ದೇಶ ಅಭಿವೃದ್ಧಿಗೆ ಮೀಸಲಾತಿ ಸೌಲಭ್ಯ ಮಾರಕ ಎಂಬುದು ಸುಳ್ಳು: ಬಿಕೆಎಚ್‌

KannadaprabhaNewsNetwork | Published : Oct 31, 2023 1:15 AM

ಸಾರಾಂಶ

ಕಾಂತರಾಜ್‌ ವರದಿ ಜಾರಿಗೆ ಬರಲೇಬೇಕು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲೇಬೇಕು
- ನಮ್ಮ ಹೋರಾಟ ಯಾವುದೇ ಜಾತಿ, ಧರ್ಮದ ವಿರುದ್ಧ ಅಲ್ಲ, ರಾಜಕೀಯ ದುರುದ್ದೇಶ ಇಲ್ಲ - ಕಾಂತರಾಜ್‌ ವರದಿ ಜಾರಿಗೆ ಬರಲೇಬೇಕು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲೇಬೇಕು - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು ಎಂಬುವುದು ಸಂವಿಧಾನದ ಆಶಯ. ಆದರೂ, ಬಹುಪಾಲು ಹಿಂದುಳಿದ ವರ್ಗ ಸೌಲಭ್ಯ ಮತ್ತು ಸವಲತ್ತುಗಳಿಂದ ವಂಚಿತರಾಗುತ್ತ ಬಂದಿದೆ. ಮೀಸಲಾತಿ ನೀಡುವುದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ, ದೇಶಕ್ಕೆ ನಷ್ಟವಾಗುತ್ತದೆ ಎಂಬುವುದು ಶುದ್ಧ ಸುಳ್ಳು. ಹಿಂದುಳಿದ ವರ್ಗಗಳು ಯಾರೂ ಕೂಡ ದೇಶದ್ರೋಹಿಗಳಲ್ಲ ಎಂದು ವಿಧಾನ ಪರಿಷತ್ತು ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಜಿಲ್ಲಾ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಕಾಂತರಾಜ್ ವರದಿ ಜಾರಿಗೆ ಆಗ್ರಹ ಚಿಂತನ- ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಪ್ರಭುತ್ವ, ರಾಜಪ್ರಭುತ್ವದ ನಂತರ ಈಗ ನಮಗೆ ಸಂವಿಧಾನವೇ ಪವಿತ್ರ ಮತ್ತು ಪರಮೋಚ್ಛ ಗ್ರಂಥವಾಗಿದೆ. ಸಂವಿಧಾನವನ್ನು ಓದಿ, ಅದರಲ್ಲಿರುವ ಹಕ್ಕನ್ನು ಪಡೆಯಲು ಕಾರ್ಯಪ್ರವೃತ್ತರಾಗಬೇಕು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅಧಿಕಾರ ಹಿಡಿದವರು ತಮ್ಮದೇ ಸಮಾಜದ ಪರ ಕೆಲಸ ಮಾಡುತ್ತಿದ್ದು, ಪರಿಣಾಮ ಪ್ರಜಾಪ್ರಭತ್ವ ಇನ್ನು ಬಾಲ್ಯವಸ್ಥೆಯಲ್ಲಿದೆ ಎಂದರು. ಕಾಂತರಾಜ ವರದಿ ಜಾರಿಯಾಗಲಿ: ವೈವಿಧ್ಯೆತೆಯಲ್ಲಿ ಏಕತೆ ಇರುವ ಭಾರತೀಯ ಮಕ್ಕಳು ನಾವು. ನಾವು ಪಂಚಾಂಗ ನೋಡುವುದು ಬೇಡ, ಸಂವಿಧಾನ ಓದಿದರೆ ಸಾಕು. ನಮ್ಮ ಹೋರಾಟ ಯಾವುದೇ ಜಾತಿ, ಧರ್ಮದ ವಿರುದ್ಧ ಅಲ್ಲ. ರಾಜಕೀಯ ದುರುದ್ದೇಶ ಈ ಹೋರಾಟದಲ್ಲಿ ಇಲ್ಲ. ನಮ್ಮ ಹಕ್ಕಿಗಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿದೆ. ರಾಷ್ಟ್ರ ಮಟ್ಟದಲ್ಲಿ ಜನಗಣತಿ, ಜಾತಿಗಣತಿ ಆಗಬೇಕೆಂಬ ತೀರ್ಮಾನ ರಾಹುಲ್ ಗಾಂಧಿ ತೆಗೆದುಕೊಂಡಿದ್ದಾರೆ. ಕಾಂತರಾಜ್‌ ವರದಿ ಜಾರಿಗೆ ಬರಲೇಬೇಕು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲೇಬೇಕು ಎಂದು ಹೇಳಿದರು. ಸೌಲಭ್ಯ, ಅಧಿಕಾರ ಉಳ್ಳವರ ಪಾಲಾಗಿದೆ. ಸರ್ಕಾರಿ ಶಾಲೆ, ಕಾಲೇಜು, ಬ್ಯಾಂಕ್‌ಗಳು, ಸಂಸ್ಥೆಗಳು ಎಲ್ಲವೂ ವ್ಯವಸ್ಥಿತವಾಗಿ ಮುಚ್ಚುತ ಬಂದಿದ್ದಾರೆ. ಖಾಸಗಿ ಖಾಸಗೀಕರಣಕ್ಕೆ ಒತ್ತು ನೀಡುತ್ತಿದ್ದಾರೆ. ದೇವರಾಜ್ ಅರಸು ಅವರು ದಿಟ್ಟತನದಿಂದ ಹಾವನೂರು ವರದಿ ಜಾರಿಗೆ ತರದೇ ಇದ್ದಿದ್ದರೆ ಕರ್ನಾಟಕ ಇಷ್ಟು ಅಭಿವೃದ್ಧಿಯತ್ತ ಸಾಗುತ್ತಿರಲಿಲ್ಲ ಎಂದರು. ಈಡಿಗ ಸಮಾಜದ ಗೀತಾಂಜಲಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಮತ್ತು ಸಾಮಾಜಿಕ, ಆರ್ಥಿಕ ಬಲ ಇಲ್ಲದ್ದರಿಂದ ಅವರು ಇನ್ನೂ ಹಿಂದುಳಿದಿದ್ದಾರೆ. ಈ ವರದಿ ಜಾರಿಗೆ ಬರಲಿ, ನ್ಯಾಯ ಸಿಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ತೀ.ನ. ಶ್ರೀನಿವಾಸ್ ಮಾತನಾಡಿ, ನಮ್ಮ ಹಕ್ಕಿಗಾಗಿ ಸಂವಿಧಾನಿಕ ನ್ಯಾಯ ಪಡೆಯಲು ಹೋರಾಟ ಮಾಡುವ ಕಾಲಬಂದಿದೆ. ₹165 ಕೋಟಿ ಖರ್ಚು ಮಾಡಿ, 5.15 ಲಕ್ಷ ಜನರು ಮಾಹಿತಿ ಸಂಗ್ರಹಿಸಿದ ಈ ಕಾಂತರಾಜ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ದೇಶದಲ್ಲಿ ಅತ್ಯಂತ ಕೆಳ ವರ್ಗದ ಸಣ್ಣ ಜಾತಿಗಳಿಗೆ ಸಾಮಾಜಿಕ ಶೈಕ್ಷಣಿಕ, ರಾಜಕೀಯ ಸ್ಥಾನಮಾನಗಳು ಬೇಕಾದರೆ, ಸರ್ಕಾರಿ ನೌಕರಿ ಬೇಕಾದರೆ, ಈ ವರದಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು. ಡಾ. ಅಂಬೇಡ್ಕರ್‌ ಅವರ ಮೀಸಲಾತಿ ಕಲ್ಪನೆ ಹಾಳು ಮಾಡಲಿಕ್ಕೆ ಮಠಾಧೀಶ್ವರರ ನೇತೃತ್ವದಲ್ಲಿ ಎಲ್ಲ ಮುಂದುವರಿದ ಜಾತಿಗಳು ಒಬಿಸಿಗೆ ಸೇರ್ಪಡೆಗೊಳ್ಳಲು ಬೇಡಿಕೆ ಇಟ್ಟಿದ್ದಾರೆ. ರಾಜೀವ ಗಾಂಧಿ ಅವರು ಕಾನೂನು ಮಾಡಿದ್ದರೂ, ಜಿ.ಪಂ ಮತ್ತು ತಾ.ಪಂ. ಚುನಾವಣೆಯನ್ನು ಇನ್ನೂ ನಡೆಸಲು ಈ ಸರ್ಕಾರದ ಕೈಯಲ್ಲಿ ಆಗಲಿಲ್ಲ. ಶರಾವತಿ ಸೇರಿದಂತೆ ಅನೇಕ ಯೋಜನೆಗಳ ಸಂತ್ರಸ್ಥರಿಗೆ ಬಗರ್‌ಹುಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸಲು ಆಗಲಿಲ್ಲ. ಅದಕ್ಕಾಗಿ ನಮ್ಮ ಬಳಿ ಅನೇಕ ದಾಖಲೆಗಳಿವೆ. ಸರ್ಕಾರಕ್ಕೆ ಬುದ್ಧಿ ಹೇಳಲು ಹೋರಾಟ ಅಗತ್ಯವಾಗಿದೆ ಎಂದರು. ಕಾರ್ಯಕ್ರಮದ ಸಂಚಾಲಕ ಆರ್.ಮೋಹನ್, ಶ್ರೀನಿವಾಸ್, ಚಂದ್ರಕಾಂತ್, ಸಾಧುಶೆಟ್ಟಿ ಸಮಾಜದ ಅಧ್ಯಕ್ಷ ಉಮಾಪತಿ, ಬಲಿಜ ಸಮಾಜದ ಜಿ.ಪದ್ಮನಾಭ, ಪಿ.ಒ. ಶಿವಕುಮಾರ್, ವಿಶ್ವನಾಥ್ ಕಾಶಿ, ಶಿವಾನಂದ, ಮಂಜಪ್ಪ ಮತ್ತಿತರರು ಇದ್ದರು. - - - -30ಎಸ್ಎಂಜಿಕೆಪಿ02: ಚಿಂತನ ಮಂಥನ ಕಾರ್ಯಕ್ರಮವನ್ನು ವಿಪ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಿದರು.

Share this article