ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜನಪದ ಕಲೆಗಳ ಕಲಿಸುವ ತರಬೇತಿ ಅತ್ಯಮೂಲ್ಯ ಕಾರ್ಯ. ಜನಪದ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ. ಯುವಜನರಲ್ಲಿ ಜನಪದ ಕಲೆ, ಮಹತ್ವ ಬಿತ್ತುವ ಮೂಲಕ ಮುಂದಿನ ಜನಾಂಗಕ್ಕೆ ನಾವು ಉತ್ತಮ ಸಂದೇಶ ಸಾರುವ ಅಗತ್ಯವಿದೆ ಎಂದು ಶ್ರೀ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯ ಪಟ್ಟರು.ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಗುರುವಾರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನಗಳ ಜನಪದ ಕಲೆಗಳ ಕಲಿಕಾ ಶಿಬಿರದ ಸಮಾರೋಪ ಮತ್ತು ಶ್ರೀ ಮಠದ ಶ್ರಾವಣ ಚಿಂತನ ಕಾರ್ಯಕ್ರಮವನ್ನು ಚಂಡೆ ಭಾರಿಸುವ ಮೂಲಕ ಉದ್ಘಾಟಿಸಿದ ಅವರು, ಯುವ ಜನಾಂಗದ ಭವಿಷ್ಯ ಯೋಚನೆ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಆಸಕ್ತಿ, ಕುತೂಹಲ, ಸಾಧನೆಯಿಲ್ಲದೆ ಬದುಕು ಯಂತ್ರವನ್ನಾಗಿಸಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾದ ಹಿರಿಯರು ತಮ್ಮ ಹೊಣೆಯನ್ನು ಬೇರೆಯವರ ಮೇಲೆ ಹಾಕುತ್ತಿದ್ದಾರೆ. ಪೋಷಕರು ಮಕ್ಕಳನ್ನು ದೂರಿವಿರಿಸಿ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.
ಜನಪದ ಬೇರು, ಕವಿವಾಣಿ ಹೋವು ಎನ್ನುತ್ತಾರೆ. ಜನಪದರ ಬದುಕು ರೀತಿ, ನೀತಿ ಆದರ್ಶವಾಗಿದ್ದವು. ಅವರಿಗೆ ತಮ್ಮ ಕಲಿಕೆಯೇ ವಿಶ್ವವಿದ್ಯಾಲಯವಾಗಿತ್ತು. ಜೀವನವೇ ಪಾಠವಾಗಿತ್ತು. ಸಂತೋಷವಾದಾಗ ನಗುತ, ದುಃಖ ವಾದಾಗ ಅತ್ತು ನೋವು ನಲಿವು ಹಂಚಿಕೊಳ್ಳತ್ತಿದ್ದರು. ಆ ಕಾಲ ಎಲ್ಲಿಹೋಯಿತು. ಜನಪದರ ಆದರ್ಶ ಮರೆಯಬಾರದು ಎಂದರು.ಮುಖ್ಯ ಅತಿಥಿಗಳಾಗಿದ್ದ ಚಾಲುಕ್ಯ ನಗರದ ಕುವೆಂಪು ಕ್ಷೇಮಾಭಿವೃದ್ಧಿ ಸೇವಾ ಸಂಘದ ಗೌರವಾಧ್ಯಕ್ಷರು, ಹೃದಯ ರೋಗ ತಜ್ಞರಾದ ಡಾ. ಬಾಲಸುಬ್ರಹ್ಮಣ್ಯ ಆರ್ ಅವರು ಮಾತನಾಡಿ, ಜನಪದ ಮನುಷ್ಯರ ನಡುವೆ ಸಂಬಂಧ ಬೆಸೆದು ಜೀವನ ಮೌಲ್ಯಗಳನ್ನು ನೀಡುವ ಶಕ್ತಿ ಪಡೆದಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಪಿ.ಯು.ವಿದ್ಯಾರ್ಥಿಗಳಿಗೆ ಶಿಬಿರ ಏರ್ಪಡಿಸಿ ಜನಪದ ಕಲೆ ಕಲಿಸುವ ಸವಾಲು ಸ್ವೀಕರಿಸಿ ಯಶಸ್ವಿಯಾಗಿದ್ದೇವೆ. ಮೊಬೈಲ್ ಸಹವಾಸ ಬಿಟ್ಟರೆ ನಮ್ಮ ವಿದ್ಯಾರ್ಥಿಗಳು ಏನಾದರೂ ಸಾಧಿಸಬಹುದು. ಕೇಳಿಸಿಕೊಳ್ಳುವ, ತನ್ಮಯತೆಯಿಂದ ಕಲಿಯುವ ಮನಸ್ಥಿತಿ ಅಗತ್ಯವಿದೆ ಎಂದರು. ಶ್ರಾವಣ ಚಿಂತನೆ ಕಾರ್ಯಕ್ರಮವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಒಳ್ಳೆಯ ಮಾತು, ವಿಚಾರಗಳನ್ನು ಅರಿಯುವಂತೆ ಮಾಡುವ ಪ್ರಯತ್ನ ಶ್ಲಾಘನೀಯ ಎಂದರು.ಜನಪದ ಕಲೆಕಲಿಸಿದ ಗಣಪುಬಡವಗೌಡ ಕರ್ಕಿ, ಎಂ. ಜಿ. ಮಂಜೇಗೌಡ ಚನ್ನರಾಯಪಟ್ಟಣ, ಗಾಯಕರಾದ ನಳಿನಾಕ್ಷಿ, ಸುಶೀಲಾ ಷಣ್ಮುಗಂ, ಸುರೇಶ್ ಗೌಡ, ಡಾ. ಜಿ. ಆರ್. ಲವ, ಚಾಲುಕ್ಯನಗರದ ನಾರಾಯಣ, ರಾಮಪ್ಪಗೌಡ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಮಹಾದೇವಿ ನಿರೂಪಿಸಿದರು. ಕೃಷ್ಣಮೂರ್ತಿ ಹಿಳ್ಳೋಡಿ ಸ್ವಾಗತಿಸಿದರು. ಡಾ.ಕೆ.ಜಿ.ವೆಂಕಟೇಶ್, ಧರ್ಮೋಜಿರಾವ್, ಬಾಲರಾಜ್ ಕಾರ್ಯಕ್ರಮ ನಿರ್ವಹಿಸಿದರು. ಸೋಮಿನಕಟ್ಟಿ ವಂದಿಸಿದರು.ಅ