ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜನಪದ ಕೇವಲ ಕಲೆಯಲ್ಲ ಅದೊಂದು ಅದ್ಭುತ ಜ್ಞಾನ ಶಾಖೆಯಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ನಮ್ಮ ದೇಶದ ಚರಿತ್ರೆ ಕೇವಲ ಅರ್ಧ ಸತ್ಯವಾಗಿದೆ. ಜನ ಸಾಮಾನ್ಯರ ಚರಿತ್ರೆಯನ್ನು ಯಾರೂ ಹೇಳುತ್ತಿಲ್ಲ. ಈ ಚರಿತ್ರೆಯನ್ನು ಹೊಸ ರೀತಿಯಲ್ಲಿ ಬರೆಯುವ ಅಗತ್ಯವಿದೆ. ಅದನ್ನು ಬರೆಯಲು ಜಾನಪದ ವಿದ್ವಾಂಸರು ಶಕ್ತಿಯಾಗಬೇಕು. ಜನಪದ ಕಾವ್ಯಗಳೂ ಚರಿತ್ರೆಯನ್ನು ಹೇಳುತ್ತವೆ. ಹೀಗೆಯೇ ನಿರ್ಲಕ್ಷರ ಚರಿತ್ರೆಯನ್ನು ಮತ್ತಷ್ಟು ರೂಪಿಸಬೇಕಿದ್ದು, ಜನಪದದ ಕುರಿತು ಅಧ್ಯಯನ ಮಾಡುವ ನಮ್ಮ ಯುವ ಸಮೂಹ ಈ ಬಗ್ಗೆ ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್. ರಾಜೇಶ್ವರಿ, ಕನ್ನಡ ಅಧ್ಯಾಪಕರ ವೇದಿಕೆ ಉಪಾಧ್ಯಕ್ಷ ಪ್ರೊ.ಕುಂಸಿ ಉಮೇಶ್, ಕಡೆಕೊಪ್ಪಲ ಪ್ರತಿಷ್ಠಾನದ ಲಕ್ಷ್ಮೀನಾರಾಯಣ, ಡಾ.ಎಸ್.ಎಂ. ಮುತ್ತಯ್ಯ, ಮಂಗಳೂರು ವಿವಿ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನೆ, ಗುಲ್ಬರ್ಗ ವಿವಿ ಡಾ.ಅರುಣ್ ಜೋಳದ ಕೂಡ್ಲಿಗಿ, ಸಹ್ಯಾದ್ರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಸೈಯದ್ ಸನಾಉಲ್ಲಾ ಉಪಸ್ಥಿತರಿದ್ದರು.ಜಾನಪದ ಕಲಾವಿದ ನಾಗರಾಜ್ ತೋಂಬ್ರಿ ಜೋಗಿಪದ ಹಾಡಿದರು. ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ಜಿ. ವೆಂಕಟೇಶ್ ಸ್ವಾಗತಿಸಿ, ಡಾ.ಎಸ್.ಎಂ. ಮುತ್ತಯ್ಯ ಪ್ರಾಸ್ತಾವಿಕ ಮಾತನಾಡಿ, ಡಾ.ಹಾ.ಮ. ನಾಗಾರ್ಜುನ ವಂದಿಸಿದರು.ಜಾನಪದ ದುಡಿವ ವರ್ಗದ ಜನರ ಕಲೆ. ಅದರೇ ಇಂದು ನಕಲಿ ಕಲಾವಿದರಿಂದಾಗಿ ಮೂಲ ಜನಪದದ ಮಹತ್ವ ಕಡಿಮೆಯಾಗುತ್ತಿರುವುದು ನೋಡಿದಾಗ ಮರು ಚಿಂತನೆಯ ಅಗತ್ಯವಿದೆ ಎಂದು ಅನಿಸುತ್ತದೆ. ಎಂದಿಗೂ ಮೂಲ ಕಲೆಗೆ ಕಲಾವಿದರಿಗೆ ಬೆಲೆಯಿಲ್ಲದಂತಾಗಬಾರದು.
ಪ್ರೊ.ಶರತ್ ಅನಂತಮೂರ್ತಿ, ಕುವೆಂಪು ವಿಶ್ವವಿದ್ಯಾಲಯ ಕುಲಪತಿ