ಸಮಗ್ರ ಚಿಕಿತ್ಸಾ ವಿಧಾನಕ್ಕೆ ಆದ್ಯತೆ ನೀಡುವುದು ಅಗತ್ಯ: ಡಾ.ಶ್ರೀಪಾದ ಖೆಡೇಕರ

KannadaprabhaNewsNetwork |  
Published : Oct 20, 2026, 02:15 AM IST
(ಫೋಟೊಬಿಕೆಟಿ1, ಡಾ. ಶ್ರೀಪಾದ ಖೆಡೇಕರ ಮಾತನಾಡಿದರು.) | Kannada Prabha

ಸಾರಾಂಶ

ರೋಗವನ್ನು ವಾಸಿ ಮಾಡಲು ರೋಗ ಲಕ್ಷಣಗಳ ಜೊತೆಗೆ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಆಳವಾದ ಅಧ್ಯಯನ ಹಾಗೂ ಸಮಗ್ರ ಚಿಕಿತ್ಸಾ ವಿಧಾನಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಮುಂಬೈನ ಖ್ಯಾತ ಹೋಮಿಯೋಪಥಿ ತಜ್ಞ ವೈದ್ಯ ಹಾಗೂ ಸಂಶೋಧಕ ಡಾ.ಶ್ರೀಪಾದ ಖೆಡೇಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೋಗವನ್ನು ವಾಸಿ ಮಾಡಲು ರೋಗ ಲಕ್ಷಣಗಳ ಜೊತೆಗೆ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು, ಆಳವಾದ ಅಧ್ಯಯನ ಹಾಗೂ ಸಮಗ್ರ ಚಿಕಿತ್ಸಾ ವಿಧಾನಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಮುಂಬೈನ ಖ್ಯಾತ ಹೋಮಿಯೋಪಥಿ ತಜ್ಞ ವೈದ್ಯ ಹಾಗೂ ಸಂಶೋಧಕ ಡಾ.ಶ್ರೀಪಾದ ಖೆಡೇಕರ ಹೇಳಿದರು.

ನಗರದ ನವನಗರದಲ್ಲಿರುವ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಭವ್ಯ ಶತಾಬ್ಧಿ ಸಭಾಭವನದಲ್ಲಿ ಬಿವಿವಿ ಸಂಘದ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ಗ್ಲೋಬ್ ಇನ್ ಗ್ಲೋಬ್ಯೂಲ್ 2.0 ಎರಡನೇ ದಿನದ ಮೊದಲ ಉಪನ್ಯಾಸದಲ್ಲಿ ಹೋಮಿಯೋಪಥಿಕ್ ವೈದ್ಯ ಪದ್ದತಿಯ ಮಿಯಾಸಂ ಸಿದ್ಧಾಂತ ಕುರಿತು ಅವರು ಮಾತನಾಡಿದರು.

ಕೆಲವು ರೋಗಗಳು ಚಿಕಿತ್ಸೆಯ ನಂತರವೂ ಮರುಕಳಿಸುವುದಕ್ಕೆ ಕಾರಣಗಳನ್ನು ಪತ್ತೆಹಚ್ಚಲು ವೈದ್ಯರು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಬೇಕು. ರೋಗಿಯ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವ ಮೂಲಕ ಚಿಕಿತ್ಸೆಯ ವಿಧಾನ ನಿರ್ಧರಿಸುವುದು ಮುಖ್ಯವಾಗಿದೆ. ಹೋಮಿಯೋಪಥಿ ಚಿಕಿತ್ಸೆಯ ತತ್ವಗಳು, ಮಿಯಾಸಂ ಪರಿಕಲ್ಪನೆ, ರೋಗಗಳ ಬೆಳವಣಿಗೆ ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ವಿವರಿಸಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಆಧುನಿಕ ರೋಗನಿರ್ಣಯ ವಿಧಾನಗಳ ಮಹತ್ವವನ್ನು ಪ್ರಸ್ತಾಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಂಡನ್ನಿನ ಡಾ.ಹಾನಿಮನ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಹೀರಾಲಾಲ ಅಗರವಾಲ್ ಮಾತನಾಡಿ, ಹೋಮಿಯೋಪಥಿ ವೈದ್ಯಕೀಯ ಪದ್ಧತಿ ನಮಗೆ ದೊರೆತಿರುವ ಅಮೂಲ್ಯ ಕೊಡುಗೆಯಾಗಿದ್ದು, ಅದರ ಮೂಲ ತತ್ವಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಜೊತೆಗೆ ಆಧುನಿಕ ವೈಜ್ಞಾನಿಕ ಬೆಳವಣಿಗೆಗಳೊಂದಿಗೆ ಸಮನ್ವಯಗೊಳಿಸುವ ಅಗತ್ಯವಿದೆ ಎಂದು ಹೇಳಿದರು.ವೈದ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಕ್ಲಿನಿಕಲ್ ಅನುಭವಗಳ ವಿಶ್ಲೇಷಣೆ ಮತ್ತು ವೈಜ್ಞಾನಿಕ ವಿಚಾರಣೆಗೆ ಆದ್ಯತೆ ನೀಡಬೇಕು. ಹೋಮಿಯೋಪಥಿಯ ಮೂಲ ತತ್ವಗಳನ್ನು ಮೊದಲು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ವಿವಿಧ ಲೇಖಕರು ಹಾಗೂ ತಜ್ಞರು ಮಂಡಿಸಿರುವ ಅಭಿಪ್ರಾಯಗಳನ್ನು ಅಧ್ಯಯನ ಮಾಡುವ ಮೂಲಕ ವಿಷಯದ ಕುರಿತು ಸ್ಪಷ್ಟತೆ ಬೆಳೆಸಿಕೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಪ್ರಾಚಾರ್ಯ ಅರುಣ ಹೂಲಿ ಇದ್ದರು. ಡಾ.ತೃಪ್ತಿ ಶಿಂಧೆ ಸ್ವಾಗತಿಸಿದರು. ಡಾ.ರಾಜೇಂದ್ರ ಪಾಟೀಲ ಪರಿಚಯಿಸಿದರು.

ಸಾಧಕರಿಗೆ ಸನ್ಮಾನ : ಇದೇ ಸಂದರ್ಭದಲ್ಲಿ ಸಂಘ ಕಟ್ಟಡ ವಿಭಾಗದ ನಿರ್ದೇಶಕ ಮಹೇಶ ಕಕರಡ್ಡಿ, ವಾಹನ ವಿಭಾಗದ ಅಶೋಕ ರೇಣುಕೊಪ್ಪ ಕರಡಿ, ಪ್ರಾಚಾರ್ಯ ಅರುಣ ಹೂಲಿ ಅವರು ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.

ಗೋಷ್ಠಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿ ವೈದ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುರಾಲೋಚನೆಯ ಸಂಹಾರವೇ ನವರಾತ್ರಿ ಸಂದೇಶ: ಜಗದೀಶ ಶೆಟ್ಟರ
ಇಡೀ ಸಮಾಜದ ಪ್ರಗತಿ, ಸೃಜನಶೀಲತೆಯ ಶಕ್ತಿ: ಉಮಾಶ್ರೀ