ಧನಾತ್ಮಕ ಚಿಂತನೆ ಪ್ರಚೋದಿಸುವುದು ಅಗತ್ಯ

KannadaprabhaNewsNetwork | Published : Mar 9, 2025 1:48 AM

ಸಾರಾಂಶ

ಮಹಿಳೆಯ ಶಕ್ತಿ, ಸಾಮರ್ಥ್ಯ, ಹೋರಾಟದ ನಿಲುವು, ಆಧುನಿಕ ಕಾಲಘಟ್ಟದ ಪೂರಕ ಆಲೋಚನೆಗಳ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದ್ದು, ಧನಾತ್ಮಕ ಚಿಂತನೆಗಳನ್ನು ಪ್ರಚೋದಿಸುವುದು ಅಗತ್ಯ ಎಂದು ಮ್ಯಾಕ್‌ ಆರೋ ಮುಖ್ಯ ಆಡಳಿತಾಧಿಕಾರಿ ಪವಿತ್ರ ಹೇಳಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಮಹಿಳೆಯ ಶಕ್ತಿ, ಸಾಮರ್ಥ್ಯ, ಹೋರಾಟದ ನಿಲುವು, ಆಧುನಿಕ ಕಾಲಘಟ್ಟದ ಪೂರಕ ಆಲೋಚನೆಗಳ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದ್ದು, ಧನಾತ್ಮಕ ಚಿಂತನೆಗಳನ್ನು ಪ್ರಚೋದಿಸುವುದು ಅಗತ್ಯ ಎಂದು ಮ್ಯಾಕ್‌ ಆರೋ ಮುಖ್ಯ ಆಡಳಿತಾಧಿಕಾರಿ ಪವಿತ್ರ ಹೇಳಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ನಿರ್ಣಾಯಕ ಕಾರ್ಯ ನಿರ್ವಹಣೆ ಮೂಲಕ ಗಮನ ಸೆಳೆದಿದ್ದಾಳೆ. ಅಂತಹ ಸ್ಪೂರ್ತಿದಾಯಕ ಕಥಾನಕಗಳನ್ನು ಯುವ ಮಹಿಳಾ ಸಮೂಹ ಅರಿತುಕೊಳ್ಳುವ ಮೂಲಕ ಹೊಸದನ್ನು ಸಾಧಿಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್‌ ಮಾತನಾಡಿ, ಮಹಿಳೆಯರು ಇಂದು ಕಷ್ಟದ ದಿನಗಳನ್ನು ಎದುರಿಸಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪುರುಷರಿಗೆ ಸರಿಸಮಾನವಾದ ಸ್ಥಾನಮಾನಗಳನ್ನು ಹೊಂದಿದ್ದಾರೆ ಎಂದರು.

ದರ್ಗಾಜೋಗಿಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಗರಾಜ್‌ ಮಾತನಾಡಿ, ಎಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿ ನೋಡುತ್ತಾರೆಯೋ ಅಲ್ಲಿ ಉತ್ತಮ ಚಿಂತನೆಗಳು ಇರುತ್ತವೆ. ಮಹಿಳಾ ಸಬಲೀಕರಣದ ಆಲೋಚನೆಗೆ ಪೂರಕವಾಗಿ ಇಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಮಹಿಳೆಯರಿಗೆ ಎಲ್ಲ ಹಂತಗಳಲ್ಲೂ ಸಮಾನತೆಯ ಅವಕಾಶಗಳನ್ನು ನೀಡುವುದು ಸಮಾಜದ ಜವಾಬ್ದಾರಿಯಾಗಬೇಕು. ಮಹಿಳೆಯರಿಗೆ ಸಿಗುತ್ತಿರುವ ಅವಕಾಶಗಳು ದುರ್ಬಳಕೆಯಾಗದಂತೆ ನಿಗಾವಹಿಸುವುದು ಅಗತ್ಯ. ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ ವಿವಿಧ ಹಂತಗಳಲ್ಲಿ ಒಬ್ಬ ಪುರುಷನ ಸಮಗ್ರ ವ್ಯಕ್ತಿತ್ವವನ್ನು ಪ್ರಭಾವಿಸಿರುವುದು ಅನನ್ಯ ಎಂದು ತಿಳಿಸಿದರು.ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಕಲಾವಿದೆ ಓಬಮ್ಮ, ಕಾಲೇಜಿನ ಆಡಳಿತಾಧಿಕಾರಿ ಬಿ.ಕೃಷ್ಣಪ್ಪ, ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ಜಾಲಪ್ಪ ಪಾಲಿಟೆಕ್ನಿಕ್‌ನ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

Share this article