ಸಂಕುಚಿತ ದೃಷ್ಟಿಯಿಂದ ನೋಡುವುದು ಸಮಂಜಸವಲ್ಲ

KannadaprabhaNewsNetwork | Published : Apr 15, 2025 1:02 AM

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಶೋಷಿತರು, ದಮನಿರತರು, ದಲಿತರ ಉದ್ಧಾರಕ್ಕಾಗಿ ವಿಶ್ವದಲ್ಲೇ ಬೃಹತ್ ಸಂವಿಧಾನ ರಚಿಸಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಮತ್ತು ಸೌಲಭ್ಯಗಳನ್ನು ದೊರಕಿಸಿಕೊಟ್ಟ ಸಮಾನತೆಯ ಹರಿಕಾರ. ಅವರು ಬರೆದ ಸಂವಿಧಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಡಾ. ಬಿ.ಆರ್. ಅಂಬೇಡ್ಕರ್ ಶೋಷಿತರು, ದಮನಿರತರು, ದಲಿತರ ಉದ್ಧಾರಕ್ಕಾಗಿ ವಿಶ್ವದಲ್ಲೇ ಬೃಹತ್ ಸಂವಿಧಾನ ರಚಿಸಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಮತ್ತು ಸೌಲಭ್ಯಗಳನ್ನು ದೊರಕಿಸಿಕೊಟ್ಟ ಸಮಾನತೆಯ ಹರಿಕಾರ. ಅವರು ಬರೆದ ಸಂವಿಧಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು. ನಗರದ ತಹಸಿಲ್ ಕಚೇರಿಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಭಾರತ ಬದಲಾಗಲು ಸಂವಿಧಾನವೇ ಕಾರಣವಾಗಿದೆ. ಆದ್ದರಿಂದ ಮಹಾನ್ ನಾಯಕರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ದೊರೆತಿದೆ ಎಂದರು.

ಕಲಬುರಗಿ ಡಾ. ಅನಿಲ್ ತೇಂಗಳಿ ಉಪನ್ಯಾಸ ನೀಡಿ, ಡಾ. ಅಂಬೇಡ್ಕರ್‌ ಭಾರತಕ್ಕೆ ಸಂವಿಧಾನ ಕೊಡುಗೆ ನೀಡಿದವರು. ಅಂತಹವರನ್ನು ಸಂಕುಚಿತ ದೃಷ್ಟಿಯಿಂದ ನೋಡುವುದು ಸಮಂಜಸವಲ್ಲ. ಸಂವಿಧಾನ ರಚನೆಯಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿಕ್ಷಣ ಪಡೆಯುವಂತಾಗಿದೆ. ಅಂದಿನ ಕಾಲದಲ್ಲಿ ಜಾತಾಧಾರಿತ ಕುಲ ಕಸುಬುಗಳಿದ್ದವು. ಸಂವಿಧಾನ ರಚನೆಯ ನಂತರ ಶಿಕ್ಷಣಕ್ಕೆ ಅನುಸಾರವಾಗಿ ಪದವಿಗಳು ದೊರೆಯುತ್ತಿವೆ. ಇಂದು ಎಲ್ಲರೂ ಎಲ್ಲ ಕೆಲಸ ಮಾಡುವುದುನ್ನು ಕಾಣಬಹುದು ಅದು ಪ್ರಸ್ತುತ ಸಂವಿಧಾನದಿಂದ ಸಾಧ್ಯವಾಗಿದೆ ಎಂದರು.ಉಪನ್ಯಾಸಕ ರಾಜಗೋಪಾಲ ವಿಭೂತಿಹಳ್ಳಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಯೊಂದು ವಿಷಯಗಳು ವಾಸ್ತವವಾದವುಗಳು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪಿಯುಸಿ ಫಲಿತಾಂಶದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಶಾಸಕ ನಾಯಕ ಮಾಲಾರ್ಪಣೆ ಮಾಡಿದರು. ಮೆರವಣಿಗೆ ಆಯೋಜಿಸಲಾಗಿತ್ತು.

ತಹಸೀಲ್ದಾರ್ ಎಚ್.ಎ. ಸರಕಾವಸ್, ತಾಲೂಕು ಪಂಚಾಯತ್‌ ಅಧಿಕಾರಿ ಬಸವರಾಜ ಸಜ್ಜನ್, ಸಮಾಜ ಕಲ್ಯಾಣ ಅಧಿಕಾರಿ ಮೊಹ್ಮದ್‌ ಸಲೀಂ, ಟಿಎಚ್‌ಓ ಡಾ.ಆರ್.ವಿ. ನಾಯಕ, ಪ್ರಕಾಶ ಗುತ್ತೇದಾರ, ರಾಜಾ ಪಿಡ್ಡನಾಯಕ (ತಾತಾ), ಬಂತೇಜಿಗಳು, ತಾಲಕು ಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಇದ್ದರು.

Share this article