ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ದೇಶಕ್ಕೆ ಸ್ವಾತಂತ್ರ್ಯ ತರಲು ತ್ಯಾಗ, ಬಲಿದಾನ ಮಾಡಿದ ಆದರ್ಶ ನಾಯಕರ ಸ್ಮರಣೆ ಅಗತ್ಯ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ೭೬ನೇ ಗಣ ರಾಜ್ಯೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾತ್ಮಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತರಲು ಶ್ರಮಿಸಿದರೆ, ಡಾ.ಬಿ.ಆರ್.ಅಂಬೇಡ್ಕರ್ ದೇಶದ ಜನರ ಹಿತ, ಪ್ರಗತಿಗೆ ಉತ್ಕೃಷ್ಟ ಸಂವಿಧಾನ ತರಲು ಪ್ರಮುಖ ಕಾರಣರು ಎಂದರು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೂ ದೇಶಕ್ಕೆ ಸಂವಿಧಾನ ೧೯೫೦ ರಲ್ಲಿ ಬಂದ ಬಳಿಕ ದೇಶಕ್ಕೆ ಭದ್ರತೆ, ಪ್ರಗತಿಗೆ ನಾಂದಿಯಾಯಿತು.
ಗುಂಡ್ಲುಪೇಟೆ ತಮಿಳುನಾಡು ಹಾಗು ಕೇರಳ ಗಡಿಯಲ್ಲಿದ್ದರೂ ಜನರು ಮಾತ್ರ ಸಾಮರಸ್ಯದಿಂದ ಇದ್ದಾರೆ ಎಂದರು. ಸಂವಿಧಾನ ಅಡಕವಾದ ದಿನ ಜ.೨೬ ದೇಶದ ಜನರಿಗೆ ಹೆಮ್ಮೆಯ ದಿನವಾಗಿದೆ.ಸಂವಿಧಾನದಡಿಯಲ್ಲಿ ಜನರು ಸಾಗಿದರೆ ಸಂವಿಧಾನಕ್ಕೆ ಹಾಗು ಸಂವಿಧಾನ ಬರೆದವರಿಗೆ ನೀಡಿದ ಗೌರವವಾಗಲಿದೆ ಎಂದರು.ತಹಸೀಲ್ದಾರ್ ಟಿ.ರಮೇಶ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಅಂಬೇಡ್ಕರ್ ದೇಶಕ್ಕೆ ಶ್ರೇಷ್ಠ ಹಾಗೂ ಲಿಖಿತ ಸಂವಿಧಾನ ನೀಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರ ನೆನೆಯುವುದು ಎಲ್ಲರ ಕೆಲಸ ಎಂದರು. ಭೀಮನಬೀಡು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ನಂದೀಶ್ ಮುಖ್ಯ ಭಾಷಣ ಮಾಡಿದರು. ಸೈನಿಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಿ.ಸಿ.ಮೌಲ್ಯ ಸೇರಿದಂತೆ ಆರು ಮಂದಿಗೆ ಇದೇ ವೇದಿಕೆಯಲ್ಲಿ ಶಾಸಕರು ಹಾಗೂ ತಹಸೀಲ್ದಾರ್ ಸನ್ಮಾನಿಸಿದರು.
ಸಮಾರಂಭದಲ್ಲಿ ತಾಪಂ ಇಒ ಷಣ್ಮುಖ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಪುರಸಭೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಮಹಮದ್ ಇಲಿಯಾಸ್, ಎನ್.ಕುಮಾರ್, ಶ್ರೀನಿವಾಸ್ (ಕಣ್ಣಪ್ಪ), ಎಲ್.ನಿರ್ಮಲ, ಮಹದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಅಕ್ಷರ ದಾಸೋಹ ಅಧಿಕಾರಿ ಸತೀಶ್ ಸೇರಿದಂತೆ ಸಂಘ, ಸಂಸ್ಥೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳಿದ್ದರು.