ದೇವರು ಎಲ್ಲಾ ಕಡೆಯೂ ಇದ್ದಾನೆ ಎಂದಾದರೆ ದೇವಸ್ಥಾನಕ್ಕೆ ಏಕೆ ಬರಬೇಕು? ಎಂದು ಪ್ರಶ್ನಿಸುವ ಇಂದಿನ ಯುವಪೀಳಿಗೆಗೆ ಉತ್ತರಿಸಿದ ಶ್ರೀಗಳು, ಚಿಕ್ಕ ಮಗುವಿಗೆ ತಾಯಿ ಕೈಹಿಡಿದು ನಡೆಸುವಂತೆ ಮತ್ತು ಊಟ ಮಾಡಿಸುವಂತೆ, ಭಗವಂತನ ಅಸ್ತಿತ್ವದ ಅರಿವು ಮೂಡಿಸಲು ಹಿರಿಯರು ದೇವಸ್ಥಾನಗಳ ದಿವ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಂತ್ರಜ್ಞಾನ ಮತ್ತು ವಿಜ್ಞಾನ ಎಷ್ಟೇ ಮುಂದುವರಿದರೂ ತಾಯಂದಿರು ಮಕ್ಕಳಿಗೆ ನೀಡುವ ಸಂಸ್ಕಾರ ಅಪಾರ ಶಕ್ತಿ ಹೊಂದಿದೆ. ಇಂದಿನ ಆಧುನಿಕತೆಯ ಸೋಗಿನಲ್ಲಿ ಧರ್ಮ, ಮಾತೃಭಾಷೆ ಮತ್ತು ಸಂಸ್ಕಾರವನ್ನು ಮರೆತರೆ ನಾಡಿನಲ್ಲಿ ಮಹಾನ್ ಸಾಧಕರು ಹಾಗೂ ಶ್ರೇಷ್ಠ ಪುರುಷರು ಹುಟ್ಟುವುದೇ ನಿಂತುಹೋಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಸಿದರು.
ತಾಲೂಕಿನ ಗೊರವನಹಳ್ಳಿಯ ಮಾರಮ್ಮ ದೇವಿ ಸನ್ನಿಧಿಯಲ್ಲಿ ಹಾಗೂ ದೇವಸ್ಥಾನ ನಿರ್ಮಾಣ ಸಮಿತಿಯಿಂದ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹಿಂದೂ ಧರ್ಮ ಮತ್ತು ದೇವಸ್ಥಾನಗಳ ಮಹತ್ವ ಅರಿಯುವುದು ಅವಶ್ಯಕ ಎಂದರು.
ಇತ್ತೀಚಿನ ದಿನಗಳಲ್ಲಿ ನಮ್ಮದೇ ಧರ್ಮದಲ್ಲಿ ಹುಟ್ಟಿ ಅದರ ಮೂಲ ಸ್ವರೂಪವನ್ನು ಸರಿಯಾಗಿ ತಿಳಿದುಕೊಳ್ಳದೆ ಅಪನಂಬಿಕೆ ಬೆಳೆಸಿಕೊಳ್ಳುವ ಮತ್ತು ದಾರಿ ತಪ್ಪಿಸುವ ಕೆಲಸಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ದೇವರು ಎಲ್ಲ ಕಡೆಯೂ ಇದ್ದಾನೆ ಎಂದಾದರೆ ದೇವಸ್ಥಾನಕ್ಕೆ ಏಕೆ ಬರಬೇಕು? ಎಂದು ಪ್ರಶ್ನಿಸುವ ಇಂದಿನ ಯುವಪೀಳಿಗೆಗೆ ಉತ್ತರಿಸಿದ ಶ್ರೀಗಳು, ಚಿಕ್ಕ ಮಗುವಿಗೆ ತಾಯಿ ಕೈಹಿಡಿದು ನಡೆಸುವಂತೆ ಮತ್ತು ಊಟ ಮಾಡಿಸುವಂತೆ, ಭಗವಂತನ ಅಸ್ತಿತ್ವದ ಅರಿವು ಮೂಡಿಸಲು ಹಿರಿಯರು ದೇವಸ್ಥಾನಗಳ ದಿವ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ ಎಂದರು.
ದೇವಸ್ಥಾನದ ಒಳಗೆ ಮಾತ್ರ ಭಕ್ತಿ ತೋರಿಸಿ ಹೊರಗೆ ಹೋದಮೇಲೆ ತಪ್ಪು ಕೆಲಸ ಮಾಡಿದರೆ ದೇವರು ಮೆಚ್ಚುವುದಿಲ್ಲ. ಹೊರಗಡೆಯೂ ದೇವರಿದ್ದಾನೆ ಎಂಬ ಎಚ್ಚರದಿಂದ ಬದುಕಿದಾಗ ಮಾತ್ರ ಮನುಷ್ಯನಿಗೆ ನಿಜವಾದ ಶ್ರೇಷ್ಠತೆ ಬರುತ್ತದೆ ಎಂದರು.
ತಾಯಿಯ ಪ್ರಾರ್ಥನೆಯೇ ಸಾಧಕರ ಅತಿ ದೊಡ್ಡ ಬುನಾದಿಯಾಗಿದೆ. ತಾಯಿಯ ಪ್ರೀತಿ, ತ್ಯಾಗ ಮತ್ತು ಪ್ರಾರ್ಥನೆಯ ಮಹತ್ವವನ್ನು ಸಾಧಕರ ಮೂಲಕ ವಿವರಿಸಿ ಮಕ್ಕಳಿಗೆ ನಿಜವಾದ ಶಕ್ತಿಯನ್ನು ಧಾರೆ ಎರೆಯುವವರು ತಾಯಂದಿರು ಎಂದು ಶ್ರೀಗಳು ಬಣ್ಣಿಸಿದರು
ಶಾಸಕ.ಕೆ.ಎಂ.ಉದಯ್ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಹಲವಾರು ವರ್ಷಗಳಿಂದಲೂ ರಸ್ತೆಯ ಬದಿಯಲ್ಲಿ ನೆನೆಗುದಿಗೆ ಬಿದ್ದಿರುವ ನೀರಿನ ಕೊಳವನ್ನು ಅಭಿವೃದ್ಧಿಪಡಿಸಿ ಗ್ರಾಮಕ್ಕೆ ಸಮರ್ಪಿಸುವ ಭರವಸೆ ನೀಡಿದರು.
ಪ್ರತಿಯೊಬ್ಬರು ಪಕ್ಷಾತೀತವಾಗಿ ದೇವಾಲಯ ನಿರ್ಮಾಣ ಮಾಡುವ ಮೂಲಕ ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲೂ ಒಗ್ಗಟ್ಟು ಪ್ರದರ್ಶಿಸಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಎಂ.ಎಚ್.ಚನ್ನೆಗೌಡ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ದೇಗುಲ ಟ್ರಸ್ಟ್ ಅಧ್ಯಕ್ಷ ಜಿ.ಬಿ.ಲಿಂಗಯ್ಯ, ಕಾರ್ಯದರ್ಶಿ ರವಿ, ಪದಾಧಿಕಾರಿಗಳಾದ ರಾಘವ, ಮಧು, ಮಹೇಶ್, ಸಿದ್ದರಾಜು, ಪ್ರಸನ್ನ, ಶಿವರಾಮು, ಶಿವಬೋರಯ್ಯ ಸೇರಿದಂತೆ ಪದಾಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.