ಸಾವರ್ಕರ್ ಫೋಟೋ ತೆಗೆಯುತ್ತೇನೆ ಎನ್ನುವುದು ಅಹಂಕಾರ

KannadaprabhaNewsNetwork |  
Published : Dec 11, 2023, 01:15 AM IST

ಸಾರಾಂಶ

ವೀರ ಸಾವರ್ಕರ್‌ ವಿಚಾರಧಾರೆಗಳನ್ನು ಅನುಸರಿಸುವವರು ಅನೇಕರಿದ್ದಾರೆ. ಅವರ ಫೋಟೋ ತೆಗೆಯುತ್ತೇನೆ ಎನ್ನುವುದು ಅಹಂಕಾರ ಅಲ್ಲವೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ವೀರ ಸಾವರ್ಕರ್‌ ವಿಚಾರಧಾರೆಗಳನ್ನು ಅನುಸರಿಸುವವರು ಅನೇಕರಿದ್ದಾರೆ. ಅವರ ಫೋಟೋ ತೆಗೆಯುತ್ತೇನೆ ಎನ್ನುವುದು ಅಹಂಕಾರ ಅಲ್ಲವೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು.

ನನಗೆ ಅವಕಾಶ ನೀಡಿದರೆ ಸುವರ್ಣ ಸೌಧದಲ್ಲಿರುವ ವೀರ ಸಾರ್ವಕರ್‌ ಫೋಟೋ ತೆಗೆಯುತ್ತೇನೆ ಎಂದ ಸಚಿವ ಖರ್ಗೆ ಹೇಳಿಕೆ ಕುರಿತು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ವೀರ ಸಾವರ್ಕರ್‌ ವಿಚಾರಧಾರೆ ಒಪ್ಪುವುದು ಬಿಡುವುದು ನಿಮಗೆ ಬಿಟ್ಟಿದ್ದು. ಆದರೆ, ವೀರ ಸಾವರ್ಕರ್‌ ವಿಚಾರಧಾರೆಗಳನ್ನು ಅನುಸರಿಸುವವರು ಅನೇಕರಿದ್ದಾರೆ. ಹೀಗಾಗಿ, ದುರಹಂಕಾರದ ಮಾತುಗಳನ್ನಾಡಬೇಡಿ ಎಂದ ಸಚಿವ ಜೋಶಿ, ನೆಹರೂ ವಿಚಾರಗಳ ಬಗ್ಗೆ ನಮಗೂ ಭಿನ್ನಾಭಿಪ್ರಾಯ ಇದೆ. ಹಾಗಂತ ನಾವು ನೆಹರೂ ಫೋಟೊ ತೆಗೆಯುತ್ತೇನೆ ಎನ್ನಲಾಗುತ್ತದೆಯೇ? ನೆಹರು ಅವರನ್ನು ಒಪ್ಪುವವರು ಅನೇಕರಿದ್ದಾರೆ. ಹೀಗಾಗಿ, ಫೋಟೋ ತೆಗೆಯುವ ವಿಚಾರ ಸರಿಯಲ್ಲ ಎಂದರು.

ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಕಾಂಗ್ರೆಸ್ ಬೆಂಬಲಿಸಿತ್ತು. ಅದರ ಪರಿಣಾಮ ಮೂರು ರಾಜ್ಯದಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿದೆ. ಈಗ ಪ್ರಿಯಾಂಕ ಖರ್ಗೆಯಂತಹ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಜನರು ಇನ್ನೂ ಹೆಚ್ಚು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದ ಅವರು, ನಾನು ಕಿತ್ತು ಒಗೆಯಲು ಬಂದಿಲ್ಲ, ಜೋಡಿಸಲು ಬಂದಿದ್ದೇನೆ ಎಂದಿರುವ ವಿಧಾನಸಭೆ ಸ್ವೀಕರ್‌ ಯು.ಟಿ. ಖಾದರ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ನಿಲುವು ಹಾಗೆಯೇ ಇರಬೇಕು. ಆಗ ಸದನ ಯಾವುದೇ ವಿವಾದ ಇಲ್ಲದೇ ನಡೆಯುತ್ತದೆ ಎಂದರು.

ರಾಜಸ್ಥಾನ ಬಿಜೆಪಿಯಲ್ಲಿ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೋಶಿ, ಅದು ಎಲ್ಲವೂ ಸುಳ್ಳು. ವಸುಂಧರಾ ರಾಜೆ ಸೇರಿ ಎಲ್ಲರೂ ನನಗೆ ನೇರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ರಾಷ್ಟ್ರೀಯ ನೇತೃತ್ವದಲ್ಲಿ ತೀರ್ಮಾನವಾಗಲಿದೆ. ಈ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.

ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ. ಯುಪಿಎದಲ್ಲಿ ₹12 ಲಕ್ಷ ಕೋಟಿಗಿಂತಲೂ ಹೆಚ್ಚು ಹಗರಣ ನಡೆದಿವೆ. ಅದಕ್ಕೆ ಯುಪಿಎ ಬ್ರ್ಯಾಂಡ್ ನೇಮ್ ಹಾಳಾಗಿತ್ತು. ಹೀಗಾಗಿ ಯುಪಿಎ ಇದ್ದದ್ದನ್ನು ಇಂಡಿಯಾ ಅಲೈನ್ಸ್ ಎಂಬ ಹೊಸ ಹೊಸ ಹೆಸರಿಟ್ಟರು. ಈಗ ಹೊಸ ಹೆಸರಿನಲ್ಲಿ ಟೊಪ್ಪಿಗೆ ಹಾಕಲು ತೀರ್ಮಾನಿಸಿದ್ದರು. ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಂದು ರಾಜ್ಯದಲ್ಲಿ ಮಾತ್ರ ಸ್ಥಳೀಯ ಕಾರಣದಿಂದ ಕಾಂಗ್ರೆಸ್ ಬಂದಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ನಲ್ಲಿ ದೊಡ್ಡ ಅಸಮಾಧಾನವಿದೆ ಎಂದಿದ್ದಾರೆ

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ