‘ರಾಣಿ ಅಬ್ಬಕ್ಕ ಬಹುಮುಖ ಚಿಂತನೆ’ ವಿಚಾರಗೋಷ್ಠಿ
ಕನ್ನಡಪ್ರಭ ವಾರ್ತೆ ಬಂಟ್ವಾಳಪೋರ್ಚುಗೀಸರ ವಿರುದ್ಧ ಅಬ್ಬಕ್ಕ ಹೋರಾಡಿರುವುದರ ಕುರಿತು ಭಾರತದಲ್ಲಿ ಸಮರ್ಪಕ ದಾಖಲೆ ನಮ್ಮ ಭಾರತದಲ್ಲಿ ಇಲ್ಲ ಎನ್ನುವುದು ದೊಡ್ಡ ದುರಂತ ಎಂದು ಎಂದು ಮಾಜಿ ಶಾಸಕಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡು ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಆಶ್ರಯದಲ್ಲಿ ಶುಕ್ರವಾರ, ಬಿ.ಸಿ.ರೋಡಿನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ‘ರಾಣಿ ಅಬ್ಬಕ್ಕ ಬಹುಮುಖ ಚಿಂತನೆ’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಅಬ್ಬಕ್ಕನ ಗುಣವನ್ನು ಎಲ್ಲಾ ಹೆಣ್ಣುಮಕ್ಕಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಹೀಗಾದಾಗ ನಮ್ಮನ್ನು ಎದುರಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂದರು.
ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ವೇಳೆ ಇಟಾಲಿಯನ್ ಪ್ರವಾಸಿ ಪಿಯತ್ತೊ ದೆಲ್ಲಾ ವೆಲ್ಲೆ ಅಬ್ಬಕ್ಕ ಕುರಿತು ಬರೆಯದೇ ಇದ್ದರೆ ಹಾಗೂ ಪೋರ್ಚುಗೀಸ್ ಆಕರಗಳಿಂದ ಅಬ್ಬಕ್ಕ ಕುರಿತು ಹೆಚ್ಚಿನ ಮಾಹಿತಿ ದೊರೆಯದೇ ಇದ್ದರೆ, ನಮಗೆ ಅವಳ ಬಗ್ಗೆ ತಿಳಿಯಲೂ ಸಾಧ್ಯವಿರಲಿಲ್ಲ ಎಂದರು.ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಮಂಗಳೂರಿನಲ್ಲಿ ಕರಾವಳಿ ಉತ್ಸವ ಮೈದಾನಕ್ಕೆ ಅಬ್ಬಕ್ಕ ರಾಣಿ ಮೈದಾನ ಎಂದು ಹೆಸರಿಡಲು ಮನಪಾ ಮತ್ತು ರಾಜ್ಯ ಸರಕಾರ ಪ್ರಯತ್ನಿಸಬೇಕು ಎಂದರು.
ಬೆಳಗಿನ ಅವಧಿಯಲ್ಲಿ ಉಳ್ಳಾಲದ ಅಬ್ಬಕ್ಕ ರಾಣಿಯರು ಐತಿಹಾಸಿಕ ನೆಲೆ ಕುರಿತು ಸಂಶೋಧಕಿ ಡಾ. ಮಾಲತಿ ಕೃಷ್ಣಮೂರ್ತಿ ಬೆಳಕು ಚೆಲ್ಲಿದರು. ಕಾದಂಬರಿಗಳಲ್ಲಿ ಅಬ್ಬಕ್ಕ ವಿಚಾರದಲ್ಲಿ ಡಾ.ವಿ.ಕೆ. ಯಾದವ ವಿಚಾರ ಮಂಡಿಸಿದರು. ರಂಗಭೂಮಿಯಲ್ಲಿ ರಾಣಿ ಅಬ್ಬಕ್ಕ ವಿಚಾರದಲ್ಲಿ ರಂಗಕರ್ಮಿ ಐ.ಕೆ ಬೊಳುವಾರು ಮತ್ತು ಜನಮಾನಸದಲ್ಲಿ ರಾಣಿಅಬ್ಬಕ್ಕ ಎನ್ನುವ ವಿಚಾರದಲ್ಲಿ ಡಾ. ಆಶಾಲತಾ ಸುವರ್ಣ ವಿಷಯ ಮಂಡಿಸಿದರು.ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಸಂಸ್ಥಾಪಕ ಡಾ. ತುಕಾರಾಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಪ್ರಾರ್ಥಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ವಂದಿಸಿದರು. ಸಿಂಧೂರ ಟಿ.ಪಿ. ಕಾರ್ಯಕ್ರಮ ನಿರ್ವಹಿಸಿದರು.