ಅರ್ಹ, ಬಡ ಫಲಾನುಭವಿಗಳಿಗೆ ಉಚಿತ ಕೊಡುಗೆ ನೀಡುವುದು ಉತ್ತಮ

KannadaprabhaNewsNetwork | Published : May 18, 2025 1:52 AM
ಗ್ರಾಮೀಣ ಪ್ರದೇಶದ ಜನರಿಗೆ, ಕಡುಬಡವರಿಗೆ, ಅಲ್ಪಸಂಖ್ಯಾತರಿಗೆ, ದೀನದಲಿತರಿಗೆ ಮತ್ತು ಬುಡಕಟ್ಟುಜನಾಂಗದವರಿಗೆ, ಆರೋಗ್ಯ, ಶಿಕ್ಷಣ ಸೇರಿ ಸರ್ಕಾರದ ಸೌಲಭ್ಯಗಳು ಎಷ್ಟರಮಟ್ಟಿಗೆ ದೊರಕುತ್ತಿವೆ ಎಂಬುವುದನ್ನು ಖಾತ್ರಿಪಡಿಸಿಕೊಳ್ಳುವ ವ್ಯವಸ್ಥೆಯೂ ಆಗಬೇಕು.
Follow Us

ಹುಬ್ಬಳ್ಳಿ: ಅರ್ಹ, ಬಡ ಫಲಾನುಭವಿಗಳಿಗೆ ಉಚಿತ ಕೊಡುಗೆ ನೀಡುವುದು ಉತ್ತಮ. ಉಚಿತ ಕೊಡುಗೆಗಳಿಂದ ಅನುಕೂಲತೆಗಳೂ ಮತ್ತು ಅನಾನುಕೂಲತೆಗಳೂ ಇವೆ. ಈ ಕೊಡುಗೆಗಳು ಅವರಿಗೆ ದೊರೆಯುತ್ತಿವೆಯೋ ಇಲ್ಲವೋ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವ ವ್ಯವಸ್ಥೆಯೂ ಆಗಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವೆಂಕಟೇಶ್‌ ನಾಯ್ಕ್ ಟಿ. ಹೇಳಿದರು.

ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ 11ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಅಸಮಾನತೆ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಸಾರ್ವಜನಿಕ ಕಲ್ಯಾಣ ಯೋಜನೆಗ‍ಳನ್ನು ಜಾರಿ ಮಾಡುತ್ತಿವೆ. ಇದು ಉತ್ತಮ ಕಾರ್ಯ. ಆದರೆ, ಉ‍‍ಳ್ಳವರಿಗೂ ಇಂತಹ ಸೌಲಭ್ಯ ನೀಡುವುದು ಸರಿಯಲ್ಲ. ಉಚಿತ ಕೊಡುಗೆಗಳಿಂದ ತಕ್ಷಣ ಲಾಭವಾಗುತ್ತದೆ ನಿಜ. ಆದರೆ, ಬಡವರ ಆರ್ಥಿಕ ಶಕ್ತಿ ಅಂದರೆ ಅವರೇ ಶ್ರಮಿಸಿ ಹಣ ಸಂಪಾದಿಸುವಂತಹ ಯೋಜನೆ ಜಾರಿ ಮಾಡುವುದು ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಗ್ರಾಮೀಣ ಪ್ರದೇಶದ ಜನರಿಗೆ, ಕಡುಬಡವರಿಗೆ, ಅಲ್ಪಸಂಖ್ಯಾತರಿಗೆ, ದೀನದಲಿತರಿಗೆ ಮತ್ತು ಬುಡಕಟ್ಟುಜನಾಂಗದವರಿಗೆ, ಆರೋಗ್ಯ, ಶಿಕ್ಷಣ ಸೇರಿ ಸರ್ಕಾರದ ಸೌಲಭ್ಯಗಳು ಎಷ್ಟರಮಟ್ಟಿಗೆ ದೊರಕುತ್ತಿವೆ ಎಂಬುವುದನ್ನು ಖಾತ್ರಿಪಡಿಸಿಕೊಳ್ಳುವ ವ್ಯವಸ್ಥೆಯೂ ಆಗಬೇಕು ಎಂದು ಪ್ರತಿಪಾದಿಸಿದರು.

ಕಾನೂನು ವಿದ್ಯಾರ್ಥಿಗಳಿಗೆ ವೇಳೆ ನಿರ್ವಹಣೆ ಅತಿಮುಖ್ಯ. ಕಲ್ಪಿತ ನ್ಯಾಯಾಲಯಗ‍ಳಂತಹ ಸ್ಪರ್ಧೆಗಳಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಆತ್ಮವಿಶ್ವಾಸ ಬೆಳೆಯುತ್ತದೆ. ಜಡ್ಜ್‌ಗಳು ಕೇ‍ಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವವರು ಉತ್ತಮ ವಕೀಲರಾಗಬಲ್ಲರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕ.ರಾ.ಕಾ.ವಿ. ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದರೂ ನಾಗರಿಕರಾದ ನಾವು ಸಂವಿಧಾನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ, ಗೌರವಿಸುವಲ್ಲಿ ವಿಫಲರಾಗಿದ್ದೇವೆ. ಸಂವಿಧಾನಕ್ಕೆ ಸಂಬಂಧಿಸಿದಂತೆ ಚರ್ಚೆಗಳಾಗುತ್ತಿವೆಯೇ ವಿನಃ ಸಮ ಸಮಾಜ ಹುಟ್ಟು ಹಾಕುವಲ್ಲಿ, ಸಮಾಜದ ಅನಿಷ್ಟ ಪದ್ಧತಿಗಳ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಸಂವಿಧಾನದ ಚೌಕಟ್ಟು ಮೀರಿ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದ ಅವರು ಕಾನೂನು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಿಗೆ, ಕಡುಬಡವರಿಗೆ, ಶೋಷಿತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗ‍ಳು ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು. ಎಲ್ಲಿಯ ತನಕ ಮನುಷ್ಯ ಸಂವಿಧಾನದ ಮೌಲ್ಯಗಳನ್ನು ಅರಿಯುವುದಿಲ್ಲವೋ ಅಲ್ಲಿಯ ವರೆಗೂ ಅಸಮಾನತೆ ಕಿತ್ತೊಗೆಯಲು ಸಾಧ್ಯವಿಲ್ಲ ಎಂದರು.

ಡೀನ್, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಡಾ. ರತ್ನಾ ಆರ್. ಭರಮಗೌಡರ್, ಹಣಕಾಸು ಅಧಿಕಾರಿ ಸಂಜೀವ್‌ ಕುಮಾರ್‌ ಸಿಂಗ್, ಕಾರ್ಯಕ್ರಮದ ಸಂಯೋಜಕ ಡಾ. ರಂಗಸ್ವಾಮಿ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಯೋಜಕರಾದ ಡಾ. ಭೀಮಾಬಾಯಿ ಎಸ್. ಮೂಲಗೆ ಮತ್ತು ಡಾ. ಗಿರೀಶ್ ಕೆ.ಸಿ. ಸಿಂಡಿಕೇಟ್ ಸದಸ್ಯರು, ಹಿರಿಯ ಉಪನ್ಯಾಸಕರು, ಹಿರಿಯ ನ್ಯಾಯವಾದಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ, ಸ್ಪರ್ಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ ಸ್ಪರ್ಧೆಯ ಪಾರಿತೋಷಕಗಳನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.

ವಿದ್ಯಾರ್ಥಿನಿ ಪ್ರಮತಿ ಪ್ರಾರ್ಥಿಸಿದರು. ಆಕಾಶ ಸ್ವಾಗತಿಸಿದರು. ಸಂದೀಪ ತಂಡಗಳ ಪರಿಚಯ ಮಾಡಿಕೊಟ್ಟರು. ಶ್ರೀದೇವಿ ನಿರೂಪಿಸಿದರು. ಸ್ನೇಹಾ ವಂದಿಸಿದರು.