ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿಕೆ
ಅಪಾರ ಯುವ ಸಂಪತ್ತು ಹೊಂದಿರುವ ಭಾರತದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಯ ಕಂದಕವನ್ನು ನಿವಾರಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಷ್ಟು ಬೃಹತ್ ಯುವ ಸಂಪತ್ತನ್ನು ಹೊಂದಿರುವ ದೇಶಗಳು ವಿರಳ. ದೇಶದಲ್ಲಿ 1,500 ವಿಶ್ವವಿದ್ಯಾಲಯಗಳು ಹಾಗೂ 50 ಸಾವಿರಕ್ಕೂ ಅಧಿಕ ಕಾಲೇಜುಗಳಿದ್ದು, 52 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಷ್ಟೊಂದು ದೊಡ್ಡ ಯುವಶಕ್ತಿಯಿದ್ದರೂ ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸಲು ಸಾಧ್ಯವಾಗದಿರುವುದು ವಿಷಾದನೀಯ. ಆರ್ಥಿಕ ಮತ್ತು ಶೈಕ್ಷಣಿಕ ಅಸಮಾನತೆಯನ್ನು ತೊಡೆದುಹಾಕಲು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ. ಸಮಾಜದಲ್ಲಿನ ಸಮಸ್ಯೆಗಳನ್ನು ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ಇರಬಾರದು. ಸಾಮಾಜಿಕ ಕಂದಕವನ್ನು ನಿವಾರಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟರು.ಆರೋಗ್ಯ ಕ್ಷೇತ್ರ ಇಂದು ದೊಡ್ಡ ವ್ಯಾಪಾರದ ಕೇಂದ್ರವಾಗುತ್ತಿರುವುದು ಕಳವಳಕಾರಿ. ಚಿಕಿತ್ಸೆಯ ಹೆಸರಿನಲ್ಲಿ ಜನರಿಂದ ಅಪಾರ ಹಣ ವಸೂಲಿ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುತ್ತಿರುವುದು ಮಹತ್ವದ ಕಾರ್ಯ. ಇದಕ್ಕಿಂತ ದೊಡ್ಡ ಸಮಾಜಸೇವೆ ಮತ್ತೊಂದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾದಾನ ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ; ಧಾರ್ಮಿಕ ಸಂಸ್ಥೆಗಳು, ಮಠಗಳು ಹಾಗೂ ವಿವಿಧ ಸಂಘಟನೆಗಳೂ ಶಿಕ್ಷಣದ ವಿಸ್ತರಣೆಗೆ ಕೈಜೋಡಿಸಬೇಕು ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ವಿವೇಚನೆ ಬೆಳೆಸಲು ಸರಸ್ವತಿಯ ಅನುಗ್ರಹ ಅಗತ್ಯ:
ಈ ಸಂದರ್ಭದಲ್ಲಿ ಮಾತನಾಡಿದ ಋತ್ವಿಜ ವಿದ್ವಾನ್ ವಿಕ್ರಮ್ ಭಟ್, ವಿವೇಚನಾಶಕ್ತಿಯನ್ನು ಕಳೆದುಕೊಂಡರೆ ಮಾನವ ಜನ್ಮದ ಸಾರ್ಥಕತೆ ಕುಂದುತ್ತದೆ. ಮನುಷ್ಯನಲ್ಲಿನ ಜಡತ್ವವನ್ನು ದೂರಮಾಡಿ, ವಿವೇಕವನ್ನು ಜಾಗೃತಗೊಳಿಸಲು ಸರಸ್ವತಿ ಮಾತೆಯ ಅನುಗ್ರಹ ಅಗತ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹ ಮೂರ್ತಿ ಇದ್ದರು.