ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಶಿಕ್ಷಣವನ್ನು ಮಕ್ಕಳ ಮೂಲಭೂತ ಹಕ್ಕು ಎನ್ನಲಾಗುತ್ತದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಬೋಧಿಸಬೇಕಾದ ಶಿಕ್ಷಕರ ಕೊರತೆ ಹೆಚ್ಚಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಹುಲಿಹೈದರ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಳ್ಳೆಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಯಲ್ಲಿ ಸುಮಾರು ೨೦ ಸಾವಿರ ಶಿಕ್ಷಕರ ಕೊರತೆ ಇದೆ. ಸರ್ಕಾರಗಳು ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ, ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಕೊಡುತ್ತಿಲ್ಲ. ಪಾಲಕರು ಈ ಬಗ್ಗೆ ಪ್ರಶ್ನೆ ಮಾಡಬೇಕಿದೆ ಎಂದರು.
ಅನುದಾನ ರಹಿತ ಶಾಲೆಗಳ ಸಂಘದ ತಾಲೂಕಾಧ್ಯಕ್ಷ ಜಗನ್ನಾಥ ಆಲಂಪಲ್ಲಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಕೈಯಲ್ಲಿನ ಚಡಿ ಕಸಿದುಕೊಂಡಿದ್ದು, ಬಾಲಾಪರಾಧ ಹೆಚ್ಚುತ್ತಿದೆ. ಒಳ್ಳೆಯ ಉದ್ದೇಶಕ್ಕೆ ಶಿಕ್ಷಕರು ಮಕ್ಕಳಿಗೆ ಶಿಕ್ಷಿಸಿದರೆ ಪಾಲಕರು ಬೇಸರಪಡಬಾರದು. ಮಕ್ಕಳ ಎದುರಿಗೆ ಶಿಕ್ಷಕರನ್ನು ನಿಂದಿಸುವುದು ಸರಿಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.