ನಶಿಸುತ್ತಿರುವ ಅಡುಗೆ ಬಗ್ಗೆ ತಿಳಿಸುತ್ತಿರುವುದು ಶ್ಲಾಘನೀಯ: ಶಾಸಕ ಷಡಕ್ಷರಿ

KannadaprabhaNewsNetwork |  
Published : Feb 17, 2026, 01:30 AM IST
ನಶಿಸುತ್ತಿರುವ ಅಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುತ್ತಿರುವುದು ಶ್ಲಾಘನೀಯ : ಕೆ. ಷಡಕ್ಷರಿ | Kannada Prabha

ಸಾರಾಂಶ

ಈಗಾಗಲೇ ಜನರು ಮರೆತು ಹೋಗುತ್ತಿರುವ ಹಲವಾರು ಉತ್ತಮ ಸಾಂಪ್ರದಾಯಿಕ ಮತ್ತು ಪೌಷ್ಟಿಕತೆಯಿಂದ ಕೂಡಿದ ತಿಂಡಿ, ತಿನಿಸು ಮತ್ತು ಆಹಾರವನ್ನು ಶಾಲೆ ಮಕ್ಕಳು, ಮುಖ್ಯೋಪಾಧ್ಯಾಯ ಸುರೇಶ್‌ ನೇತೃತ್ವದಲ್ಲಿ ಪ್ರಸ್ತುತಪಡಿಸಿದ್ದಾರೆ. ನಶಿಸುತ್ತಿರುವ ಈ ಸಾಂಪ್ರದಾಯಿಕ ಅಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಹೇಳುವ ಉದ್ದೇಶ ಶ್ಲಾಘನೀಯ.

ಕನ್ನಡಪ್ರಭವಾರ್ತೆ ತಿಪಟೂರು

ನಶಿಸಿ ಹೋಗುತ್ತಿರುವ ನಮ್ಮ ಭಾರತೀಯ ಸಂಪ್ರದಾಯದ ತಿಂಡಿ, ತಿನಿಸು, ಅಡುಗೆಗಳನ್ನು ಇಂದು ಪ್ರಾಥಮಿಕ ಶಾಲೆ ಮಕ್ಕಳು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿರುವುದು ಸಂತೋಷದ ವಿಷಯ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಾಲೂಕಿನ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಪ್ರಾಥಮಿಕ ಶಾಲೆ ಎಲ್ಲ ೭೫೦ ಮಕ್ಕಳೂ ಸೇರಿ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯ ಎಂಬ ವಿನೂತನ ಕಾರ್ಯಕ್ರಮ ಹಾಗೂ ಆಹಾರ ಮೇಳ ರಾಗಿಕೀಲ್ಸ(ಹಲ್ವ) ಕಟ್ ಮಾಡುವ ಮೂಲಕ ವಿನೂತನವಾಗಿ ಉದ್ಘಾಟಿಸಿದ ಅವರು ಈಗಾಗಲೇ ಜನರು ಮರೆತು ಹೋಗುತ್ತಿರುವ ಹಲವಾರು ಉತ್ತಮ ಸಾಂಪ್ರದಾಯಿಕ ಮತ್ತು ಪೌಷ್ಟಿಕತೆಯಿಂದ ಕೂಡಿದ ತಿಂಡಿ, ತಿನಿಸು ಮತ್ತು ಆಹಾರವನ್ನು ಶಾಲೆ ಮಕ್ಕಳು, ಮುಖ್ಯೋಪಾಧ್ಯಾಯ ಸುರೇಶ್‌ ನೇತೃತ್ವದಲ್ಲಿ ಪ್ರಸ್ತುತಪಡಿಸಿದ್ದಾರೆ. ನಶಿಸುತ್ತಿರುವ ಈ ಸಾಂಪ್ರದಾಯಿಕ ಅಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಹೇಳುವ ಉದ್ದೇಶ ಶ್ಲಾಘನೀಯ ಎಂದರು.

ಮುಖ್ಯೋಪಾಧ್ಯಾಯ ಸುರೇಶ.ಎಸ್.ಆರ್. ಮಾತನಾಡಿ ಈಗಿನ ಮಕ್ಕಳು ಹಾಗೂ ಯುವಜನತೆ ಸಾಂಪ್ರದಾಯಿಕ ಆಹಾರದಿಂದ ವಿಮುಖರಾಗಿ ಜಂಕ್‌ಫುಡ್‌ನತ್ತ ವಾಲುತ್ತಿರುವ ಈ ಸಂದರ್ಭದಲ್ಲಿ ನಮ್ಮ ಭಾರತೀಯ ಅಡುಗೆ ಪರಿಚಯಿಸುವ ಸಾಂಪ್ರದಾಯಿಕ ಆಹಾರದಲ್ಲಿದೆ ನಮ್ಮ ಭವಿಷ್ಯ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಉತ್ತಮ ಆಹಾರ ಮತ್ತು ಜೀವನಶೈಲಿ ರೂಢಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ಎರಡು ದಿನಗಳ ಕಾಲ ನೂರಾರು ಬಗೆ ಸಾಂಪ್ರದಾಯಿಕ ಅಡುಗೆಗಳನ್ನು ಪೋಷಕರ ಸಹಕಾರದೊಂದಿಗೆ ೫೦೦ಕ್ಕೂ ಹೆಚ್ಚು ಬಗೆಬಗೆಯ ತಿಂಡಿಗಳನ್ನು ಶಾಲೆಯ ಮಕ್ಕಳು ಪರಿಚಯಿಸಿದ್ದಾರೆ ಎಂದು ತಿಳಿಸಿದರು.

೫೦೦ಕ್ಕೂ ಹೆಚ್ಚು ವಿಧದ ತಿನಿಸುಗಳು:

ಶಾಲೆಯ ೭೫೦ಮಕ್ಕಳೂ ತಮ್ಮ ಪೋಷಕರ ನೆರವಿನೊಂದಿಗೆ ಬಗೆಬಗೆಯ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಿಕೊಂಡು ಪ್ರದರ್ಶನಕ್ಕೆ ಬಂದಿದ್ದರು. ತಾವು ತಯಾರಿಸಿ ತಂದ ಪ್ರತಿ ತಿನಿಸಿನ ಬಗ್ಗೆಯೂ ಮಕ್ಕಳು ವಿವರಣೆ ನೀಡಿ ಅದರ ಉಪಯೋಗ ಮತ್ತು ವೈಶಿಷ್ಟ್ಯ ವಿವರಿಸಿದರು. ಮೇಳದಲ್ಲಿ ೫೦೦ಕ್ಕೂ ಹೆಚ್ಚು ಬಗೆಬಗೆ ತಿಂಡಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಸಾವಿರಾರು ಜನರು ಬೆಳಗ್ಗೆಯಿಂದಲೇ ಪ್ರದರ್ಶನಕ್ಕೆ ಭೇಟಿ ನೀಡಿ ವಿವಿಧ ಬಗೆಯ ರುಚಿಯಾದ ಸಾಂಪ್ರದಾಯಿಕ ತಿನಿಸುಗಳನ್ನು ನೋಡಿ ಸಂತೋಷಪಟ್ಟರು. ತಿನಿಸಿನ ವಿವರ ತಿಳಿದುಕೊಂಡು, ಹಣನೀಡಿ ಕೊಂಡು ತಿಂದರು, ಮನೆಗೂ ಕೊಂಡೊಯ್ದರು. ಹತ್ತಾರು ಬಗೆ ಉಂಡೆಗಳು, ಚಕ್ಕುಲಿ, ನಿಪ್ಪಟ್ಟು ಸೇರಿ ಕುರುಕಲು ತಿಂಡಿಗಳು, ಸೂಪ್ ಮತ್ತು ಪಾನೀಯಗಳು, ಸಾವಯವ ಹಣ್ಣು-ಹಂಪಲು ತರಕಾರಿಗಳು ಜನರ ಗಮನ ಸೆಳೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲಾ ಹಂತದಲ್ಲೇ ಮಕ್ಕಳನ್ನು ದಂಡಿಸದಿದ್ದರೆ ಅಪಾಯ: ನಿಶ್ಚಲಾನಂದನಾಥ ಸ್ವಾಮೀಜಿ
ಜಾತ್ರೆ: ಎಸ್‌ಪಿ ನೇತೃತ್ವದಲ್ಲಿ ಜನಜಾಗೃತಿ ಪಥ ಸಂಚಲನ