-ಪೋಷಣ್, ಮಾತೃವಂದನಾ ಸಪ್ತಾಹ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಸುಶೀಲಾ ಚಾಲನೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಪೌಷ್ಟಿಕ ಆಹಾರವನ್ನು ಕಡ್ಡಾಯವಾಗಿ ಗರ್ಭಿಣಿಯರು ಸೇವನೆ ಮಾಡಬೇಕು ಜೊತೆಗೆ ಮಗುವಿನ ಆರೈಕೆ ಮತ್ತು ಮಗುವಿನ ಆಹಾರ ಸೇವನೆ ಮಾಡಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ನಿರ್ದೇಶಿಸಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ ಪೋಷಣ್ ಅಭಿಯಾನ ಯೋಜನೆಯಡಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು "ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನ "ದ ಅಂಗವಾಗಿ ಗಿಡ ನೆಡುವ ಮೂಲಕ ಜಿಲ್ಲಾಧಿಕಾರಿ ಡಾ.ಸುಶೀಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಕೂಡ ರಕ್ತಹೀನತೆಯ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸುವ ಕಾರ್ಯವನ್ನು ಮಾಡುವುದು ಮತ್ತು ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸುವುದರ ಕುರಿತು ಪ್ರತಿ ಅಂಗನವಾಡಿಯಲ್ಲಿ ಗರ್ಭಿಣಿ, ಬಾಣಂತಿಯರ ಸಭೆಯನ್ನು ಏರ್ಪಡಿಸಿ ಅದರ ಪ್ರಾಮುಖ್ಯತೆ ತಿಳಿಸುವ ಕೆಲಸ ಮಾಡಬೇಕುಅಪೌಷ್ಟಿಕತೆ ಮಕ್ಕಳನ್ನು ಪೋಷಣೆ ಮಾಡುವುದು ಇದರ ಮುಖ್ಯ ಉದ್ದೇಶ. ಜಿಲ್ಲೆಯ ಎಲ್ಲ ಪಂಚಾಯಿತಿ ಮಟ್ಟದಲ್ಲಿ ಮಾಡುತ್ತಿದ್ದು, ಗ್ರಾಮ ಮಟ್ಟದಲ್ಲಿನ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಸರಿಯಾದ ಚಿಕಿತ್ಸೆ ನೀಡುವುದಾಗಿದೆ. ಅವರನ್ನು ಪೌಷ್ಟಿಕಯುಕ್ತರನ್ನಾಗಿ ಮಾಡುವ ಗುರಿ ಸಾಧಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಅಂಗನವಾಡಿ ಕೇಂದ್ರದ ಫಲಾನುಭವಿ ಐವರು ಗರ್ಭಿಣಿಯರಿಗೆ ಸಮುದಾಯ ಆಧಾರಿತ ಚಟುವಟಿಕೆಯ ಭಾಗವಾದ ಸೀಮಂತ ಕಾರ್ಯಕ್ರಮ ಮತ್ತು ಆರು ತಿಂಗಳು ಪೂರೈಸಿದ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನಕ್ಕೆ ಚಾಲನೆ” ಅನಿಮಿಯಾ ಮುಕ್ತ ಯಾದಗಿರಿಯನ್ನಾಗಿ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಯಿತು.ಸಂದರ್ಭದಲ್ಲಿ ಮರಿಯಪ್ಪ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ ಪಾಟೀಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಹೆಚ್.ಟಿ ಮಂಜುನಾಥ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಎಂ. ಎಸ್. ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಬೆಂಡಿಗೇರಿ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಿಂದ ಡಾ.ರಾಜಕುಮಾರ್ ಎಂ ಮತ್ತು ಡಾ. ಶಶಿಕಲಾ ಎಸ್.ರುಳಿ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕರು ಯಲ್ಲಪ್ಪ ಕೆ., ಪೋಷಣ್ ಅಭಿಯಾನ್ ಯೋಜನೆಯ ಜಿಲ್ಲಾ ಸಂಯೋಜಕರು ಮನಿಷ್, ಹಾಗೂ, ಶಿಶು ಅಭಿವೃದ್ಧಿ ಯೋಜನೆ ಯಾದಗಿರಿಯ ಮೇಲ್ವಿಚಾರಕಿಯರು ಮತ್ತು ಸಿಬ್ಬಂದಿ ಹಾಜರಿದ್ದರು.
------ಫೋಟೊ: 3ವೈಡಿಆರ್8: ಯಾದಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ ಪೋಷಣ್ ಅಭಿಯಾನ ಯೋಜನೆಯಡಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಸುಶೀಲಾ ಉದ್ಘಾಟಿಸಿದರು.