ನಾಡು, ನುಡಿ ವಿಚಾರದಲ್ಲಿ ಹಿರಿಯರ ಸೇವೆ ಸ್ಮರಿಸುವುದು ಅಗತ್ಯ

KannadaprabhaNewsNetwork |  
Published : May 06, 2026, 01:15 AM IST
ಚಳ್ಳಕೆರೆ ಸುದ್ದಿಗಳು1111 | Kannada Prabha

ಸಾರಾಂಶ

ಚಳ್ಳಕೆರೆ ನಗರದ ಎಚ್‌ಪಿಪಿಸಿ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ.ಎಂ.ಕೆ ದೇವಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕನ್ನಡ ನಾಡು, ನುಡಿ ವಿಚಾರದಲ್ಲಿ ಹಿರಿಯರ ಕನ್ನಡಪರ ಸೇವೆಯನ್ನು ಇಂದಿನ ಯುವಜನತೆ ನೆನೆಯಬೇಕು. ಆ ಮೂಲಕ ಕನ್ನಡತನವನ್ನು ಮನೆ ಮನಗಳಲ್ಲಿ ಇರುವಂತೆ ಮಾಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹೇಳಿದರು.

ನಗರದ ಎಚ್‌ಪಿಪಿಸಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡು, ನುಡಿ, ನೆಲ, ಜಲ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆಗಾಗಿ ಕಳೆದ 112 ವರ್ಷಗಳ ಹಿಂದೆ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್‌ನ ಅವಿರತ ಸೇವೆ ಅವಿಸ್ಮರಣೀಯ. ಕಥೆ, ಕಾದಂಬರಿಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಿದೆ. ಕನ್ನಡ ನಾಡು, ನುಡಿ ವಿಚಾರಗಳನ್ನು ಬೆಳೆಸುವ ದೃಷ್ಟಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕಸಾಪ ಇಂದು ಕನ್ನಡಭಾಷೆ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದು, ಭಾಷೆ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಇಂಗ್ಲಿಷ್ ಸಂಸ್ಕೃತಿಯಿಂದ ಹೊರಬಂದು ತಾಯಿ ಭಾಷೆ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡುವ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕಿದೆ ಎಂದರು.

ಇಂದಿನ ವಿದ್ಯಾರ್ಥಿಗಳು ಕನ್ನಡಾಭಿಮಾನದಿಂದ ದೂರವಾಗುತ್ತಿರುವುದು ಆತಂಕದ ಸಂಗತಿ. ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಬೇಸರದ ಸಂಗತಿ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ಎಂ.ಕೆ.ದೇವಪ್ಪ ಮಾತನಾಡಿ, ಆಧುನಿಕತೆ ಹೆಸರಿನಲ್ಲಿ ಕಾನ್ವೆಂಟ್ ಸಂಸ್ಕೃತಿ ಹೆಚ್ಚುತ್ತಿದೆ. ಕನ್ನಡ ಶಾಲೆಗಳು ದಾಖಲಾತಿ ಇಲ್ಲದೆ ನಿಧಾನವಾಗಿ ನೇಪತ್ಯಕ್ಕೆ ಸರಿಯುತ್ತಿವೆ. ಸಾಕಷ್ಟು ಶಾಲೆಗಳು ಮುಚ್ಚಿವೆ. ಈಗಿನ ವಿದ್ಯಾರ್ಥಿಗಳಲ್ಲೂ ಸಹ ಕನ್ನಡ ಕಲಿಯುವ ಮನಸ್ಸು ಕ್ಷೀಣಿಸುತ್ತಿರುವುದು ನೋವಿನ ಸಂಗತಿ.

ಮಾತೃಭಾಷೆಗೆ ಮೊದಲ ಸ್ಥಾನ ನೀಡುವ ಇತರೆ ರಾಜ್ಯಗಳಂತೆ ಕನ್ನಡಕ್ಕೂ ಸಹ ಮೊದಲ ಸ್ಥಾನ ನೀಡುವ ಸಂಸ್ಕೃತಿ ಯುವ ಮನಸುಗಳಲ್ಲಿ ಬೆಳೆಯಬೇಕಿದೆ. ಪುಸ್ತಕ ಓದುವುದು, ಗ್ರಂಥಗಳ ಅಧ್ಯಯನ ಮಾಡುವುದು, ಮಹಾನ್ ಕವಿಗಳ ವಿಚಾರವಂತಿಕೆಯನ್ನು ಅರ್ಥೈಸಿಕೊಳ್ಳುವ ಪರಿಪಾಠ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ವೈಜ್ಞಾನಿಕ ಕಥೆ, ಕಾದಂಬರಿಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡುವುದರಿಂದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರಿಯಲು ಸಹಕಾರಿಯಾಗಲಿದೆ ಎಂದರು.

ಪ್ರಾಧ್ಯಾಪಕ ಡಾ.ಜಗನ್ನಾಥ ಮಾತನಾಡಿ, ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಪ್ತಾಹ, ಸಾಹಿತ್ಯ ಸಂಪದ, ದತ್ತಿ ಉಪನ್ಯಾಸ, ನಾಟಕ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಭಾಷಾಭಿಮಾನ ವೃದ್ಧಿಸಿ, ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದೆ. ಅದರಂತೆ ಯುವ ಮನಸುಗಳು ಸಹ ಕನ್ನಡದ ಬಗ್ಗೆ ಹೆಚ್ಚು ಅಭಿಮಾನವನ್ನು ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ನೃತ್ಯನಿಕೇತನ ಸಂಚಾಲಕ ಯು.ಎಸ್.ವಿಷ್ಣುಮೂರ್ತಿರಾವ್, ಶಿಕ್ಷಕ ಎಚ್.ಮಂಜುನಾಥ ಮಾತನಾಡಿದರು. ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿಬಣ) ಅಧ್ಯಕ್ಷ ಪಿ.ಮಂಜುನಾಥ, ಕಸಾಪ ಈರಣ್ಣ, ಎಂ.ಎನ್.ಮೃತ್ಯುಂಜಯ, ಬಸವರಾಜು, ನಾಗರಾಜು, ಜಗನ್ನಾಥ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೌಲಭ್ಯ ಸಮರ್ಥ ಬಳಕೆ ಅಗತ್ಯ
ಸಾಮೂಹಿಕ ವಿವಾಹಗಳು ಸಾಮಾಜಿಕ ಬದಲಾವಣೆ ಅಸ್ಮಿತೆ