ಹನುಮಸಾಗರ: ಯುವ ಸಮುದಾಯದಲ್ಲಿ ಕಾನೂನಿನ ಬಗ್ಗೆ ಸಾಮಾನ್ಯ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದ್ದು, ಕಾನೂನು ಜ್ಞಾನವು ಯುವಕರ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ ಆರ್.ಹೇಳಿದರು.
ತಂದೆ–ತಾಯಿ ತಮ್ಮ ಮಕ್ಕಳ ಮೇಲೆ ಇಟ್ಟುಕೊಂಡಿರುವ ಆಶಾಭಾವನೆ ಗೌರವಿಸಿ,ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಜವಾಬ್ದಾರಿ ಯುವಕರ ಮೇಲಿದೆ ಎಂದು ತಿಳಿಸಿದರು.
ಯುವಕರ ಮನಸ್ಸು ಹಾಗೂ ಚಿಂತನೆ ಸದೃಢವಾಗಿದ್ದರೆ ಮಾತ್ರ ಜೀವನದಲ್ಲಿ ಸದಾ ಉತ್ಸಾಹದಿಂದ ಮುನ್ನಡೆಯಲು ಸಾಧ್ಯ. ಉತ್ಸಾಹವೇ ಯುವಶಕ್ತಿಯ ಮೂಲವಾಗಿದ್ದು, ಅದು ಕಳೆದು ಹೋದರೆ ಜೀವನದ ಗುರಿ ಮಂಕಾಗುತ್ತವೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮೊಬೈಲ್ ಬಳಕೆಗೆ ಅತಿಯಾಗಿ ಒಳಗಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಹೆಚ್ಚಿನ ಸಮಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾಡುತ್ತಿರುವುದರಿಂದ ಅಧ್ಯಯನದ ಮೇಲೆ ಗಮನ ಕಡಿಮೆಯಾಗುತ್ತಿದ್ದು, ಇದು ದೇಶದ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಹಿನ್ನಡೆ ಉಂಟು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವಕರು ಸದಾ ಚಟುವಟಿಕೆಯಿಂದ ಇರಬೇಕು. ಜೀವನದ ದಾರಿ ಹುಡುಕುತ್ತಾ ಸಾಗುವ ಸಂದರ್ಭದಲ್ಲಿ ಸವಾಲುಗಳು ಎದುರಾದರೂ ಧೈರ್ಯದಿಂದ ಮುನ್ನಡೆಯಬೇಕು. ಗುಟ್ಕಾ,ಸಿಗರೇಟ್, ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಗೆ ಯುವಕರು ಬಲಿಯಾಗುತ್ತಿರುವುದು ವೈಯಕ್ತಿಕ ಜೀವನ ಮಾತ್ರವಲ್ಲ, ದೇಶದ ಪ್ರಗತಿಗೂ ಮಾರಕವಾಗಿದೆ ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ವಕೀಲ ಪಿ.ರಮೇಶ ಮ್ಯಾತ್ರಿ ಪೋಕ್ಸೊ ಕಾಯ್ದೆ ಕುರಿತು ವಿವರವಾಗಿ ಮಾತನಾಡಿ, ಅಪ್ರಾಪ್ತ ಮಕ್ಕಳ ರಕ್ಷಣೆಗೆ ಈ ಕಾಯ್ದೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಮಾತನಾಡಿ, ಶಾಲಾ–ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿ ನೀಡುವುದು ಅತ್ಯಂತ ಅವಶ್ಯಕ. ಇದರಿಂದ ವಿದ್ಯಾರ್ಥಿಗಳು ತಮ್ಮ ಹಕ್ಕುಗಳು ಹಾಗೂ ಕರ್ತವ್ಯ ಅರಿತುಕೊಂಡು ಜವಾಬ್ದಾರಿಯುತ ನಾಗರಿಕರಾಗುತ್ತಾರೆ ಎಂದರು.ಕಾಲೇಜಿನ ಪ್ರಾಚಾರ್ಯ ಭೀಮಪ್ಪ ಗೊಲ್ಲರ ಅಧ್ಯಕ್ಷತೆ ವಹಿಸಿದ್ದರು, ಪಿಎಸ್‌ಐ ಧನಂಜಯ ಹಿರೇಮಠ, ವಕೀಲ ಶಶಿಧರ ಶೆಟ್ಟರ್, ವಿಜಯಮಹಾಂತೇಶ ಕುಷ್ಟಗಿ, ಶಿವಕುಮಾರ ಚಿನಿವಾಲರ, ಲಿಂಗರಾಜ ಅಗಸಿಮುಂದಿನ, ಆನಂದ ಡೊಳ್ಳಿನ, ಉಪನ್ಯಾಸಕ ಲಕಪತಿ ರಾಠೋಡ, ಸಿಆರ್ ಪಿ, ಲೆಂಕಪ್ಪ ವಾಲಿಕಾರ, ಉಪನ್ಯಾಸಕರು, ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.