ಮೊಳಕೆ ಒಡೆದ ಧಾನ್ಯ ಮಾತ್ರ ಬಿತ್ತನೆ । ಮೈಲಾರದಲ್ಲಿ ಆಗಿ ಹುಣ್ಣಿಮೆ ವಿಶೇಷ ಆಚರಣೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿರಾಜ್ಯದಲ್ಲಿ ರೈತರು ಮಕ್ಕಳಿಗೆ ಕನ್ಯೆ (ವಧು) ಸಿಗದ ಹಿನ್ನೆಲೆ ಸಾಕಷ್ಟು ಯುವಕರು, ಮದುವೆ ಆಗದೇ ಹಾಗೆ ಇದ್ದಾರೆ. ಆದರೆ ಇಲ್ಲಿ ದೈವರ ಮುಂದೆ ಕೈ ಕಂಕಣ ಕಟ್ಟಿದರೆ ಸಾಕು, ವರ್ಷದೊಳಗೆ ಕನ್ಯೆ ಸಿಕ್ಕು ಮದುವೆಯಾಗುತ್ತಾರೆಂಬ ನಂಬಿಕೆ ಇದೆ.
ಹೌದು, ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಆಗಿ ಹುಣ್ಣಿಮೆಯಂದು ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವ ಸೋಮವಾರ ರಾತ್ರಿ 8.30ಕ್ಕೆ ಜರುಗಿತು. ಇದಕ್ಕೂ ಮುನ್ನ ದೇಗುಲಕ್ಕೆ ಆಗಮಿಸಿದ ಭಕ್ತರು, ಮೈಲಾರಲಿಂಗೇಶ್ವರ ಸ್ವಾಮಿಯ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗವಹಿಸಿದರು. ಆಗಿ ಹುಣ್ಣಿಮೆಯ ವಿಶೇಷವಾಗಿ ಮದುವೆ ಆಗದ ಯುವಕ ಹಾಗೂ ಯುವತಿಯರು ದೇಗುಲಕ್ಕೆ ಆಗಮಿಸಿ ಬೆಳಗಿನ ಪೂಜೆಯಲ್ಲಿ ದೇವಸ್ಥಾನದ ಆವರಣದಲ್ಲಿ ಕೈಗೆ ಕಂಕಣ ಕಟ್ಟಿಕೊಂಡರೆ ವರ್ಷದೊಳಗೆ ಮದುವೆಯಾಗುತ್ತಾರೆಂಬ ವಿಶೇಷವಾಗಿರುವ ನಂಬಿಕೆ ಭಕ್ತರಲ್ಲಿದೆ. ಜತೆಗೆ ಹೊಸದಾಗಿ ಮದುವೆಯಾಗಿರುವ ನವ ವಧು-ವರರು ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವ ನೋಡಗಲು ಆಗಮಿಸಿದ್ದರು.ಆಗಿ ಹುಣ್ಣಿಮೆಯ 9 ದಿನಗಳ ಹಿಂದೆ ರೈತರು ಬಿತ್ತನೆ ಮಾಡುವ ಎಲ್ಲ ಧವಸ ಧಾನ್ಯಗಳನ್ನು ನೀರಿನಲ್ಲಿ ನೆನೆಯಲು ಹಾಕುತ್ತಾರೆ, ಹುಣ್ಣಿಮೆಯ ದಿನ ಮೊಳಕೆಯೊಡೆದಿರುವ ಧಾನ್ಯಗಳನ್ನು ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ರೈತರದ್ದು. ಆ ಕಾರಣಕ್ಕಾಗಿ ಬಹುತೇಕ ರೈತ ಸಮುದಾಯ ದೇವಸ್ಥಾನಕ್ಕೆ ಆಗಮಿಸಿತ್ತು.
ಸೋಮವಾರ ರಾತ್ರಿ 8.30ಕ್ಕೆ ಮೈಲಾರಲಿಂಗ ಸ್ವಾಮಿಯ ರಥೋತ್ಸವ ಜರುಗಿತು. ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಗಂಗಿ ಮಾಳಮ್ಮರ ಕಲ್ಯಾಣೋತ್ಸವ ಮೇ 7ರಂದು ಜರುಗಿತು. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಧರ್ಮದರ್ಶಿ ಗುರು ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಪೌರೋಹಿತ್ಯದಲ್ಲಿ ಜರುಗಿತು.ರಾತ್ರಿ ಜರುಗಿದ ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನರೆದಿದ್ದರು.
ದೇವಸ್ಥಾನದಲ್ಲಿ ವಿಜಯನಗರ ಅರಸರ ಕಾಲದ ಮೈಲಾರಲಿಂಗೇಶ್ವರ ಸ್ವಾಮಿ ಮತ್ತು ಗಂಗಿಮಾಳಮ್ಮ ಕಂಚಿನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜತೆಗೆ ದೇವಸ್ಥಾನದಲ್ಲಿರುವ ಲಿಂಗುವಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಯಿತು.---ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಆಗಿ ಹುಣ್ಣಿಮೆಗೂ ಮುನ್ನ ಮೈಲಾರಲಿಂಗೇಶ್ವರ ಗಂಗಿಮಾಳಮ್ಮನ ಕಲ್ಯಾಣ ಮಹೋತ್ಸವ ಜರುಗಲಿದೆ. ಮದುವೆ ಆಗದೇ ಇರುವ ಯುವಕರು ದೇಗುಲಕ್ಕೆ ಬಂದು ಕೈ ಕಂಕಣ ಕಟ್ಟಿದರೆ ವರ್ಷದೊಳಗೆ ಮದುವೆಯಾಗಿರುವ ನಿರ್ದರ್ಶನಗಳಿವೆ. ಜತೆಗೆ ದೇಗುಲದಲ್ಲಿ ಹುಣ್ಣಿಮೆಗೂ ರೈತರು ಬಿತ್ತನೆ ಮಾಡುವ ಕಾಳುಗಳನ್ನು ನೀರಿನಲ್ಲಿ ನೆನೆಯಲು ಹಾಕುತ್ತಾರೆ. ಚೆನ್ನಾಗಿ ಮೊಳಕೆಯೊಡೆದರೆ ಆ ಬೆಳೆ ಉತ್ತಮವಾಗಿ ಬೆಳೆ ಬರುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್.