ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ
ಕನ್ನಡಪ್ರಭ ವಾರ್ತೆ ದಾಂಡೇಲಿ
ಕನ್ನಡ ಸಾಹಿತ್ಯ ಪರಿಷತ್ತು ಇಂದು ನಾಲ್ಕು ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಮಟ್ಟಿಗೆ ಬೆಳೆದಿರುವುದು ಕನ್ನಡಿಗರ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು.ನಗರದಲ್ಲಿ ಸೋಮವಾರ ಸಂಜೆ ನಡೆದ 25ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೆಲ ಅವಧಿಯಲ್ಲಿ ವಿವಾದಗಳಿಗೆ ಒಳಗಾದರೂ, ಸದ್ಯ ಅದರ ಮೇಲಿನ ಕಳಂಕಗಳು ಶೀಘ್ರ ನಿವಾರಣೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಸರ್ಕಾರದ ನಿಯಂತ್ರಣದಲ್ಲಿದ್ದ ಪರಿಷತ್ತು ಅನಂತರ ಸ್ವತಂತ್ರ ಸಂಸ್ಥೆಯಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯದಂತಹ ಸಾಂಸ್ಕೃತಿಕ ಸಂಸ್ಥೆ ಉಳಿಸಿಕೊಂಡು ಬೆಳೆಸುವ ಹೊಣೆ ಎಲ್ಲ ಕನ್ನಡಿಗರ ಮೇಲಿದೆ. ಇಂದಿನ ಸಮಾಜದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ವಿಕೃತ ವಾತಾವರಣ ವ್ಯಾಪಿಸಿರುವುದು ಆತಂಕಕಾರಿ ಬೆಳವಣಿಗೆ ಎಂದರು.ಈ ವಿಕೃತತೆ, ದ್ವೇಷ ಮತ್ತು ಅಜ್ಞಾನಕ್ಕೆ ಪರಿಹಾರ ನೀಡಬಲ್ಲ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಹಿಂದಿನ ಹೆಜ್ಜೆಗಳನ್ನು ನೆನಪಿಸಿ, ಇಂದಿನ ನಡೆ ಬಗ್ಗೆ ಎಚ್ಚರಿಕೆ ನೀಡುತ್ತದೆ. ಹಿಂಸೆ ಮತ್ತು ದಮನದ ವಿರುದ್ಧ ಧ್ವನಿ ಎತ್ತುವ ಸಾಹಿತ್ಯವೇ ಸಮಾಜಕ್ಕೆ ದಾರಿ ತೋರಿಸುತ್ತದೆ ಎಂದು ಹೇಳಿದರು.
ಸಾಹಿತಿಗೆ ಯಾವುದೇ ಸ್ವಾರ್ಥ ಅಥವಾ ನಿರೀಕ್ಷೆ ಇರಬಾರದು. ಪ್ರಕೃತಿಯಂತೆ ಸಾಹಿತ್ಯವೂ ಸದ್ದಿಲ್ಲದೆ ಫಲ ನೀಡಬೇಕು. ಸಾಹಿತ್ಯದ ರುಚಿಯನ್ನು ಅನುಭವಿಸುವ ಮನಸ್ಸು ಇದ್ದರೆ ಸಾಕು ಎಂದು ಅಭಿಪ್ರಾಯಪಟ್ಟರು. ಇಂದಿನ ರಾಜಕೀಯ ಪರಿಸರದಲ್ಲಿ ನೈತಿಕತೆ ಕುಸಿದಿರುವುದರಿಂದ ಸಮಾಜದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಮತ್ತು ನೃತ್ಯದಂತಹ ಸಾಂಸ್ಕೃತಿಕ ಚಟುವಟಿಕೆಗಳಿಂದಲೇ ಸಮಾಜದಲ್ಲಿ ಆನಂದ ಮತ್ತು ಸಮಾಧಾನ ಮೂಡಿಸಲು ಸಾಧ್ಯ ಎಂದು ಹೇಳಿದರು. ಜಿಲ್ಲಾ ಮಟ್ಟದ ಸಮ್ಮೇಳನವಾಗಿದ್ದರೂ ಇದಕ್ಕೆ ರಾಜ್ಯಮಟ್ಟದ ಘನತೆ ಬಂದಿದೆ ಎಂದು ನಾಡಿನ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.ಸಮ್ಮೇಳನಾಧ್ಯಕ್ಷ ರೋಹಿದಾಸ ನಾಯಕ ಮಾತನಾಡಿ, ಬೆಳ್ಳಿ ಮಹೋತ್ಸವ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೀತಿಯ ಉಡುಗೊರೆಯನ್ನು ಪ್ರೀತಿಯ ಶಿಷ್ಯ ನೀಡಿದ್ದಾನೆ. ಹೃದಯ ಶ್ರೀಮಂತಿಕೆ ಹೊಂದಿರುವ ಸಾಹಿತಿಗಳಾಗಿದ್ದಾರೆ.ರಾಜ್ಯ ಮಟ್ಟದ ಸಮ್ಮೇಳನವಾಗಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಸಮ್ಮೇಳನ ನಡೆಸುವ ಸಾಹಸವನ್ನು ಕೈಗೊಂಡು ಗೆದ್ದಿದ್ದಾರೆ. ಅದೇ ದೊಡ್ಡ ಸಾಧನೆ ಹಾಲಿನಲ್ಲಿ ಹುಳಿ ಹಿಂಡುವ ಗುಣದವರು ಇದ್ದಾರೆ. ದುಷ್ಟರು ಎಲ್ಲಾ ಕಾಲದಲ್ಲೂ ಇದ್ದಾರೆ. ನಗರದಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ಬಿ ಎನ್. ವಾಸರೆ ಮಾತನಾಡಿ, ಎಲ್ಲ ಅಡೆತಡೆ ಮೀರಿ ನಿಮ್ಮೆಲ್ಲರ ಸಹಕಾರದಿಂದ ನಿರೀಕ್ಷೆ ಮೀರಿ ಸಮ್ಮೇಳನ ಯಶಸ್ವಿಯಾಗಿದೆ. ನನ್ನ ವೈಭವೀಕರಣವಲ್ಲ. ಈ ಸಮಾಜದಲ್ಲಿ ಕೆಲವು ವಿರುದ್ಧ ಕುತಂತ್ರಕ್ಕೆ ಜನರು ಉತ್ತರ ನೀಡಿದ್ದಾರೆ. ಸಾಮರಸ್ಯದೆಡೆಗೆ ಸಾಹಿತ್ಯ ಪಯಣ ಬನ್ನಿ ಜೊತೆ ಸಾಗೋಣ ಎನ್ನುವ ಆಶಯದೊಂದಿಗೆ ಇಂದು ತೆರೆ ಬಿದ್ದಿದೆ. ಇದು ಅಂತ್ಯವಲ್ಲ ಆರಂಭ. ಜನಪ್ರತಿನಿಧಿಗಳು ಇಂತಹ ಕಾರ್ಯಕ್ರಮಗಳನ್ನು ನಿರ್ಲಕ್ಷ್ಯ ವಹಿಸಿದ್ದು ಬೇಸರ ತಂದಿದೆ. ಕನ್ನಡದ ಬಗ್ಗೆ ಯಾಕಿಷ್ಟು ಅನಾದರ ಎಂದು ಪ್ರಶ್ನಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಶಿವದಾಸ ದೇಸಾಯಿ ಸ್ವಾಮಿ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ತಿವಾರಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ರಿಯಾಜ್ ಅಹ್ಮದ್ ಸೈಯದ್, ಕಲಾಶ್ರೀ ಸಂಸ್ಥೆಯ ಎಸ್ ಪ್ರಕಾಶ ಶೆಟ್ಟಿ, ಶಿರಶಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿ, ನಗರಸಭೆ ಸದಸ್ಯ ಅಶ್ಫಾಕ್ ಶೇಖ, ಮೋಹನ ಹಲವಾಯಿ ವೇದಿಕೆಯಲ್ಲಿ ಸಮ್ಮೇಳನದ ಕುರಿತು ಅಭಿಪ್ರಾಯ ಹಂಚಿಕೊಂಡರು.
ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಪಿ.ಆರ್. ನಾಯಕ ವಂದಿಸಿದರು. ಅನಿತಾಕುಮಾರಿ ಎ. ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಹಾಗೂ ಸಮ್ಮೇಳನಾಧ್ಯಕ್ಷ ರೋಹಿದಾಸ ನಾಯಕ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ತ ಅಧ್ಯಕ್ಷ ಬಿ.ಎನ್. ವಾಸರೆ ದಂಪತಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.ಮಂಡನೆಯಾದ ನಿರ್ಣಯಗಳು:ಉತ್ತರ ಕನ್ನಡ ಜಿಲ್ಲಾ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೂಸೂರು ಮಂಡಿಸಿದರು. ಅವು ಈ ಕೆಳಗಿನಂತಿವೆ.
1. ದಾಂಡೇಲಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರ ಕ್ರಮ ಕೈಗೊಳ್ಳುವುದು.2. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ನೀಟ್ಟಿನಲ್ಲಿ ಉದ್ಯಮ ಹಾಗೂ ಯೋಜನೆ ಜಾರಿಗೆ ತರುವುದು.
3. ಅವೈಜ್ಞಾನಿಕ ಮಾನದಂಡದ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚುವ ಕ್ರಮ ಕೈಬಿಡುವುದು. ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮರಸ್ಯದ ಅಸ್ಮಿತೆ ಉಳಿಸಿಕೊಳ್ಳುವುದು.4. ಉತ್ತರ ಕನ್ನಡ ಜಿಲ್ಲೆಯ ಉದ್ದೇಶಿತ ರೈಲ್ವೆ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಕ್ರಮ ಕೈಗೊಳ್ಳುವುದು. 5. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರತಿ ತಾಲೂಕುಗಳಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಿ ಮಾಡಲು ತಾಲೂಕು ಆಡಳಿತಗಳು ಕ್ರಮ ಕೈಗೊಳ್ಳುವುದು.