ಮಹಿಳೆಯರ ಸಂಘಟನಾತ್ಮಕ, ವೈಚಾರಿಕವಾಗಿ ಸಜ್ಜುಗೊಳಿಸುವುದು ಅಗತ್ಯ

KannadaprabhaNewsNetwork |  
Published : Jun 29, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ  ಬಾಟಂ  | Kannada Prabha

ಸಾರಾಂಶ

ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಬಿ.ಆರ್.ಅಪರ್ಣ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ನಾಡಿನ ಮಹಿಳೆಯರ ಸಂಘಟನಾತ್ಮಕ ಹಾಗೂ ವೈಚಾರಿಕವಾಗಿ ಸಜ್ಜುಗೊಳಿಸುವ ತುರ್ತು ಅಗತ್ಯವಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕಸಂಘಟನೆಯ ಉಪಾಧ್ಯಕ್ಷೆ ಬಿ.ಆರ್.ಅಪರ್ಣ ಪ್ರತಿಪಾದಿಸಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸಮಿತಿ ವತಿಯಿಂದ ಮೊಳಕಾಲ್ಮುರು ತಾಲೂಕಿನ ಕೊಂಡ್ಲಹಳ್ಳಿಯ ಎಂ.ಆರ್.ಟಿ ಕಣ್ಣಿನ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ರಾಜ್ಯ ಮಟ್ಟದ ಮಹಿಳಾ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಹಳೆಯ ಊಳಿಗಮಾನ್ಯ ಪುರುಷ ಪ್ರಧಾನ ಮೌಲ್ಯಗಳು ಮಹಿಳೆಯರನ್ನು ಇಂದಿಗೂ ಮುಂದೆ ಹೋಗದಂತೆ ತಡೆದು ನಿಲ್ಲಿಸುತ್ತಿವೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚುತ್ತಿರುವ ಸಮಸ್ಯೆಗಳು, ಬಿಕ್ಕಟ್ಟು ಮಹಿಳೆಯರನ್ನು ಹೊರತುಪಡಿಸಿಲ್ಲವೆಂದರು.

ಮಾಧ್ಯಮಗಳ ಮೂಲಕ ಹಬ್ಬುತ್ತಿರುವ ಕೀಳು ಅಭಿರುಚಿ, ಹಿಂಸೆ, ಕ್ರೌರ್ಯ ಜೊತೆಗೆ ಮದ್ಯ-ಮಾದಕ ವಸ್ತುಗಳು ವಿದ್ಯಾರ್ಥಿ-ಯುವಜನತೆಯಲ್ಲಿ ವಿಕೃತ ಮನೋಭಾವನೆಯನ್ನು ಬೆಳೆಸುತ್ತಿವೆ. ಸಮಾಜದ ಸಾಂಸ್ಕೃತಿಕ, ನೈತಿಕ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ದಿಗ್ಧಮೆಗೊಳಿಸುವಷ್ಟು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯ ವಿರುದ್ಧ ಇಡೀ ಮಹಿಳಾ ಸಮುದಾಯ ಎದ್ದು ನಿಲ್ಲಬೇಕಾಗಿದೆ ಎಂದರು.

ಇಂದು ಮಹಿಳಾ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳಿಂದ ಹೊರತಾಗಿಲ್ಲ. ಅವರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ರೋಗ ಒಂದಕ್ಕೆ ಮದ್ದು ನೀಡುವಲ್ಲಿ ಆ ರೋಗದ ಮೂಲಕಾರಣ ತಿಳಿಯುವುದು ಎಷ್ಟು ಅವಶ್ಯಕವೋ, ಹಾಗೆಯೇ ಮಹಿಳೆಯರ ಸಮಸ್ಯೆಗಳ ಮೂಲ ಅರಿಯದೆ, ಮಹಿಳೆಯರ ಸಮಸ್ಯೆಗೆ ಪರಿಹಾರ ಹುಡುಕುವುದು ಸಾಧ್ಯವಿಲ್ಲ. ಎಐಎಂಎಸ್‌ಎಸ್ ಇಂತಹ ಅಧ್ಯಯನಗಳಿಗೆ ಪ್ರಾರಂಭದಿಂದಲೂ ಒತ್ತುಕೊಡುತ್ತ ಬಂದಿದೆ. ಇಂತಹ ಶಿಬಿರಗಳು ಮಹಿಳಾ ಸಂಘಟನಾಕಾರರನ್ನು ಗಟ್ಟಿಗೊಳಿಸುವಲ್ಲಿ ಅತ್ಯವಶ್ಯಕ ಎಂದರು.

ಪ್ರಾಸ್ತಾವಿಕ ಮಾತನಾಡಿದ, ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಶೋಭಾ ಎಸ್. ಮಹಿಳಾ ಚಳುವಳಿಯಲ್ಲಿರುವ ಹೋರಾಟಗಾರ್ತಿಯರು ಮಹಿಳಾ ಸಮುದಾಯಕ್ಕೆ ಸರಿಯಾದ ವಿಚಾರಗಳನ್ನು ತಿಳಿಸಬೇಕಾದರೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿಯಬೇಕಿದೆ. ಆ ನಿಟ್ಟಿನಲ್ಲಿ ಸೈದ್ದಾಂತಿಕವಾಗಿ- ಸಂಘಟನಾತ್ಮಕವಾಗಿ ಬಲಗೊಳ್ಳಲು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ರಾಜ್ಯ ಉಪಾಧ್ಯಕ್ಷೆ ಸೀಮಾ ಜಿಎಸ್ ಅಧ್ಯಕ್ಷತೆ ವಹಿಸಿದ್ದರು. ಎಐಎಂಎಸ್‌ಎಸ್‌ನ ರಾಜ್ಯ ಅಧ್ಯಕ್ಷದ ಮಂಜುಳಾ ಎನ್, ಮತ್ತೋರ್ವ ಉಪಾಧ್ಯಕ್ಷೆ ಹರಿಣಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎರಡನೇ ದಿನದ ಶಿಬಿರದಲ್ಲಿ ಸ್ತ್ರೀವಾದ ಕುರಿತು ಚರ್ಚೆ ನಡೆಯಲಿದ್ದು, ಮೂರನೇ ದಿನ ಫೆಡ್ರಿಕ್ ಎಂಗಲ್ಸ್ ರವರ ಖಾಸಗಿ ಆಸ್ತಿ, ಕುಟುಂಬ ಮತ್ತು ರಾಜ್ಯದ ಉಗಮ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಕರ್ನಾಟಕದ 20 ಕ್ಕೂ ಹೆಚ್ಚು ಜಿಲ್ಲೆಗಳಿಂದ ಸಂಘಟನೆಯ ಮಹಿಳಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಹಿತಕ್ಕಾಗಿ ಬಿಡದಿ ಟೌನ್‌ಶಿಪ್ ಯೋಜನೆ ಕೈ ಬಿಡಿ
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಿ