2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್

| Published : Nov 10 2025, 01:45 AM IST

2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ದೇಶಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉತ್ತಮ ಆಡಳಿತ ನೀಡುತ್ತೇವೆ.

ಕೂಡ್ಲಿಗಿ: ಕಾಂಗ್ರೆಸ್ ದೇಶಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉತ್ತಮ ಆಡಳಿತ ನೀಡುತ್ತೇವೆ. 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಮಾರ್ ಭರವಸೆ ವ್ಯಕ್ತಪಡಿಸಿದರು.

ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿ ಶಾಸಕರ ಕಚೇರಿ ಮುಂದಿನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಲಕ್ಷ ಕೋಟಿ ಹಣವನ್ನು ಬಡವರ ಕಲ್ಯಾಣಕ್ಕೆ ಕೊಟ್ಟಿದ್ದೇವೆ. ಬಿಜೆಪಿಯವರು ಇಂತಹ ಕಾರ್ಯವನ್ನು ಯಾವ ಕಾಲಕ್ಕೂ ಮಾಡೋಕೆ ಆಗಲ್ಲ. ಬೆಂಗಳೂರು ಸುತ್ತಮುತ್ತಲಿನ ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಈ ತಾಲೂಕಿನ ರೇಷ್ಮೆಗೆ ಅತಿ ಹೆಚ್ಚು ಬೆಲೆ ಸಿಗುತ್ತಿದೆ. ಈ ಭಾಗದಲ್ಲಿಯೇ ರೇಷ್ಮೆ ಮಾರುಕಟ್ಟೆ ಮಾಡುತ್ತೇವೆ. ರೈತನಿಗೆ ಸಂಬಳ, ಪ್ರಮೋಷನ್, ಲಂಚ, ಪೆನ್ಶನ್ ಇಲ್ಲ. ರೈತನನ್ನು ಬದುಕಿಸುವ ಕೆಲಸ ಮಾಡುತ್ತೇವೆ ಎಂದರು.

ಕೆಲವರು ಎರಡನೇ ಬೆಳೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಡ್ಯಾಂ ಮುಖ್ಯನೋ, ಬೆಳೆ ಮುಖ್ಯನೋ ವಿಚಾರ ಮಾಡಬೇಕು ಎಂದರು. ₹800 ಕೋಟಿಗೂ ಹೆಚ್ಚು ಹಣ ಕೆರೆ ತುಂಬಿಸುವ ಯೋಜನೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಕೆರೆಗೆ ನೀರು ತುಂಬಿಸುವಾಗ ಪ್ರತಿವರ್ಷ 80 ಲಕ್ಷ ವಿದ್ಯುತ್ ಬಿಲ್ ಬರುತ್ತದೆ. ಹೀಗಾಗಿ ಎಲ್ಲ ಕೆರೆಗಳು ಹರಾಜು ಹಾಕಬೇಕು. ಮೀನು ಮರಿಗಳನ್ನು ಬಿಟ್ಟು ಆ ಹಣದಿಂದ ವಿದ್ಯುತ್ ಬಿಲ್ ತುಂಬಲು ಬಳಸಬೇಕು ಎಂದರು.

ನಾನು ಹಾಗೂ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ತಂದೆ ಎನ್.ಟಿ. ಬೊಮ್ಮಣ್ಣ ಅವರು ಬಂಗಾರಪ್ಪ ಅವರ ಶಿಷ್ಯರಾಗಿದ್ದೆವು. ಲೋಕಸಭೆ ಉಪಚುನಾವಣೆಗೆ ಉಗ್ರಪ್ಪ ಅವರ ಪರ ಚುನಾವಣಾ ಪ್ರಚಾರ ಮಾಡಲು ಕೂಡ್ಲಿಗಿಗೆ ನಾನು ಬಂದಾಗ ತಾಲೂಕಿನ ಕೆರೆಗಳಿಗೆ ತುಂಬಿಸುವ ಕಾರ್ಯಕ್ರಮ‌ ಮಾಡಬೇಕು ಎಂದು ಎನ್.ಟಿ. ಬೊಮ್ಮಣ್ಣ ಕೇಳಿದ್ದರು. ಆಗ ಮಾಡಿಕೊಡುತ್ತೇನೆ ಎಂದು ಹೇಳಿದ್ದೆ. ಈಗ ಅವರ ಸುಪುತ್ರನ ಕಾಲದಲ್ಲಿ ಅದು ಆಗಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿದ್ದಕ್ಕೆ ನಮಸ್ಕಾರ ಸಲ್ಲಿಸುತ್ತೇನೆ ಎಂದು ಹೇಳಿದರು.

ತುಕಾರಾಂ ಅವರನ್ನು ಆಯ್ಕೆ ಮಾಡಿ ಶಕ್ತಿ ತುಂಬಿದ್ದೀರಿ. ಒಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ಒಬ್ಬ ವ್ಯಕ್ತಿಯ ಕೈಯಲ್ಲಿ ಇಲ್ಲ. ಎಲ್ಲರೂ ಶಕ್ತಿ ತುಂಬಿದಾಗ ಅದು ಆಗುತ್ತದೆ ಎಂದರು.

ವಿಜಯನಗರ, ಬಳ್ಳಾರಿ ಜಿಲ್ಲೆಯ ಶಾಸಕರು ಕಾಂಗ್ರೆಸ್ ಕಚೇರಿಗೆ ಸೈಟ್ ನೀಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಗಾಂಧಿ ಭಾರತದ ನೆನಪಿನಲ್ಲಿ 100 ಕಾಂಗ್ರೆಸ್ ಕಚೇರಿಗಳಿಗೆ ಕೆಲವರು ಸೈಟ್ ನೀಡಿಲ್ಲ. ಯಾರು ಸೈಟ್ ನೀಡಲ್ಲವೋ ಅವರ ವರದಿಯನ್ನು ದೆಹಲಿಯ ಎಐಸಿಸಿ ಅವರು ಕೇಳಿದ್ದಾರೆ. ವರದಿಯನ್ನು ಸದ್ಯದಲ್ಲಿಯೇ ಕೊಡುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಜಮೀರ್ ಅಹಮದ್ ಖಾನ್, ಬೋಸರಾಜ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಸಂಸದ ಈ.ತುಕಾರಾಂ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ದೇವೇಂದ್ರಪ್ಪ, ಲತಾ ಮಲ್ಲಿಕಾರ್ಜುನ, ನಾಗರಾಜ್, ಮಾಜಿ ಸಚಿವರಾದ ಎಚ್. ಆಂಜನೇಯ, ಅಲ್ಲಂ ವೀರಭದ್ರಪ್ಪ, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ ಇದ್ದರು.