ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟುವುದು ಅಸಾಧ್ಯ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಶೈಲಾ ಆದಿ ಅವರ ತೋಟದಲ್ಲಿ ಸೃಷ್ಟಿ ದೃಷ್ಟಿ ಸಮಾಜ ಸೇವಾ ಸಂಸ್ಥೆಯು ಸೀಗಿ ಹುಣ್ಣಿಮೆಯ ಅಂಗವಾಗಿ ಪೌರಕಾರ್ಮಿಕ ಸನ್ಮಾನ ಕಾರ್ಯಕ್ರಮ ನಡೆಯಿತು.

ಲಕ್ಷ್ಮೇಶ್ವರ: ನಮ್ಮ ಸುತ್ತ ಮುತ್ತಲಿನ ಪ್ರದೇಶವು ಸ್ವಚ್ಛವಾಗಿರಬೇಕಾದಲ್ಲಿ ಪೌರ ಕಾರ್ಮಿಕರ ಸೇವೆ ಉತ್ತಮವಾಗಿ ನಡೆಯುತ್ತಿದೆ ಎಂದು ಅರಿಯುವುದು ಅಗತ್ಯವಾಗಿದೆ ಎಂದು ಪೂರ್ಣಾಜಿ ಕರಾಟೆ ಹೇಳಿದರು.

ಭಾನುವಾರ ಪಟ್ಟಣದ ಶೈಲಾ ಆದಿ ಅವರ ತೋಟದಲ್ಲಿ ಸೃಷ್ಟಿ ದೃಷ್ಟಿ ಸಮಾಜ ಸೇವಾ ಸಂಸ್ಥೆಯು ಸೀಗಿ ಹುಣ್ಣಿಮೆಯ ಅಂಗವಾಗಿ ಪೌರಕಾರ್ಮಿಕ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಮೂಲಕ ನಮ್ಮೆಲ್ಲರ ಆರೋಗ್ಯ ಕಾಪಾಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಪೌರ ಕಾರ್ಮಿಕರು ಕೊರೋನಾ ವೇಳೆಯಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಪಟ್ಟಣದ ಸ್ವಚ್ಛತೆಗೆ ಶ್ರಮಿಸಿದ್ದು ಅನುಪಮವಾಗಿದೆ. ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪೌರಕಾರ್ಮಿಕರು ಇಲ್ಲದೆ ಹೋದಲ್ಲಿ ನಮ್ಮ ಸುತ್ತ ಮುತ್ತಲಿನ ಪ್ರದೇಶವು ಕೊಳಚೆಯಾಗಿ ನಾರುವ ಪ್ರದೇಶವಾಗಿ ಬಿಡುತ್ತದೆ. ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಅವರ ಸೇವೆಗೆ ಅಲ್ಪ ಮಟ್ಟಿನ ಗೌರವ ನೀಡಿದ್ದು ಸ್ವಾಗತಾರ್ಹ ಕಾರ್ಯವಾಗಿದೆ ಎಂದು ಹೇಳಿದರು. ಈ ವೇಳೆ ಸೃಷ್ಟಿ ದೃಷ್ಟಿ ಸಂಸ್ಥೆಯ ರೂವಾರಿ ಸರೋಜಾ ಬನ್ನೂರ ಮಾತನಾಡಿ, ಸೃಷ್ಟಿ ದೃಷ್ಟಿ ಸಂಸ್ಥೆಯು ಹಲವು ವರ್ಷಗಳಿಂದ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಕಾರ್ಯವನ್ನು ಮಾಡುತ್ತಿದೆ. ಅಲ್ಲದೆ ಪರಿಸರ ರಕ್ಷಣೆ, ಸಮಾಜ ಸೇವೆ ಹೀಗೆ ಹಲವು ವಿಧದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇವೆ.ಅದರಲ್ಲೂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸುತ್ತಿರುವುದು ಅತಿಸಂತಸದ ಕಾರ್ಯವಾಗಿದೆ ಎಂದು ಹೇಳಿದರು. ಈ ವೇಳೆ ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಜಯಲಕ್ಷ್ಮೀ ಗಡ್ಡದೇವರಮಠ ಹಾಗೂ ಪೌರ ಕಾರ್ಮಿಕರ ಸಂಘದ ನಿವೃತ್ತ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಮಾತನಾಡಿದರು. ಸುರೇಶ ರಾಚನಾಯಕರ, ಎಂ.ಆರ್.ಪಾಟೀಲ ಸಭೆಯಲ್ಲಿ ಹಾಜರಿದ್ದರು, ಸಮಾರಂಭದಲ್ಲಿ ಶೈಲಾ ಆದಿ, ಎಂ.ಕೆ. ಕಳ್ಳೀಮಠ, ವೆಂಕಟೇಶ ಮಾತಾಡೆ, ಈರಣ್ಣ ಅಂಕಲಕೋಟಿ, ಕಾವ್ಯಾ ಬಹದ್ದೂರದೇಸಾಯಿ, ಪ್ರೊ.ಆರ್.ಬಿ. ಬನ್ನೂರ, ಎನ್.ಆರ್. ಸಾತಪೂತೆ ಇದ್ದರು, ಜಿ.ಎಸ್. ಗುಡಗೇರಿ ಕಾರ್ಯಕ್ರಮ ನಿರ್ವಹಿಸಿದರು. ಶೈಲಾ ಆದಿ ಸ್ವಾಗತಿಸಿದರು.

Share this article