ಎಚ್ಐವಿ ಸೋಂಕಿತರನ್ನು ದೂರ ಸರಿಸುವುದು ಸಲ್ಲ: ಡಾ.ಮಂಜುನಾಥ

KannadaprabhaNewsNetwork | Published : Dec 11, 2024 12:45 AM

ಸಾರಾಂಶ

ಸೋಂಕಿತರೊಂದಿಗೆ ಅಸುರಕ್ಷಿತ ಲೈಂಗಿಕತೆ, ಅವರಿಂದ ರಕ್ತ ಪಡೆದರೆ, ಸಂಸ್ಕರಣೆ ಮಾಡದ ಸೂಜಿ, ಸಿರಿಂಜ್ ಬಳಕೆಯಿಂದ ಅಪಾಯವಿದೆ.

ಕನ್ನಡಪ್ರಭ ವಾರ್ತೆ ಹುನಗುಂದ

ಎಚ್ಐವಿ ಸೋಂಕಿತರನ್ನು ಸಾಮಾಜಿಕವಾಗಿ ದೂರವಿರಿಸುವುದು ಸರಿಯಲ್ಲ. ಅವರ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಹುನಗುಂದ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಮಂಜುನಾಥ ಅಂಕೋಲಕರ ತಿಳಿಸಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಪಂ, ತಾಲೂಕು ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಬಾಗಲಕೋಟೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಎಚ್‌ಐವಿ ಸೋಂಕಿತರೊಂದಿಗೆ ಕುಳಿತು ಊಟ ಮಾಡಿದರೆ ಅಥವಾ ಒಂದೇ ಮನೆಯಲ್ಲಿ ವಾಸವಿದ ಮಾತ್ರಕ್ಕೆ ಸೋಂಕು ಇತರರಿಗೆ ಹರಡುವುದಿಲ್ಲ. ಸೋಂಕಿತರೊಂದಿಗೆ ಅಸುರಕ್ಷಿತ ಲೈಂಗಿಕತೆ, ಅವರಿಂದ ರಕ್ತ ಪಡೆದರೆ, ಸಂಸ್ಕರಣೆ ಮಾಡದ ಸೂಜಿ, ಸಿರಿಂಜ್ ಬಳಕೆಯಿಂದ ಅಪಾಯವಿದೆ. ಸೋಂಕಿತರು ವೈದ್ಯರ ಸಲಹೆಯಂತೆ ಸರಿಯಾದ ಕ್ರಮದಲ್ಲಿ ನಿತ್ಯ ಔಷಧ ಸೇವನೆಯಿಂದ ಹಾಗೂ ಆರೋಗ್ಯಕರ ಜೀವನ ಶೈಲಿ ಅನುಸರಿಸಿದರೆ ಸಾಮಾನ್ಯರಂತೆ ಬದುಕಬಹುದು ಎಂದರು.

ಡಾ.ಹರ್ಷವರ್ಧನ ಸಜ್ಜನ ಮಾತನಾಡಿ, ಏಡ್ಸ್, ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ ಮತ್ತು ಗುಣಾತ್ಮಕ ಜೀವನ ಮಟ್ಟ ಕಡಿಮೆ ಮಾಡುತ್ತದೆ. ಆದ್ದರಿಂದ ಸಾರ್ವಜನಿಕರು ಈ ರೋಗವು ಯಾವ ಮೂಲಗಳಿಂದ ಮತ್ತು ಯಾವ ರೀತಿ ಬರುತ್ತದೆ ಎಂಬುದನ್ನು ತಿಳಿಯಬೇಕು. ಇದರ ಕುರಿತು ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ರೋಗ ಬಂದ ನಂತರ ಪರಿತಪಿಸುವ ಬದಲು ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಚ್ಐವಿ ಬಂದಿದೆ ಎಂದು ತಿಳಿದಾಕ್ಷಣ ಕುಗ್ಗದೇ, ಪರಿಹಾರ ಕಂಡುಕೊಳ್ಳಬೇಕು. ಪ್ರಜ್ಞಾವಂತರಾಗಿ ಬದುಕಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಜಿಲ್ಲಾ ಮೇಲ್ವಿಚಾರಕ ಮಲ್ಲಣ್ಣ ಸುಭೇದಾರ ಮಾತನಾಡಿ, 2030ರ ವೇಳೆಗೆ ಏಡ್ಸ್ ಮುಕ್ತ ಸಮಾಜ ಮಾಡುವ ಗುರಿ ಹೊಂದಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದೆ. ಎಚ್‌ಐವಿ ರೋಗಕ್ಕೆ ಇದುವರೆಗೂ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಸೋಂಕು ಬಾರದಂತೆ ಮುಂಜಾಗ್ರತೆ ವಹಿಸುವುದು ಒಂದೇ ಮನುಕುಲಕ್ಕೆ ಸದ್ಯದ ಮಟ್ಟಿಗೆ ಇರುವ ದಾರಿಯಾಗಿದೆ. ಸೋಂಕಿತರಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಬೆಂಬಲ ದೊರೆತಾಗ ಮಾತ್ರ, ಅವರೂ ಕೂಡ ಸಮಾಜದಲ್ಲಿ ಸಹಜ ಬದುಕು ಕಂಡುಕೊಳ್ಳಲು ಸಾಧ್ಯ. ಸಾರ್ವಜನಿಕರು ಮತ್ತು ಎನ್‌ಜಿಒಗಳು ಒಟ್ಟಾಗಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದರು.

ಕಾಲೇಜು ಪ್ರಾಚಾರ್ಯ ಸಿಕಂದರ ಧನ್ನೂರ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಎಸ್.ಜಿ.ಎಮ್ಮಿ, ಪ್ರೊ.ಬಿ.ಎ.ಕಂಠಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ.ಭದ್ರಣ್ಣವರ, ಡಿ.ಎಂ.ಲೈನದ, ಆಪ್ತ ಸಮಾಲೋಚಕರು, ಪ್ರವೀಣ ಚೂರಿ, ರಾಘವೇಂದ್ರ ಕೊರತಿ, ವಿರೇಶ ಐ.ಬಿ ಸೇರಿದಂತೆ ಇತರರು ಇದ್ದರು.

Share this article