ಅಂಬೇಡ್ಕರ್ ಅಪಮಾನಿಸಿದ ಕಾಂಗ್ರೆಸ್ಸನ್ನು ದಲಿತರು ಬೆಂಬಲಿಸಿದ್ದೇ ವಿಪರ್ಯಾಸ: ಮೂಡ್ನಾಕೂಡು ಪ್ರಕಾಶ್

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ಅಂಬೇಡ್ಕರ್ ಅಪಮಾನಿಸಿದ ಕಾಂಗ್ರೆಸ್ಸನ್ನು ದಲಿತರು ಬೆಂಬಲಿಸಿದ್ದೇ ವಿಪರ್ಯಾಸ ಎಂದು ಮೂಡ್ನಕೂಡು ಪ್ರಕಾಶ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷದ ಪ್ರಧಾನಿ ಹುದ್ದೆ ನೀಡಬಹುದಾಗಿತ್ತು, ಆದರೆ, ಅವರನ್ನು ಸಂಸತ್‌ಗೆ ಬರದಂತೆ ಸೋಲಿಸಿ ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದ್ದು, ಇಂಥ ಪಕ್ಷವನ್ನು ದಲಿತ ಸಮುದಾಯ ಹಾಗೂ ಅಂಬೇಡ್ಕರ್ ಅನುಯಾಯಿಗಳಾದ ಬಲಗೈ ಸಮುದಾಯ ಬೆಂಬಲಿಸಿದ್ದು ವಿಪರ್ಯಾಸ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜ. ೨೭ರಂದು ನಗರದಲ್ಲಿ ನಡೆಯಲಿರುವ ಭೀಮ ಸಮಾವೇಶ ಕುರಿತ ಬಲಗೈ ಸಮುದಾಯದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೬೦ ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅಂಬೇಡ್ಕರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬ ಸ್ಪಷ್ಟ ಚಿತ್ರಣ ನಮ್ಮ ಕಣ್ಮುಂದೆಯೇ ಇದೆ. ಇಂಥ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ ಹಾಗೂ ದಲಿತ ಸಮುದಾಯಕ್ಕೆ ಮಾಡಿರುವ ದ್ರೋಹ ಹಾಗೂ ಕಳೆದ ೧೦ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಅವರನ್ನು ಗೌರಿಸಿದ ರೀತಿ, ಮತ್ತು ವಿಶ್ವ ನಾಯಕನ್ನಾಗಿ ಬಿಂಬಿಸುವ ಮೂಲಕ ಪ್ರಪಂಚವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳು ನಮ್ಮ ಬಲಗೈ ಸಮುದಾಯಕ್ಕೆ ತಿಳಿಸುವ ಅಗತ್ಯ ಬಹಳ ಇದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಈ ಸಮಾವೇಶ ಬಹಳ ಮಹತ್ವದಾಗಿದೆ ಎಂದರು.

ಸಿದ್ದರಾಮಯ್ಯ ಮನುವಾದಿ ಮನಸ್ಥಿತಿಯುಳ್ಳವರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಯಾವ ದೇವಸ್ಥಾನಗಳಿಗೆ ನಿಮ್ಮ ಪ್ರವೇಶ ನಿಷೇಧ ಮಾಡಿದ್ದರು ಅಲ್ಲಿಗೆ ದಲಿತರು ಹೋಗುವುದು ಬೇಡ ಎಂದು ಹೇಳುವ ಮೂಲಕ ತಮ್ಮ ಮನುವಾದಿ ಮನಸ್ಥಿತಿಯನ್ನು ತೋರ್ಪಡಿಸಿದ್ದಾರೆ. ಇದು ಅಸ್ಪಶ್ಯತೆಯನ್ನು ಜೀವಂತವಾಗಿಡುವ ಪ್ರಯತ್ನವಾಗಿದೆ. ಸಮಾಜವಾದಿಯ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಂಥ ಹೇಳಿಕೆಗಳು ದಲಿತರ ವಿರೋಧಿ ಎಂಬುದನ್ನು ಮತ್ತಷ್ಟು ಪುಷ್ಠೀಕರಿಸುತ್ತವೆ ಎಂದರು.

ಚಾಮರಾಜನಗರದಲ್ಲಿ ನಡೆಯಲಿರುವ ಭೀಮ ಸಮಾವೇಶಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ಛಲವಾದಿ ನಾರಾಯಣ ಸ್ವಾಮಿ, ಸಂಸದರಾದ ವಿ. ಶ್ರೀನಿವಾಸಪ್ರಸಾದ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್, ಮಾಜಿ ಶಾಸಕ ಎಸ್. ಬಾಲರಾಜು ಮುಖಂಡರಾದ ನಿವೃತ್ತ ಅರಣ್ಯಾಧಿಕಾರಿ ಡಾ.ಆರ್.ರಾಜು, ಎಸ್. ಮಹದೇವಯ್ಯ, ಕೆ. ಶಿವರಾಂ, ಡಾ. ಮೋಹನ್, ವೆಂಕಟರಮಣಸ್ವಾಮಿ( ಪಾಪು), ಚಿತ್ರ ನಿರ್ದೇಶಕ ಎಸ್. ಮಹೇಂದ್ರ ಸೇರಿದಂತೆ ಅನೇಕ ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಈ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸೋಣ ಎಂದರು.

ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಪರಮಾನಂದ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿರುವ ಜೊತೆಗೆ ಪರಿಶಿಷ್ಟ ಜಾತಿ ಹಾಗೂ ವರ್ಗದ ಸಮುದಾಯವರು ಹೆಚ್ಚಾಗಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳು ಸಹ ಪರಿಶಿಷ್ಟ ಜಾತಿ ಹಾಗೂ ಒಂದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಎಲ್ಲಾ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯವು ಬಿಜೆಪಿಯನ್ನು ಬೆಂಬಲಿಸುವಂತೆ ಮಾಡಲು ಹಾಗೂ ಬಿಜೆಪಿ ಈ ಜನಾಂಗಕ್ಕೆ ನೀಡಿರುವ ಕೊಡುಗೆ ಕುರಿತು ಚರ್ಚೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭೀಮ ಸಮಾವೇಶವನ್ನು ಲೋಕಸಭಾ ಕ್ಷೇತ್ರದ ಜಿಲ್ಲಾ ಕೇಂದ್ರದಲ್ಲಿ ಆಯೋಜನೆ ಮಾಡಲು ವರಿಷ್ಟು ಸೂಚನೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಬಿಜೆಪಿ ಮುಖಂಡರಾದ ಕೂಡ್ಲೂರುಶ್ರೀಧರಮೂರ್ತಿ, ಜಿಲ್ಲಾ ಕಾರ್ಯದರ್ಶಿ ಉತ್ತುವಳ್ಳಿ ಪದ್ಮ, ಕೊಳ್ಳೇಗಾಲ ನಗರಸಭೆ ಸದಸ್ಯ ರಾಮಕೃಷ್ಣ, ಡಾ. ನವೀನ್ ಮೌರ್ಯ, ಜಗದೀಶ್ ಶಂಕನಪುರ, ನಲ್ಲೂರು ಪರಮೇಶ್, ಟಗರಪುರ ರೇವಣ್ಣ, ನಗರಸಭಾ ಮಾಜಿ ಸದಸ್ಯ ಬಸವರಾಜು, ಪ್ರಶಾಂತ್, , ಪರಶಿವಮೂರ್ತಿ, ಕೊಳ್ಳೇಗಾಲಮಂಡಲದ ಪ್ರಕಾಶ್, ಹನೂರು ಕೊತ್ತನೂರು ರಾಜಶೇಖರ್, ಕೊಳ್ಳೇಗಾಲ ಪ್ರಕಾಶ, ಪ್ರಸನ್ನಕುಮಾರ್,ಯುವ ಮುಖಂಡ ಕಾಳಿ ಚರಣ್, ದಡದಹಳ್ಳಿ ಗೋವಿಂದರಾಜು, ಕಾರ್ತಿಕ್ ಮೊದಲಾದವರು.

Share this article