ಮಾನವೀಯತೆ ಮೀರಿ ಸಾಲ ವಸೂಲಿ ಮಾಡಿದರೆ ದಿಟ್ಟ ಕ್ರಮ

KannadaprabhaNewsNetwork | Published : Feb 5, 2025 12:33 AM

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಡಿಸಿ ಎಚ್ಚರಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳು ಕಡ್ಡಾಯವಾಗಿ ಆರ್‌ಬಿಐ ಮಾರ್ಗಸೂಚಿ ಪಾಲನೆ ಮಾಡಬೇಕು. ಸಾಲ ಮಂಜೂರಾತಿ ಹಾಗೂ ವಸೂಲಾತಿ ಪ್ರಕ್ರಿಯೆ ನಿಯಮ ಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ನಿಯಮಬಾಹಿರ ಮಾರ್ಗ ಅನುಸರಿಸಬಾರದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

ಸಾಲ ವಸೂಲಾತಿ ಸಮಯದಲ್ಲಿ ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಹಾಗೂ ಅತಿಯಾದ ಬಡ್ಡಿ ವಿಧಿಸುತ್ತಿರುವ ಕುರಿತಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಒಬ್ಬರ ಹೆಸರಿನಲ್ಲಿ ಮತ್ತೊಬ್ಬರಿಗೆ ಸಾಲ ನೀಡುವುದಾಗಲಿ, ವಸೂಲಿ ಮಾಡುವುದಾಗಲಿ ಮಾಡಬಾರದು. ಸಾಲ ಮಂಜೂರಾತಿ ಸಂದರ್ಭದಲ್ಲಿ ನೇರವಾಗಿ ಸಾಲ ಪಡೆದವರೊಂದಿಗೆಯೇ ವ್ಯವಹರಿಸಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಸಾಲ ಮಂಜೂರಾತಿ ನಿಯಮಗಳು, ಸಾಲದ ಮೊತ್ತ, ಅವಧಿ, ಬಡ್ಡಿ ದರ, ಹಿಂಪಾವತಿ ಅವಧಿ ಸೇರಿದಂತೆ ಅಗತ್ಯ ಮಾಹಿತಿಗಳನ್ನೊಳಗೊಂಡ ಸತ್ಯಾಂಶ ಮಾಹಿತಿಯನ್ನು ಸಾಲ ಪಡೆಯುವವರಿಗೆ ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದರು.

ಸಾಲ ಮಂಜೂರಾತಿ ಸಂದರ್ಭದಲ್ಲಿಯೇ ಸಂಸ್ಥೆಯ ಎಲ್ಲಾ ಷರತ್ತು ಹಾಗೂ ನಿಬಂಧನೆಗಳನ್ನು ಸಾಲ ಪಡೆಯುವವರಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳನ್ನು ಮೀರಿ ಸಾಲ ವಸೂಲಾತಿ ಕ್ರಮ ಮಾಡಬಾರದು. ನಿಯಮಬದ್ಧವಾಗಿಯೇ ಸಾಲ ವಸೂಲಾತಿ ಮಾಡಬೇಕು. ಯಾವುದೇ ತರಹದ ಒತ್ತಡವನ್ನು ಸಾಲಗಾರರ ಮೇಲೆ ಹೇರಬಾರದು. ಅಪರಾಧ ಹಿನ್ನೆಲೆ ಹೊಂದಿರುವರನ್ನು ಸಾಲ ವಸೂಲಾತಿಗೆ ನೇಮಿಸಿಕೊಳ್ಳಬಾರದು ಎಂದು ಸೂಚಿಸಿದರು.

ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ಕಿರುಕುಳ ತಡೆಯುವ ನಿಟ್ಟಿನಲ್ಲಿ ಮಾರ್ಗಸೂಚಿಗಳ ರೂಪಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಹೊಸ ಕಾಯ್ದೆ ಶೀಘ್ರ ಜಾರಿ ಮಾಡಲಿದೆ. ಇದರ ಅನುಸಾರ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ರಚಿಸಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಘಟಕ ತೆರೆಯಲಾಗುವುದು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮ್ಮ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಾಲ ನೀಡುವಾಗ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮನಿ ಲೆಂಡರ್ ಆಕ್ಟ್, ಪಾನ್ ಬ್ರೋಕರ್ ಆಕ್ಟ್ ಹಾಗೂ ಆರ್‌ಬಿಐ ಮಾರ್ಗಸೂಚಿಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾಲ ವಸೂಲಾತಿಗೆ ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳಬಾರದು. ಮನೆಗೆ ತೆರಳಿ ಗಲಾಟೆ, ಸಂಬಂಧಿಕರಿಗೆ ಕಿರುಕುಳ, ರಾತ್ರಿ ಸಮಯದಲ್ಲಿ ಸಾಲ ವಸೂಲಾತಿಯಂತಹ ಮಾರ್ಗಗಳನ್ನು ಅನುಸರಿಸಬಾರದು. ರಾಜ್ಯ ಸರ್ಕಾರ ಇಂತಹ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿದೆ. ಕಾಯ್ದೆಗಳನ್ನು ಮೀರಿ ಸಾಲ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರು ಕೇಳಿಬಂದರೆ, ತಕ್ಷಣವೇ ಸಾಲ ವಸೂಲಿಗೆ ಬಂದವರ ಮೇಲೆ ಅಪರಾಧಿಕ ಅತಿಕ್ರಮಣ, ದೌರ್ಜನ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಗಳ ಅಡಿ ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕುಮಾರ್ ಬಾಬು, ಡಿವೈಎಸ್‍ಪಿಗಳಾದ ದಿನಕರ್, ರಾಜಣ್ಣ, ಶಿವಕುಮಾರ್ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

Share this article