-ಬಸಾಪುರ ಸರ್ಕಾರಿ ಶಾಲೆಯಲ್ಲಿ ಕುಷ್ಠರೋಗ ನಿರ್ಮೂಲನೆ ಜನಜಾಗೃತಿ
---ಕನ್ನಡಪ್ರಭ ವಾರ್ತೆ ಕೊಡೇಕಲ್
ಕೊಡೇಕಲ್ ಸಮೀಪದ ಬಸಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಕುಷ್ಠರೋಗ ನಿರ್ಮೂಲನೆ ಬಗ್ಗೆ ಜನಜಾಗೃತಿ ಹಾಗೂ ಕುಷ್ಠರೋಗ ಮುಕ್ತವಾಗಿಸುವ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಈ ವೇಳೆ ಕೊಡೇಕಲ್ ಪ್ರಾಥಮಿಕ ಆರೋಗ್ಯ ಇಲಾಖೆಯ ಸಹಾಯಕಿ ನೀಲಮ್ಮ ಹಾಸ್ತಿ ಮಾತನಾಡಿ, ಕುಷ್ಠರೋಗವು ಪ್ರಮುಖವಾಗಿ ಚರ್ಮ ಮತ್ತು ನರಗಳಿಗೆ ಸಂಬಂಧಿಸಿದಂತೆ ಕಾಯಿಲೆಯಾಗಿದ್ದು, ದೇಹದ ಯಾವುದೇ ಭಾಗದಲ್ಲಿ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ತಿಳಿಬಿಳಿ ಅಥವಾ ತಾಮ್ರಬಣ್ಣದ ಮಚ್ಚೆಗಳು, ಮುಖದಲ್ಲಿ ಮತ್ತು ಕಿವಿಗಳ ಮೇಲೆ ಎಣ್ಣೆ ಹಚ್ಚಿದಂತೆ ಹೊಳೆಯುವುದು ಮತ್ತು ಗಂಟುಗಳು ಕಾಣಿಸುವುದು, ಕುಷ್ಠರೋಗದ ಲಕ್ಷಣಗಳಾಗಿರುತ್ತವೆ. ಪ್ರಾರಂಭದ ಹಂತದಲ್ಲಿ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಕುಷ್ಠರೋಗ ಕಾಣಿಸಿಕೊಂಡ ರೋಗಿಗಳಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಅವರಿಗೆ ದೊರಕಿಸಿಕೊಡಲಾಗುವುದು ಹಾಗೂ ಅಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮಾಹಿತಿಯನ್ನು ನೀಡಲು ಸಲಹೆ ನೀಡಿದರು.ಶಿಕ್ಷಕ ನೀಲಪ್ಪ ತೆಗ್ಗಿ ಅವರು ಮಾತನಾಡಿ, ಈ ರೋಗವು ಈಗ ಅಂತಹ ಅಪಾಯಕಾರಿ ಅಲ್ಲ. ಏಕೆಂದರೆ ಸರ್ಕಾರ ಹಲವಾರು ಕಾರ್ಯಕ್ರಮಗಳ ಮೂಲಕ ಹತೋಟಿಗೆ ತಂದಿದೆ. ಎಲ್ಲೋ ಅಲ್ಪಸ್ವಲ್ಪ ಕಾಣಿಸುತ್ತದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ತೊಲಗಿಸಲು ನಾವೆಲ್ಲರೂ ಪ್ರಯತ್ನ ಮಾಡೋಣ ಎಂದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗವೂ ಶಾಲೆಯ ಎಲ್ಲಾ ಮಕ್ಕಳನ್ನು ವೈಯಕ್ತಿಕವಾಗಿ ಪರೀಕ್ಷಿಸಿದರು. ಮಕ್ಕಳಿಗೆ ಉತ್ತಮ ಆರೋಗ್ಯವಂತಾಗಲು ಕೆಲವು ಸಲಹೆಗಳನ್ನು ನೀಡಿದರು. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.----
6ವೈಡಿಆರ್2: ಕೊಡೇಕಲ್ ಸಮೀಪದ ಬಸಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಷ್ಠರೋಗ ನಿರ್ಮೂಲನೆ ಬಗ್ಗೆ ಜನಜಾಗೃತಿ ಹಮ್ಮಿಕೊಳ್ಳಲಾಗಿತ್ತು.