ಕೊಪ್ಪಳ: ಆಂಗ್ಲಭಾಷಾ ವ್ಯಾಮೋಹ ಹಾಗೂ ಅನ್ಯಭಾಷಿಕರ ಹೆಚ್ಚಳದಿಂದ ಕನ್ನಡ ಭಾಷೆಗೆ ಕುತ್ತು ಬಂದಿದೆ. ಅದನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ 11ನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿಯಂತೂ ಕನ್ನಡಕ್ಕೆ ಕುತ್ತು ಬಂದಿದೆ ಎನ್ನುವಷ್ಟರ ಮಟ್ಟಿಗೆ ಆತಂಕ ಎದುರಾಗುತ್ತದೆ. ಖುದ್ದು ನಾನೇ ಬೆಂಗಳೂರಿನಲ್ಲಿ ವಾಸಿಸುವಾಗ ನಾವೇನು ಕನ್ನಡ ನಾಡಿನಲ್ಲಿದ್ದೇವೋ ಅಥವಾ ಬೇರೆ ರಾಜ್ಯದಲ್ಲಿದ್ದೇವೆ ಎನ್ನುವ ಅನುಮಾನ ಮೂಡವಂತಾಗುತ್ತದೆ. ತಮಿಳು ಕಾಲನಿಯೇ ನಿರ್ಮಾಣವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.ತಮಿಳು ಜನರಂತೆ ಕನ್ನಡಿಗರಾದ ನಾವು ಭಾಷಾಭಿಮಾನಿಗಳಾಗಬೇಕು. ಕನ್ನಡ ಉಳಿವಿಗೆ ಎಲ್ಲರ ಜಾಗೃತಿ ಮೂಡಿಸಬೇಕು. ಕನ್ನಡ ಭಾಷೆಗೆ ದೇಶದಾಚೆ ಪ್ರಾತಿನಿಧ್ಯ ಹೆಚ್ಚಾಗಿದ್ದರೂ ಕರ್ನಾಟಕದಲ್ಲೇ ಅದಕ್ಕೆ ಸೂಕ್ತ ಆದ್ಯತೆ ಸಿಗುತ್ತಿಲ್ಲ ಎಂದರು.
ದಿ. ಹನುಮಂತಪ್ಪ ಅಂಡಗಿ ಚುಸಾಪಗೆ ಸೇವೆ ಅಪಾರವಾಗಿದೆ. ಕೊಪ್ಪಳದ ಸಾಹಿತ್ಯ ಪರಂಪರೆ ಶ್ರೀಮಂತವಾದರೂ ಕೇಳುಗರ ಸಂಖ್ಯೆ ಕಡಿಮೆ ಇರುವುದೇ ಬೇಸರದ ಸಂಗತಿ. ಕೊಪ್ಪಳದಲ್ಲಿ ಚುಟುಕು ಸಾಹಿತ್ಯ ಬೆಳೆಯುತ್ತಿದ್ದು, ಹಲವಾರು ಸಾಹಿತಿಗಳು ತಮ್ಮ ಚುಟುಕುಗಳ ಮೂಲಕ ಸಮಾಜ ಮತ್ತು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದರು.ಚುಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ ನೆಲಾಗಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಡಾ. ಮಹಾಂತೇಶ ಮಲ್ಲನಗೌಡರ್ ಮೊದಲ ಚುಸಾಪ ಅಧ್ಯಕ್ಷರಾಗಿ ಸಂಘಟನೆ ಬಲಪಡಿಸಿದರು. ನಂತರ ದಿ. ಹನುಮಂತಪ್ಪ ಅಂಡಗಿ ರಾಜ್ಯ ಮಟ್ಟದಲ್ಲಿ ಚುಟುಕು ಸಾಹಿತ್ಯ ಚಳವಳಿಗೆ ಗುರುತಾದರು ಎಂದರು.
ಸಮ್ಮೇಳನಾಧ್ಯಕ್ಷರಾಗಿ ವೀರಣ್ಣ ವಾಲಿ ಅಧ್ಯಕ್ಷತೆ ವಹಿಸಿದರು. ಗಜೇಂದ್ರಗಡದ ಕಾಲಜ್ಞಾನ ಮಠದ ಶ್ರೀಶರಣಬಸವೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚುಸಾಪ ಕೇಂದ್ರ ಸಮಿತಿ ಅಧ್ಯಕ್ಷ ಡಾ.ಎಂ.ಜಿ.ಆರ್ ಅರಸ್, ಚುಸಾಪ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಡಾ. ಮಹಾಂತೇಶ ಮಲ್ಲನಗೌಡರ್, ಎಸ್.ಎಂ. ಕಂಬಾಳಿಮಠ, ರುದ್ರಪ್ಪ ಭಂಡಾರಿ, ಅಕ್ಬರ್ ಸಿ. ಕಾಲಿಮಿರ್ಚಿ, ಎಂ.ಬಿ. ಅಳವಂಡಿ ಸೇರಿದಂತೆ ಹಲವರು ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿ ಹಾಗೂ ಕವಯತ್ರಿ ಸೀತಾಲಕ್ಷ್ಮಿ ವರ್ಮಾ ಅವರ ಬಣ್ಣ ಬಣ್ಣದ ದುಂಬಿಗಳು ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮವನ್ನು ವಸಂತಕುಮಾರ ಗುಡಿ ನಿರೂಪಿಸಿದರು.
ಚುಟುಕು ಸಾಹಿತ್ಯ ಈಗ ಅತ್ಯುಪಯುಕ್ತ: ವೀರಣ್ಣ ವಾಲಿಸಮಯದ ಅಭಾವ ಮತ್ತು ತಂತ್ರಜ್ಞಾನ ಯುಗದಲ್ಲಿ ದೀರ್ಘ ಸಾಹಿತ್ಯಕ್ಕಿಂತ ಚುಟುಕು ಸಾಹಿತ್ಯ ಅತ್ಯುಪಯುಕ್ತ ಎಂದು 11ನೇ ಚುಟುಕು ಸಾಹಿತ್ಯಸಮ್ಮೇಳನ ಸರ್ವಾಧ್ಯಕ್ಷ ಸಾಹಿತಿ ವೀರಣ್ಣ ವಾಲಿ ಹೇಳಿದ್ದಾರೆ.
ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಪ್ರಸ್ತುತ ಕಾಲಘಟದಲ್ಲಿ ಚುಟುಕು ಸಾಹಿತ್ಯ ಅತ್ಯುಮೂಲ್ಯವಾಗಿದೆ ಎಂದರು.ಈಗ ನಡೆಯುತ್ತಿರುವುದು ನ್ಯಾನೋ ಪ್ರಪಂಚವಾಗಿದ್ದು, ಇಂಥ ಕಾಲಘಟದಲ್ಲಿ ಚಿಪ್ ಚಿಕ್ಕದಿದ್ದಷ್ಟು ಅದರ ಘನತೆ ಹೆಚ್ಚುತ್ತದೆ ಎನ್ನುವಂತಿರುವ ಈ ಸಮಯದಲ್ಲಿ ಚುಟುಕು ಸಾಹಿತ್ಯದ ಮೂಲಕ ಸಮಾಜದ ಅಂಕು, ಡೊಂಕು ತಿದ್ದಬಹುದಾಗಿದೆ. ಅಷ್ಟೇ ಅಲ್ಲ ಬೇಗನೆ ಸೆಳೆಯಲು ಅನುಕೂಲಕರವಾಗಿದೆ ಎಂದರು.
ಚುಟುಕು ರಚಿಸುವುದು ಅಷ್ಟು ಸುಲಭ ಅಲ್ಲ, ಒಂದೆರಡು ಪುಟದಲ್ಲಿ ಹೇಳಬೇಕಾಗಿರುವುದನ್ನು ಕೇವಲ ಒಂದೆರಡು ಲೈನ್ ನಲ್ಲಿ ಹೇಳುವ ಸಾಮರ್ಥ್ಯ ಚುಟುಕು ಸಾಹಿತ್ಯಕ್ಕೆ ಇದೆ. ಇದೇ ಕಾರಣಕ್ಕಾಗಿಯೇ ಈಗ ಚುಟುಕು ಸಾಹಿತ್ಯಕ್ಕೆ ಯುವಕರ ಒಲವು ಹೆಚ್ಚಳವಾಗಿದೆ ಎಂದರು.ಕುರಿತೋದದೆಯಂ ಕಾವ್ಯಪರಿಣರಾದ ಈ ನೆಲದಲ್ಲಿ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಮಹನೀಯರು ಇದ್ದಾರೆ. ಆದಿಕಾಲದಿಂದಲೂ ಇಲ್ಲಿಯ ಸಾಹಿತ್ಯ ಗಟ್ಟಿ ಸಾಹಿತ್ಯವಾಗಿ ರೂಪಗೊಂಡಿದೆ. ಕಥೆ, ಪುರಾಣ, ಕಾವ್ಯ, ಸಂಶೋಧನೆ ಸೇರಿದಂತೆ ನಾಡಿನ ಸಾಹಿತ್ಯ ಪರಂಪರೆಯಲ್ಲಿ ಕೊಪ್ಪಳ ಕೊಡುಗೆ ಅಲ್ಲಗಳೆಯುವಂತೆ ಇಲ್ಲ ಎಂದರು.