ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ದ್ವಿಚಕ್ರ ವಾಹನಗಳಲ್ಲಿ 9 ತಿಂಗಳಿನಿಂದ ಮೇಲ್ಪಟ್ಟ ಎಲ್ಲ ಮಕ್ಕಳನ್ನು ಕರೆದೊಯ್ಯವಾಗ ಮಕ್ಕಳಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ರಿಪ್ಪನ್‍ಪೇಟೆ ಪಿಎಸ್‍ಐ ಕೆ.ವೈ.ನಿಂಗರಾಜ್ ಹೇಳಿದರು.ರಿಪ್ಪನ್‍ಪೇಟೆಯ ವಿನಾಯಕ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ತೀರ್ಥಹಳ್ಳಿ ಉಪ ವಿಭಾಗ ಹೊಸನಗರ ವೃತ್ತ ನಿರೀಕ್ಷಕರು ಮತ್ತು ರಿಪ್ಪನ್‍ಪೇಟೆ ಪೊಲೀಸ್ ಠಾಣೆ ಸಹಯೋಗದಲ್ಲಿ ಆಟೋ ಚಾಲಕರ ಮತ್ತು ದ್ವಿಚಕ್ರ ವಾಹನ ಚಾಲಕರಿಗಾಗಿ ಆಯೋಜಿಸಲಾದ "ರಸ್ತೆ ಸುರಕ್ಷತಾ ಜನ ಜಾಗೃತಿ ಜಾಥಾ’’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಮಕ್ಕಳ ಜೀವ ಅಮೂಲ್ಯವಾದ್ದು. ಮುಗ್ಧ ಮನಸ್ಸುಗಳ ಕನಸುಗಳ ಬಾಲ್ಯದಲ್ಲಿಯೇ ಚಿವುಟದಿರಿ. ನಿಮ್ಮ ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಸೇಷ್ಟಿ ಹಾರ್ನೆಸ್ ಬಳಸುವುದರ ಬಗ್ಗೆ ರಾಜ್ಯ ಉಚ್ಚನ್ಯಾಯಾಲಯದ ಅದೇಶದಂತೆ ಚಾಲಕರು ಸುರಕ್ಷತಾ ಕ್ರಮಗಳ ಕಡ್ಡಾಯವಾಗಿ ಬಳಕೆ ಮಾಡುವ ಕುರಿತು ಜಾಗೃತಿ ನಡೆಸಲಾಗುತ್ತಿದೆ ಎಂದರು.
ಅಲ್ಲದೆ ದ್ವಿ ಚಕ್ರ ವಾಹನ ಸವಾರರು ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಚಾಲನ ಪರವಾನಗಿ, ವಿಮೆ ಪತ್ರ, ಹೊಗೆ ತಪಾಸಣೆ ದಾಖಲೆಗಳ ಕಡ್ಡಾಯವಾಗಿ ವಾಹನದಲ್ಲಿಡುವುದು ಮತ್ತು ವಾಹನ ಚಲಾವಣೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿ ಚಲಾಯಿಸಿದರೆ ₹10 ಸಾವಿರದಿಂದ ₹25 ಸಾವಿರದ ವರೆಗೆ ದಂಡ ಹಾಕುವುದರೊಂದಿಗೆ ಚಾಲನ ಪರವಾನಗಿ ಅಮಾನತುಪಡಿಸಲಾಗುವುದು. ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ನಿಷೇಧಿಸಿದೆ. ವಾಹನ ಚಾಲನ ವೇಳೆ ಮೊಬೈಲ್ ಬಳಕೆಯೂ ನಿಷೇಧಿಸಲಾಗಿದ್ದು ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುವ ಪೋಷಕರಿಗೆ ರೂ 25 ಸಾವಿರ ದಂಡ ಮತ್ತು ಕೇಸ್ ದಾಖಲಿಸಲಾಗುವುದೆಂದು ಹೇಳಿ ಈ ಎಲ್ಲಾ ಸಾರಿಗೆ ನಿಯಮಗಳ ಕಡ್ಡಾಯವಾಗಿ ಪಾಲಿಸುವಂತೆ ವಾಹನ ಚಾಲಕರಿಗೆ ತಿಳಿವಳಿಕೆ ನೀಡಿದರು.ಈ ಸಂದರ್ಭದಲ್ಲಿ ಎಎಸ್‍ಐ ಮಂಜಪ್ಪ, ಸಿಬ್ಬಂದಿಗಳಾದ ಉಮೇಶ್, ಯೋಗೇಶ್, ರಮೇಶ್, ಮಧುಸೂದನ್, ಶಿವಪ್ಪ ಇನ್ನಿತರರಿದ್ದರು.