ಲಕ್ಷ್ಮೇಶ್ವರ: ಯುವಕರು ಬೈಕ್ ಸವಾರಿ ಮಾಡುವ ವೇಳೆ ಹುಚ್ಚು ಸಾಹಸಗಳನ್ನು ಮಾಡುವ ಮೂಲಕ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವ ಕಾರ್ಯ ಮಾಡುತ್ತಾರೆ. ಆದ್ದರಿಂದ ರಸ್ತೆ ಸುರಕ್ಷತೆಗಳ ಬಗ್ಗೆ ಹೆಚ್ಚು ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಗದಗನ ಚಿರಾಯು ಆಸ್ಪತ್ರೆಯ ನಿರ್ದೇಶಕರಾದ ಡಾ. ಗುರುಪ್ರಸಾದ ಹೇಳಿದರು. ಪಟ್ಟಣದ ಕಮಲಾ ವೆಂಕಪ್ಪ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗ, ಎನ್‌ಎಸ್‌ಎಸ್ ಘಟಕ, ಯುಬಿಎ ಘಟಕ ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತಾ ಜಾಗೃತಿ ಹಾಗೂ ಅರಿವು ಕಾರ್ಮಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ತಮ್ಮ ವಾಹನಗಳನ್ನು ಬೇಕಾ ಬಿಟ್ಟಿ ಚಾಲನೆ ಮಾಡುವ ಮೂಲಕ ಅಪಘಾತಕ್ಕೆ ಕಾರಣವಾಗುತ್ತವೆ. ಈ ಅಪಘಾತಗಳು ಯುವಕರ ಜೀವಕ್ಕೆ ಕುತ್ತು ತರುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಯುವಕರು ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗೃತೆ ವಹಿಸುವುದು ಅಗತ್ಯವಾಗಿದೆ. ಯಾವುದೋ ಆವೇಶಕ್ಕೆ ಒಳಗಾಗಿ ವಾಹನ ಚಾಲನೆ ಮಾಡುವುದು ಅಥವಾ ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಕೆ ಮಾಡುವುದರಿಂದ ಹಾಗೂ ಹೆಲ್ಮೇಟ್ ಧರಿಸದ ಕಾರಣ ಸಾವು ಸಂಭವಿಸುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಅಪಘಾತ ತಡೆಯುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು. ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಐಎಎಂ ಉಪಾಧ್ಯಕ್ಷ ಡಾ. ಪವನ ಪಾಟೀಲ, ಗದಗ ಜಿಲ್ಲಾ ಐಎಎಂ ಅಧ್ಯಕ್ಷ ಡಾ.ಜೆ.ಎಸ್. ಪಲ್ಲೆದ ಹಾಜರಿದ್ದರು. ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಸ್ವಪ್ನಾ ಚನ್ನಪ್ಪಗೌಡರ ಸ್ವಾಗತಿಸಿದರು. ಎನ್‌ಎಸ್ಎಸ್ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ನಿರೂಪಿಸಿದರು. ಡಾ.ಶಿವರಾಜ ಗೌಡರ ವಂದಿಸಿದರು.