ನಮ್ಮ ಜ್ಞಾನ ಪದ್ಧತಿಗೆ ತಂತ್ರಜ್ಞಾನ ಬೆರೆತಾಗ ಹೆಚ್ಚು ಅನುಕೂಲ: ಡಾ.ಕೆ.ಉಲ್ಲಾಸ್‌ ಕಾಮತ್‌

KannadaprabhaNewsNetwork |  
Published : Jun 18, 2025, 11:48 PM IST
1 | Kannada Prabha

ಸಾರಾಂಶ

ಪ್ರಸ್ತುತ ದಿನಮಾನದಲ್ಲಿ ಭಾರತೀಯ ಜ್ಞಾನ ಪದ್ಧತಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬೆಸೆಯುವ ಅಗತ್ಯವಿದೆ. ಭಾರತೀಯ ಜ್ಞಾನ ಪರಂಪರೆಗೆ ಬಹಳ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಜ್ಞಾನ ವಿಸ್ತಾರವಾಗಿದೆ. ರಾಮಯಾಣ, ಮಹಾಭಾರತ, ವೇದಗಳು, ಗೀತೆ ಮುಂತಾದ ಗ್ರಂಥಗಳಲ್ಲಿ ನಮ್ಮ ಜ್ಞಾನದ ಮಹತ್ವ ಅರಿಯಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ಉನ್ನತವಾದ ನಮ್ಮ ಜ್ಞಾನ ಪದ್ಧತಿಗೆ ಈಗಿನ ಆಧುನಿಕ ತಂತ್ರಜ್ಞಾನ ಬೆಸುಗೆಗೊಳಿಸಿದರೆ ಭವಿಷ್ಯದ ಪಿಳೀಗೆಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಿದಂತೆ ಆಗುತ್ತದೆ ಎಂದು ಬೆಂಗಳೂರಿನ ಸಾಮಿ-ಸಬಿನ್ಸಾ ಗ್ರೂಪ್ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಅಭಿಪ್ರಾಯಪಟ್ಟರು.

ಶಿವರಾತ್ರೀಶ್ವರನಗರದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸ್ಕೂಲ್ ಆಫ್ ಲೈಫ್ ಸೈನ್ಸ್‌ ಸಭಾಂಗಣದಲ್ಲಿ ಆಯೋಜಿಸಿರುವ ಭಾರತೀಯ ಜ್ಞಾನ ಪದ್ಧತಿ ಕುರಿತ ಮೂರು ದಿನಗಳ ಬೋಧನಾ ಅಭಿವೃದ್ಧಿ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನದಲ್ಲಿ ಭಾರತೀಯ ಜ್ಞಾನ ಪದ್ಧತಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬೆಸೆಯುವ ಅಗತ್ಯವಿದೆ. ಭಾರತೀಯ ಜ್ಞಾನ ಪರಂಪರೆಗೆ ಬಹಳ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಜ್ಞಾನ ವಿಸ್ತಾರವಾಗಿದೆ. ರಾಮಯಾಣ, ಮಹಾಭಾರತ, ವೇದಗಳು, ಗೀತೆ ಮುಂತಾದ ಗ್ರಂಥಗಳಲ್ಲಿ ನಮ್ಮ ಜ್ಞಾನದ ಮಹತ್ವ ಅರಿಯಬಹುದು ಎಂದರು.

ಅಲ್ಲದೆ ಇನ್ನಿತರ ಕವಲುಗಳಾದ ಆರೋಗ್ಯ, ಮಾನವೀಯ ಮೌಲ್ಯಗಳಲ್ಲೂ ಕೂಡಾ ನಮ್ಮ ಪದ್ಧತಿ ಕಾಣಬಹುದು. ಆಯುರ್ವೇದ, ಹೋಮಿಯೋಪತಿ ಮುಂತಾದ ವೈದ್ಯ ಪದ್ಧತಿಗಳು ಆಗಿನ ಕಾಲದಲ್ಲೇ ಬಹಳ ಪ್ರಾಮುಖ್ಯತೆ ಗಳಿಸಿದ್ದವು. ಈಗಿನಂತೆ ತಂತ್ರಜ್ಞಾನದ ಫಲವಾಗಿ ಉದಯಿಸಿರುವ ಸಾಮಾಜಿಕ ಮಾಧ್ಯಮಗಳು ಪ್ರಾಚೀನ ಭಾರತದಲ್ಲಿ ಇಲ್ಲದೇ ಇರುವುದರಿಂದ ಆಗೀನ ಕಾಲದ ಜನರು ಬಹಳ ಸುಖವಾಗಿದ್ದರು. ತಮ್ಮ ಜ್ಞಾನ ಬಳಸಿಕೊಂಡು ವ್ಯವಸಾಯದಲ್ಲಿ ಉತ್ತಮವಾದ ಬೆಳೆಯನ್ನು ಬೆಳೆಯುತ್ತಿದ್ದರು. ಆರೋಗ್ಯವಾಗಿ ಜೀವನ ಸಾಗಿಸುತ್ತಿದ್ದರು. ಕಾಲ ಕಳೆದಂತೆ ಒಂದು ಆಸ್ತಿಯೂ ನಾಲ್ಕು-ಐದು ಭಾಗವಾಗಿ ಹೋಗಿದೆ. ಪ್ರಸ್ತುತ ಭಾರತದಲ್ಲಿ ಒಬ್ಬ ವ್ಯಕ್ತಿಗೆ ಸರಾಸರಿ ಆಸ್ತಿ ಇರುವುದು ಒಂದೂವರೆ ಎಕರೆ ಮಾತ್ರ. ಸರ್ಕಾರಿ ವರದಿಯ ಅಂಕಿ-ಸಂಖ್ಯೆಗಳ ಪ್ರಕಾರ ಒಂದು ಎಕರೆಯ ವಾರ್ಷಿಕ ಆದಾಯ ಇರುವುದು 10 ಸಾವಿರ ಮಾತ್ರ ಎಂದರು.

ವಾತಾವರಣ ಈಗಿರುವಾಗ ರೈತರು ವ್ಯವಸಾಯದಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ತುಂಡು ಇಡುವಳಿಯಲ್ಲೂ ಜೀವನ ಸಾಗಿಸುವ ಮಟ್ಟಿಗೆ ಆದಾಯ ಗಳಿಸಿಕೊಳ್ಳಬಹುದು. ಇದಲ್ಲದೇ ಆರ್ಥಿಕತೆ, ಆರೋಗ್ಯ ಕ್ಷೇತ್ರ, ಔಷಧ ವಲಯ ಸೇರಿದಂತೆ ಇನ್ನೂ ಹಲವು ಮೂಲಭೂತ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ ಎಂದರು.

ಭಾರತದ ಆರ್ಥಿಕತೆಯು ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ದಿನದಲ್ಲಿ 3ನೇ ಸ್ಥಾನಕ್ಕೆ ಬರುತ್ತದೆ. ಗಣಿತದ ತತ್ವದ ಪ್ರಕಾರ ಬೆಳವಣಿಗೆ ನಡೆಯುತ್ತದೆ. ಆದರೆ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣದ ಪ್ರಮಾಣ ಹೆಚ್ಚಳವಾಗಿಲ್ಲ. ಖಾತೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಏಕೆಂದರೆ ದೇಶದ ಪ್ರಗತಿಯೊಂದಿಗೆ ನಾವು ಬೆಳೆಯುತ್ತಿಲ್ಲ. ಆದ್ದರಿಂದ ನಾವು ಬೆಳವಣಿಗೆಯಾಗಬೇಕು ಎಂದರೆ ಸಂಬಳಕ್ಕಾಗಿ ಕೆಲಸ ಎನ್ನುವ ಧೋರಣೆಯನ್ನು ನಮ್ಮ ಮನಸ್ಸಿನಿಂದ ಕಿತ್ತುಹಾಕಿ, ಅದೇ ಜಾಗದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಾಗ ನಾವು ಕೂಡಾ ಬೆಳೆವಣಿಗೆ ಕಾಣಬಹುದು. ಇದರಿಂದ ದೇಶದ ಜಿಡಿಪಿ ಇನ್ನೂ ಹೆಚ್ಚಾಗುತ್ತದೆ ಎಂದರು.

ದೇಶದಲ್ಲಿ ಪ್ರತಿವರ್ಷ 21 ಲಕ್ಷ ಪದವಿಧರರು ಕಾಲೇಜುಗಳಿಂದ ಹೊರ ಬರುತ್ತಿದ್ದಾರೆ. ಆದರೆ ಇವರಲ್ಲಿ ಬೆರಳಿಣಿಕೆಯಷ್ಟು ಮಂದಿಗೆ ಮಾತ್ರ ಕೆಲಸ ಸಿಗುತ್ತಿದೆ. ಪದವಿ ನಂತರ ಮುಂದೇನು ಎನ್ನುವ ಆಲೋಚನೆಯಲ್ಲೇ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಈಗಂತೂ ಕೆಲಸಕ್ಕಾಗಿ ಬೇರೆಯವರ ಜತೆ ಸ್ಪರ್ಧೆ ಮಾಡಬೇಕಿಲ್ಲ. ಬದಲಾಗಿ ತಂತ್ರಜ್ಞಾನ, ಕೌಶಲತೆ ಜತೆ ಸ್ಪರ್ಧಿಸಬೇಕಿದೆ. ಆದ್ದರಿಂದ ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ತಂತ್ರಜ್ಞಾನ ಹಾಗೂ ಕೌಶಲತೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಅವರು ತಿಳಿಸಿದರು.

ಮನುಷ್ಯ ಮಾಡುವ ಕೆಲಸವನ್ನು ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನಗಳು ತಮ್ಮ ತೆಕ್ಕೆಗೆ ತಗೆದುಕೊಳ್ಳುತ್ತಿವೆ. ನಾವು ಕೆಲಸ ಮಾಡಬೇಕಾದರೆ ಕಾಲ-ಕಾಲಕ್ಕೆ ಟೀ ಬೇಕು, ಮಧ್ಯದಲ್ಲಿ ವಿಶ್ರಾಂತಿ ಬೇಕು. ವಿವಿಧ ಸೌಲಭ್ಯ, ಆರೋಗ್ಯ ಸೌಕರ್ಯ, ವಿಮೆ ಎಲ್ಲವನ್ನೂ ನೀಡಬೇಕು. ಇಂತಿಷ್ಟೆ ಸಮಯ ಎಂದು ನಿಗದಿಗೊಳಿಸಬೇಕು. ಆದರೆ ತಂತ್ರಜ್ಞಾನದಲ್ಲಿ ಇದ್ಯಾವುದು ಇರುವುದಿಲ್ಲ. ಯಂತ್ರಕ್ಕೆ ಪ್ರೋಗ್ರಾಂ ಅಳವಡಿಸಿಬಿಟ್ಟರೆ ಸಾಕು. ಅದು ತನಗೆ ವಹಿಸಿದ ಕೆಲಸವನ್ನು ಮಾಡುತ್ತದೆ. ಈಗಾಗಲೇ ದೊಡ್ಡ-ದೊಡ್ಡ ಕಂಪೆನಿಗಳು ಸಾವಿರಾರು ಕೆಲಸಗಾರರನ್ನು ತಗೆದು ಹಾಕಿವೆ. ಇದನ್ನು ಗಮನಿಸಿದರೇ ಮುಂದೆ ಉದಾಸೀನತೆ ತೋರದೆ ತಂತ್ರಜ್ಞಾನದಲ್ಲಿ ತಮ್ಮತನವನ್ನು ಅಳವಡಿಸಿಕೊಂಡವರಿಗೆ ಭವಿಷ್ಯ ಇರುತ್ತದೆ ಎಂದರು.

ದೆಹಲಿಯ ಎನ್‌ಎಲ್‌ಎಲ್ ಸಂಸ್ಥೆಯ ಆಪ್ತ ಸಲಹೆಗಾರ ಡಾ.ಎಸ್. ನಟೇಶ್, ಜೆಎಸ್‌ಎಸ್- ಎಎಚ್‌ಇಆರ್ ಕುಲಸಚಿವ ಡಾ.ಬಿ. ಮಂಜುನಾಥ್, ಡೀನರಾದ ಡಾ.ಕೆ.ಎ. ರವೀಶ್, ಡಾ.ಎಚ್.ಕೆ. ಮಮತಾ, ಸಂಯೋಜಕಿ ಡಾ.ಕೆ. ಪುಷ್ಪಲತಾ, ಸಂಘಟನಾ ಅಧ್ಯಕ್ಷೆ ಡಾ.ಪಿ. ಅಶ್ವಿನಿ, ಸಂಘಟನಾ ಕಾರ್ಯದರ್ಶಿ ಡಾ. ದಿವ್ಯಾ ಎ. ಕುರ್ತುಕೋಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಮರು ಡಾಂಬರೀಕರಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ
ಸಕಲೇಶಪುರ ಪ್ರೆಸ್‌ಕ್ಲಬ್‌ ಅಧ್ಯಕ್ಷರಾಗಿ ಕಾಂತರಾಜ್‌ ಹೊನ್ನೇಕೋಡಿ ಆಯ್ಕೆ