ರಾವ್ ಬಹದ್ದೂರ್ ಪದವಿ ಪುರಸ್ಕಾರಕ್ಕೆ ಇಂದಿಗೆ ಬರೋಬ್ಬರಿ 84 ವರ್ಷಗಳು

KannadaprabhaNewsNetwork |  
Published : Jun 15, 2026, 03:15 AM IST
ಮೃತ್ಯುಂಜಯ ರುಮಾಲೆ | Kannada Prabha

ಸಾರಾಂಶ

ಪ್ರತಿಫಲಾಪೇಕ್ಷೆಯಿಲ್ಲದೇ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಅವರ ಸೇವೆಯನ್ನು ಬ್ರಿಟಿಷ್ ಆಡಳಿತ ಅಧಿಕೃತವಾಗಿ ಗುರುತಿಸಿದ ದಿನ ಇದಾಗಿತ್ತು.

ಮಂಜುನಾಥ ಕೆ.ಎಂ.

ಬಳ್ಳಾರಿ: ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಬಳ್ಳಾರಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿ ಕನ್ನಡಮ್ಮನ ಸೇವೆಯ ಪುನೀತತೆ ಅನುಭವಿಸಿದ್ದ, ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜನಾನುರಾಗಿಯಾಗಿದ್ದ ವೈ.ಮಹಾಬಲೇಶ್ವರಪ್ಪ ಅವರಿಗೆ ಬ್ರಿಟಿಷ್ ಸರ್ಕಾರ "ರಾವ್ ಬಹದ್ದೂರ್ " ಎಂದು ಗೌರವ ಘೋಷಣೆ ಮಾಡಿ ಇಂದಿಗೆ ಬರೋಬ್ಬರಿ 84 ವರ್ಷಗಳು!

ಬ್ರಿಟಿಷ್ ಸರ್ಕಾರವು ವಿಕ್ಟೋರಿಯಾ ಚಕ್ರವರ್ತಿಯ ಜನ್ಮದಿನ ಅಂಗವಾಗಿ ದೇಶದ ವಿವಿಧೆಡೆ ಸಮಾಜಮುಖಿ ಕಾರ್ಯಕ್ಕೆ ತಮ್ಮ ಬದುಕನ್ನೇ ಮೀಸಲಿಸಿದ್ದ ಮಹನೀಯರಿಗೆ ನೀಡುತ್ತಿದ್ದ ಗೌರವಗಳ ಪೈಕಿ "ರಾವ್ ಬಹದ್ದೂರ್ " ಪುರಸ್ಕಾರವೂ ಒಂದಾಗಿದೆ. 1942ರ ಜೂನ್ 15ರಂದು ಬಳ್ಳಾರಿಯ ರಾಯಲ್ ಪಿಕ್ಚರ್ ಪ್ಯಾಲೇಸ್‌ನಲ್ಲಿ (ಇಂದಿನ ರಾಯಲ್ ಸಿನಿಮಾ ಥಿಯೇಟರ್) ಜರುಗಿದ ಅದ್ಧೂರಿ ಸಮಾರಂಭದಲ್ಲಿ ವೈ.ಮಹಾಬಲೇಶ್ವರಪ್ಪ ಅವರಿಗೆ "ರಾವ್ ಬಹದ್ದೂರ್ " ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾಜ ಸೇವೆಯನ್ನು ಜೀವನದ ಧ್ಯೇಯವನ್ನಾಗಿಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದ ಅವರ ಸೇವೆಯನ್ನು ಬ್ರಿಟಿಷ್ ಆಡಳಿತ ಅಧಿಕೃತವಾಗಿ ಗುರುತಿಸಿದ ದಿನ ಇದಾಗಿತ್ತು.

ಅಂದಿನ ಮದ್ರಾಸ್ ಸರ್ಕಾರದ ಗವರ್ನರ್ ಆಗಿದ್ದ ಅರ್ಥರ್ ಹೋಪ್ ಮಹಾಬಲೇಶ್ವರಪ್ಪ ಅವರಿಗೆ ಗೌರವ ಪ್ರದಾನ ಮಾಡಿದರು. ಕಲಾಪ್ರಪೂರ್ಣ ಎಂದೇ ಖ್ಯಾತರಾಗಿದ್ದ ಬಳ್ಳಾರಿ ರಾಘವರು ಅಂದು ಅಭಿನಂದನಾ ಭಾಷಣ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದ ಜಿಲ್ಲೆಯ ಮುಂಚೂಣಿ ವಹಿಸಿದ್ದ ಟೇಕೂರು ಸುಬ್ರಮಣ್ಯಂ, ಎಸ್‌.ಆರ್. ವಟ್ಟಂ ಸೇರಿ ಬಳ್ಳಾರಿ ಜಿಲ್ಲೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ಸಮುದಾಯಗಳ ಗಣ್ಯರು, ನಾಡಿನ ವಿವಿಧ ಕ್ಷೇತ್ರಗಳ ಸಾಧಕರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಜಸ್ಟೀಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವೈ. ಮಹಾಬಲೇಶ್ವರಪ್ಪ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರು. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷರು, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಜಿಲ್ಲಾ ಬೋರ್ಡ್ ಅಧ್ಯಕ್ಷರು, ಡಿಸ್ಟ್ರಿಕ್ಟ್ ಫೈನಾನ್ಸಿಯಲ್ ಬೋರ್ಡ್ ಅಧ್ಯಕ್ಷರು ಹಾಗೂ ಮದ್ರಾಸ್ ಸರ್ಕಾರದ ವಿಧಾನಪರಿಷತ್ ಸದಸ್ಯರೂ ಆಗಿದ್ದ ಮಹಾಬಲೇಶ್ವರಪ್ಪ ತಮ್ಮ ಇಡೀ ಜೀವನವನ್ನು ಸಮಾಜ ಸೇವಾ ಕೈಂಕರ್ಯಗೆ ಅರ್ಪಣೆಗೊಳಿಸಿದ್ದರು.

ಜಿಲ್ಲೆಯಲ್ಲಿ ಶಾಲೆ, ಪ್ರೌಢಶಾಲೆಗಳ ಆರಂಭ, ಹಳ್ಳಿಗಳಿಗೆ ಕುಡಿಯುವ ನೀರಿನ ಸೌಕರ್ಯ, ಆಸ್ಪತ್ರೆ, ರಸ್ತೆ, ಗ್ರಂಥಾಲಯ ಸೌಕರ್ಯ ಸೇರಿದಂತೆ ಅನೇಕ ಕಾರ್ಯಗಳನ್ನು ಕೈಗೊಂಡರು. ಜಿಲ್ಲಾ ಬೋರ್ಡ್ ಅಧ್ಯಕ್ಷರಾದ ಬಳಿಕ ವಿದ್ಯಾಸಂಸ್ಥೆಗಳ ವಿಸ್ತರಣಾ ಯೋಜನೆ, ಕನ್ನಡ ಶಾಲೆಗಳ ಆರಂಭ, ಕನ್ನಡವನ್ನು ಕಲಿಸುವುದನ್ನೇ ಕೈಬಿಟ್ಟಿದ್ದ ಊರುಗಳಲ್ಲಿ ಕನ್ನಡ ಶಾಲೆಗಳು ಆರಂಭಿಸಿದರು. ಕನ್ನಡ ಪಂಡಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿ, ಕನ್ನಡ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದರು. ಹೆಚ್ಚಿನ ಓದು ಓದಿ ಉನ್ನತ ಪದವಿ ಪಡೆಯದಿದ್ದರೂ ವಿದ್ಯಾ ಸೌಕರ್ಯಗಳನ್ನು ಜಿಲ್ಲೆಯ ಮೂಲೆ ಮೂಲೆಗೆ ಒದಗಿಸಿದರು.

ವೀರಶೈವ ವಿದ್ಯಾವರ್ಧಕ ಸಂಘದ ಎಂಜಿನಿಯರಿಂಗ್ ಕಾಲೇಜಿಗೆ "ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು " ಎಂದು ಹೆಸರಿಡಲಾಗಿದೆ. ಮಹಾಬಲೇಶ್ವರಪ್ಪನವರ ಮೊಮ್ಮಗ ವೈ.ಎಂ. ಸತೀಶ್ ಹಾಲಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜೂ.15 ಅಖಂಡ ಬಳ್ಳಾರಿ ಜಿಲ್ಲೆಯ ಪಾಲಿಗೆ ಐತಿಹಾಸಿಕ ದಿನ. ವೈ.ಮಹಾಬಲೇಶ್ವರಪ್ಪ ಅವರ ಅಪಾರ ಜನಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ರಾವ್ ಬಹದ್ದೂರ್ ಗೌರವ ಪುರಸ್ಕಾರ ನೀಡಿ ಗೌರವಿಸಿದ ದಿನ. ಗತ ಕಾಲದ ಇತಿಹಾಸ ಮುಂದಿನ ಪೀಳಿಗೆಗೆ ಉಳಿಯಲು ಇಂತಹ ಅಪರೂಪದ ದಿನಗಳನ್ನು ಸ್ಮರಿಸಬೇಕು ಎನ್ನುತ್ತಾರೆ ಹಿರಿಯ ಲೇಖಕರು, ಚಿಂತಕ ಮೃತ್ಯುಂಜಯ ರುಮಾಲೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೂದಗಟ್ಟಿಯಲ್ಲಿ ೩೩ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ
ಎಚ್. ಕೆ. ಪಾಟೀಲರಿಗೆ ಮಂತ್ರಿಗಿರಿ ನೀಡದಿದ್ದರೆ ಸಚಿವರ ಕ್ಷೌರಸೇವೆ ಬಹಿಷ್ಕಾರ: ಎಚ್ಚರಿಕೆ