ಅನುದಾನ ಬಳಕೆ ವಾರ್ಷಿಕ ಲೆಕ್ಕಪತ್ರ ಇಡೋದು ಕಡ್ಡಾಯ

KannadaprabhaNewsNetwork | Published : May 21, 2025 12:01 AM
ಬಾಗಲಕೋಟೆ ನಗರಸಭೆ ನೂತನ ಸಭಾಭವನದಲ್ಲಿ ನಗರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗಿನ ಸಮಾಲೋಚನಾ ಸಭೆ ಜರುಗಿತು.
Follow Us

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಅನುದಾನದ ಖರ್ಚು ವೆಚ್ಚಗಳಿಗೆ ವಾರ್ಷಿಕ ಲೆಕ್ಕಪತ್ರ ಇಡುವುದು ಕಡ್ಡಾಯವಾಗಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ. ನಾರಾಯಣ ಸ್ವಾಮಿ ಹೇಳಿದರು.

ನಗರಸಭೆ ನೂತನ ಸಭಾಭವನದಲ್ಲಿ ನಗರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಿಗೆ ವಿವಿಧ ಅನುದಾನದ ಹಂಚಿಕೆ ಮಾಡಲಾಗಿದ್ದು, ಈ ಅನುದಾನದ ಬಳಕೆ, ಸಮಸ್ಯೆಗಳಿಗೆ ಸಲಹೆ ಪಡೆದು ಸರ್ಕಾರಕ್ಕೆ ಶಿಫಾರಸು ಮಾಡುವ ನಿಟ್ಟಿನಲ್ಲಿ ಆಯೋಗದ ವತಿಯಿಂದ ವಿಭಾಗವಾರು ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಆರ್ಥಿಕ ಸ್ಥಿತಿಗತಿ, ಅದರ ಕಾರ್ಯಚಟುವಟಿಕೆಗಳ ಸಂಪನ್ಮೂಲಗಳ ಕ್ರೋಡೀಕರಣ, ಹಂಚಿಕೆ ಮತ್ತು ಮೂಲಸೌಕರ್ಯ, ಸೇವೆ ಒದಗಿಸುವಲ್ಲಿ ತಾಂತ್ರಿಕ ಕೌಶಲ್ಯದ ಸಾಮರ್ಥ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಯೋಗ ಪರಿಶೀಲನೆ ನಡೆಸುವುದರ ಜೊತೆಗೆ ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಸಬೇಕಾದ ವರದಿಗೆ ಅನುಗುಣವಾಗಿ ಆಡಳಿತ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಸಲಹೆ ಸೂಚನೆ ಪಡೆಯುತ್ತಿದೆ. ಈ ನಿಟ್ಟಿನಲ್ಲಿ 16ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿದೆ. ರಾಜ್ಯಕ್ಕೆ ಅನುದಾನ ಕೊರತೆ ಇದ್ದಲ್ಲಿ ವರದಿಯಲ್ಲಿ ನೀಡುವ ಅಗತ್ಯತೆ ಇದೆ ಎಂದು ಹೇಳಿದರು.

ನಗರಸಭೆ ವ್ಯಾಪ್ತಿಯಲ್ಲಿ 15 ಕಾರ್ಯಕ್ರಮಗಳು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ 29 ಕಾರ್ಯಕ್ರಮ ಬರುತ್ತವೆ. ಯಾವ ಉದ್ದೇಶಕ್ಕೆ ಅನುದಾನ ಬಿಡುಗಡೆಯಾಗಿರುತ್ತದೆ ಅದೇ ಉದ್ದೇಶಕ್ಕೆ ವಿನಿಯೋಗಿಸುವ ಮೂಲಕ ಅನುದಾನದ ಸದ್ಬಳಕೆ ಮಾಡಿಕೊಂಡು ಪ್ರತಿಯೊಂದು ಕಾರ್ಯಕ್ರಮ ಅನುಷ್ಠಾನಗೊಳಿಸಿದಕ್ಕೆ ಲೆಕ್ಕಪತ್ರ ಇಡುವುದು ಕಡ್ಡಾಯವಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಲೆಕ್ಕ ಪರಿಶೋಧನೆಗೆ ಒಳಪಡಿಸದೇ ಕೇಂದ್ರಕ್ಕೆ ವರದಿ ನೀಡಿದಲ್ಲಿ ಮುಂದಿನ ಅನುದಾನ ತಡೆಹಿಡಿಯುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಂದು ಅನುದಾನ ಬಳೆಕೆಗೆ ಲೆಕ್ಕಪತ್ರ ಇಡುವುದು ಕಡ್ಡಾಯವಾಗಿರುತ್ತದೆ ಎಂದರು.

ನಗರಸಭೆ ಪೌರಾಯುಕ್ತ ವಾಸಣ್ಣ ಆರ್. ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮಾಹಿತಿ, ರಾಜಸ್ವ ಕ್ರೋಡೀಕರಣ, ಕರ ವಸೂಲಿ ಮತ್ತು ಬಾಕಿ ವಿವರ, ಆಯವ್ಯವ ಖರ್ಚುವೆಚ್ಚ, ರಾಜ್ಯ ಹಣಕಾಸು ಆಯೋಗದಿಂದ ಬಿಡುಗಡೆಯಾದ ವೇತನಾನುದಾನ, ವಿದ್ಯುತ್ ಅನುದಾನ, ತೆರಿಗೆ ವಸೂಲಾತಿಗೆ ಕೈಗೊಂಡ ಕ್ರಮ, ತೆರಿಗೆ ಪರಿಷ್ಕರಣೆ ಸೇರಿದಂತೆ ಇತರೆ ಎಲ್ಲ ಮಾಹಿತಿಯನ್ನು ಸಮಾಲೋಚನಾ ಸಭೆಗೆ ವಿವರ ನೀಡಿದರು.

ನಂತರ ಆಯೋಗದ ಅಧ್ಯಕ್ಷರು ಚುನಾಯಿತಿ ಪ್ರತಿನಿಧನಗಳೊಂದಿಗೆ ಸಮಾಲೋಚನೆ ನಡೆಸಿ ಸಿಬ್ಬಂದಿ ಕೊರತೆ, ಕುಡಿಯುವ ನೀರು, ಮೂಲ ಸೌಲಭ್ಯಗಳ ಕೊರತೆ, ಹೆಚ್ಚಿನ ಹಾಗೂ ನಿಗದಿತ ಅವಧಿಯಲ್ಲಿ ಅನುದಾನ ಬಿಡುಗಡೆ, ನಗರಸಭೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಚುನಾಯಿತ ಸದಸ್ಯ ಗೌರವಧನ ಹೆಚ್ಚಳ ಕುರಿತು ಇತರೆ ಸಮಸ್ಯೆ ಹಾಗೂ ಬೇಡಿಕೆ ತಿಳಿದುಕೊಂಡರು. ಈ ಬಗ್ಗೆ ವರದಿಯ ಮೂಲಕ ಸರಕಾರದ ಗಮನಕ್ಕೆ ತರುವ ಕೆಲಸ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮಹಮ್ಮದ್‌ ಸನಾವುಲ್ಲಾ, ಆರ್.ಎಸ್. ಪೋಡೆ, ಆಯೋಗದ ಸಮಾಲೋಚಕರಾದ ಎಂ.ಕೆ. ಕೆಂಪೇಗೌಡ, ಸಿ.ಜಿ. ಸುಪ್ರಸನ್ನ, ಅದ್ಯಕ್ಷರ ಆಪ್ತ ಕಾರ್ಯದರ್ಶಿ ಕೆ. ಯಾಲಕ್ಕಿಗೌಡ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸುರಕೋಡ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.