್ತ ಬಸವರಾಜ ಬೊಮ್ಮಾಯಿ ಕೂಡ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಅವರು ಕೂಡ ಎಂಪಿಯಾಗಿದ್ದಾರೆ. ಹುಬ್ಬಳ್ಳಿ ನಗರದಲ್ಲೇ ವಾಸವಾಗಿರುವ ಮೂವರು ಏಕಕಾಲಕ್ಕೆ ಎಂಪಿಗಳಾದಂತಾಗಿದೆ.

ಬಂಧನ:

ಇನ್ನು ಕರಸೇವಕ ಶ್ರೀಕಾಂತ ಪೂಜಾರಿಯನ್ನು ರಾಮಜನ್ಮಭೂಮಿ ಹೋರಾಟದ ಹಿನ್ನೆಲೆಯಲ್ಲಿ 30 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದರು. ಇದು ವರ್ಷದ ಆರಂಭದಲ್ಲೇ ಭಾರೀ ಸಂಚಲನ ಮೂಡಿಸಿತ್ತು. ಈ ಘಟನೆ ಬರೀ ರಾಜ್ಯದಲ್ಲೇ ಅಷ್ಟೇ ಅಲ್ಲ. ಅಯೋಧ್ಯೆ ಸೇರಿದಂತೆ ವಿವಿಧೆಡೆ ಕೂಡ ಸದ್ದು ಮಾಡಿತ್ತು. ಅಲ್ಲೆಲ್ಲ ಪ್ರತಿಭಟನೆಗಳು ವ್ಯಕ್ತವಾಗಿತ್ತು. ಕಾಂಗ್ರೆಸ್‌ ಸರ್ಕಾರಕ್ಕೆ ಶ್ರೀಕಾಂತ ಪೂಜಾರಿ ಇಕ್ಕಟ್ಟಿಗೆ ಸಿಲುಕಿಸಿದ್ದು ಸುಳ್ಳಲ್ಲ.

ಮತ್ತೆ ಗೌನು:

ಇನ್ನು ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ರಾಮಣ್ಣ ಬಡಿಗೇರ ಚುನಾಯಿತರಾದರು. ಜತೆಗೆ ಕಳೆದ ಎರಡು ವರ್ಷದಿಂದ ಈರೇಶ ಅಂಚಟಗೇರಿ ಅವಧಿಯಿಂದ ಬಿಟ್ಟಿದ್ದ ಮೇಯರ್‌ ಗೌನನ್ನು ಬಡಿಗೇರ ಧರಿಸಿದರು. ಈ ಮೂಲಕ ಮೇಯರ್‌ಗಿರಿಗೆ ಮತ್ತೆ ಕಳೆ ಬಂದಂತಾಗಿದ್ದು ಇದೇ ವರ್ಷ.

ಎಂಪಿ, ಎಂಎಲ್‌ಎ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಹಲವು ಕಾಂಗ್ರೆಸ್‌ ಲೀಡರ್‌ಗಳಿಗೆ ಈ ಸಲ ನಿಗಮ ಮಂಡಳಿ ಸ್ಥಾನ ದೊರೆಕಿರುವುದು ಅವರ ರಾಜಕೀಯ ಬುನಾದಿ ಕಟ್ಟಿಗೊಳಿಸಿದಂತಾಗಿದೆ. ಎರಡು ಅವಧಿಯಿಂದಲೇ ಧಾರವಾಡ ಎಂಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದ ಶಾಕೀರ ಸನದಿಗೆ ಟಿಕೆಟ್‌ ನೀಡದೇ ನಿರಾಸೆಯನ್ನುಂಟು ಮಾಡಿತ್ತು. ಆದರೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಂತಹ ಆಯಕಟ್ಟಿನ ಸ್ಥಳಕ್ಕೆ ಅಧ್ಯಕ್ಷರನ್ನಾಗಿಸಿ ಕೂರಿಸುವ ಮೂಲಕ ಸಮಾಧಾನ ಪಡಿಸಿತು. ಇದರಿಂದ ಸನದಿ ಕೂಡ ರಾಜಕೀಯವಾಗಿ ಸ್ವಲ್ಪ ಗಟ್ಟಿಯಾಗುವತ್ತ ಸಾಗುತ್ತಿದ್ದಾರೆ. ಇನ್ನು ನವಲಗುಂದ ಟಿಕೆಟ್‌ ತ್ಯಾಗ ಮಾಡಿದ್ದ ವಿನೋದ ಅಸೂಟಿಗೆ ಕ್ರೀಡಾ ಅಕಾಡೆಮಿಯ ಉಪಾಧ್ಯಕ್ಷರನ್ನಾಗಿ ಮಾಡಿದೆ.

ಈ ನಡುವೆ ಜಿಪಂ ಸದಸ್ಯ ದಿ.ಯೋಗೇಶ ಗೌಡ ಹತ್ಯೆಯ ಆರೋಪಿಯಾಗಿರುವ ಶಾಸಕ ವಿನಯ ಕುಲಕರ್ಣಿ ಈ ವರ್ಷವೂ ಧಾರವಾಡ ಜಿಲ್ಲೆಗೆ ಪ್ರವೇಶಿಸಬೇಕು ಎಂಬ ಇಚ್ಛೆ ಈಡೇರಲಿಲ್ಲ. ಇದಕ್ಕಾಗಿ ಕೋರ್ಟ್‌ನಲ್ಲಿ ಸಾಕಷ್ಟು ಪ್ರಯತ್ನ ಪಟ್ಟರು. ಆದರೆ, ಅದರಲ್ಲಿ ಯಶಸ್ಸು ಸಿಗಲಿಲ್ಲ ಎಂಬುದು ಮಾತ್ರ ಸ್ಪಷ್ಟ. ಇನ್ನೊಂದು ವಿಶೇಷವೆಂದರೆ ವಿನಯ ಕುಲಕರ್ಣಿ ಅವರ ಪುತ್ರಿ ಐಶ್ವರ್ಯ ವನ್ಯಜೀವಿ ಮಂಡಳಿಗೆ ಸದಸ್ಯೆಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿಯಾದಂತಾಗಿದೆ.

ಇನ್ನು ಎಂಪಿ ಚುನಾವಣೆಯಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್‌ ಧಾರವಾಡ ಜಿಲ್ಲೆಯಲ್ಲಿ ಕೊಂಚ ಉಸಿರಾಡುವಂತಾಗಿದೆ ಎಂಬುದು ಅಷ್ಟೇ ಸ್ಪಷ್ಟ.

ಒಟ್ಟಿನಲ್ಲಿ 2024ರ ಸಾಲಿನಲ್ಲಿ ರಾಜಕೀಯ ರಂಗದಲ್ಲಿ ಸಾಕಷ್ಟು ಏಳು ಬೀಳು ಕಂಡಂತಹ ವರ್ಷ ಎಂದರೆ ತಪ್ಪಾಗಲಿಕ್ಕಿಲ್ಲ.

Share this article