ಪ್ರಜಾಪ್ರಭುತ್ವದ ಆಶಯ ಗೌರವಿಸುವುದು ಎಲ್ಲರ ಕರ್ತವ್ಯ: ಕವಿತಾ ಮನ್ನಿಕೇರಿ

KannadaprabhaNewsNetwork |  
Published : Sep 15, 2025, 01:01 AM IST
14ಎಚ್‌ಪಿಟಿ1- ಹಂಪಿಯಿಂದ ವಿಧಾನಸೌಧಕ್ಕೆ ಬೈಕ್‌ ಜಾಥಾಕ್ಕೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಪ್ರಜಾಪ್ರಭುತ್ವದ ಆಶಯಗಳ ರಕ್ಷಣೆ, ಆದರ್ಶಗಳ ಪಾಲನೆ ಮಾಡುವುದರ ಜೊತೆಗೆ ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಬೇಕಿದೆ.

ಹಂಪಿಯಿಂದ ವಿಧಾನಸೌಧಕ್ಕೆ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಚಾಲನೆ: ಪ್ರತಿಜ್ಞಾ ವಿಧಿ ಬೋಧನೆಕನ್ನಡಪ್ರಭ ವಾರ್ತೆ ಹೊಸಪೇಟೆ

ಪ್ರಜಾಪ್ರಭುತ್ವದ ಆಶಯಗಳ ರಕ್ಷಣೆ, ಆದರ್ಶಗಳ ಪಾಲನೆ ಮಾಡುವುದರ ಜೊತೆಗೆ ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಬೇಕಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ವಿಶ್ವ ಪಾರಂಪರಿಕ ತಾಣ ಹಂಪಿ ವಿಜಯ ವಿಠಲ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ‍್ಯಾಲಿ ಜಾಥಾಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

ಗಣತಂತ್ರ ದೇಶಗಳಲ್ಲಿ ಜನರಿಗೆ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2007ರಲ್ಲಿ ವಿಶ್ವಸಂಸ್ಥೆ ಸೆ.15 ಅನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಘೋಷಣೆ ಮಾಡಿದೆ. 1988ರಲ್ಲಿ ಹಲವು ಪ್ರಜಾಪ್ರಭುತ್ವ ಒಕ್ಕೂಟ ಸಂಸ್ಥೆಗಳು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಘೋಷಿಸಬೇಕು ಎಂದು ನಿರ್ಣಯ ಕೈಗೊಂಡವು. ಬಳಿಕ ವಿಶ್ವಸಂಸ್ಥೆ ಅಧಿಕೃತವಾಗಿ ಘೋಷಿಸಿ ಜಾರಿಗೆ ತರಲಾಯಿತು. ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರಚಿತವಾಗಿರುವ ಪ್ರಜಾಪ್ರಭುತ್ವ ಕೇವಲ ಸಾಂವಿಧಾನಿಕ ರಚನೆಯಾಗಿಲ್ಲ ಅದೊಂದು ಚೈತನ್ಯವಾಗಿದೆ. ಅದರಲ್ಲೂ ಭಾರತದಲ್ಲಿ ಪ್ರಜಾಪ್ರಭುತ್ವವು ಕೇವಲ ಸಂವಿಧಾನದ ಅಶಯಗಳನ್ನು ಸಂಗ್ರಹವಾಗಿರದೇ ನಮ್ಮೆಲ್ಲರ ಜೀವನದ ಆಶಯಗಳನ್ನು ಸಂಗ್ರಹಿಸಿದೆ ಎಂದರು.

ಜಿಪಂ ಸಿಇಒ ಮಹಮ್ಮದ್ ಅಕ್ರಮ್ ಅಲಿ ಷಾ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಡಳಿತದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಪ್ರಜಾಪ್ರಭುತ್ವದ ಅಗತ್ಯಗಳನ್ನು ಆಡಳಿತ, ಮಾನವ ಹಕ್ಕುಗಳು, ಕಾನೂನಿನ ನಿಯಮ, ಸ್ವಾತಂತ್ರ್ಯ ಮತ್ತು ಸಮಾನತೆ ಬಗ್ಗೆ ಹೆಚ್ಚು ಪ್ರಚಾರ ನೀಡಿ ಜನರನ್ನು ಜಾಗೃತಗೊಳಿಸುತ್ತದೆ. ಭ್ರಷ್ಟಾಚಾರ, ಅಸಮಾನತೆ ಮತ್ತು ನಿರಂಕುಶಾಧಿಕಾರದಂತಹ ಸಮಸ್ಯೆಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು ಮತ್ತು ಬೆದರಿಕೆಗಳ ಬಗ್ಗೆ ಈ ದಿನ ನಮ್ಮನ್ನು ಎಚ್ಚರಿಸುತ್ತದೆ ಎಂದರು.

ಇದಕ್ಕೂ ಮುನ್ನ ವಿಜಯವಿಠಲ ದೇಗುಲ ಮುಂಭಾಗ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪ್ರಜಾಪ್ರಭುತ್ವ ದಿನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಬಳಿಕ ಬೈಕ್ ಸವಾರರಿಗೆ ಹಸಿರು ನಿಶಾನೆ ಪ್ರದರ್ಶಿಸುವ ಮೂಲಕ ಅಧಿಕೃತವಾಗಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು.

15ಕ್ಕೂ ಹೆಚ್ಚು ಬೈಕ್ ಸವಾರರು ಹಂಪಿಯಿಂದ ಬೆಂಗಳೂರು ವಿಧಾನಸೌಧದವರೆಗೆ ಬೈಕ್ ಜಾಥಾದಲ್ಲಿ ಭಾಗವಹಿಸಿದರು. ವಿಜಯ ವಿಠಲ ದೇವಸ್ಥಾನದಿಂದ ಆರಂಭಗೊಂಡು ಕಮಲಾಪುರ, ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ಕಡ್ಡಿರಾಂಪುರ, ಮಲಪನಗುಡಿ, ಹೊಸಪೇಟೆ ನಗರದ ಕನಕದಾಸವೃತ್ತ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ವೃತ್ತ, ಅಂಬೇಡ್ಕರ್ ವೃತ್ತ, ವಿಎನ್‌ಸಿ ಕಾಲೇಜು, ಸಾಯಿಬಾಬಾ ಸರ್ಕಲ್, ಗುರು ಪಿಯು ಕಾಲೇಜು, ರಾಷ್ಟ್ರೀ ಹೆದ್ದಾರಿ ಮೂಲಕ ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳಿದರು.

ಈ ವೇಳೆ ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ. ಕಾಳೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ