ಎತ್ತಿನಹೊಳೆ ಯೋಜನೆಯಲ್ಲ, ಅದು ಹಣ ಹರಿಸುವ ಯೋಜನೆಯಾಗಿದೆ: ಡಾ.ಕೆ.ಸುಧಾಕರ್‍ ಲೇವಡಿ

KannadaprabhaNewsNetwork |  
Published : Oct 16, 2026, 02:00 AM IST
15ಬಿಜಿಪಿ-1 | Kannada Prabha

ಸಾರಾಂಶ

ಈ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ 12 ವರ್ಷಗಳು ಕಳೆದರೂ ಸಹ ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಯೋಜನೆಯಿಂದ ಒಂದೇ ಒಂದು ಹನಿ ನೀರು ಸಹ ಬರಲಿಲ್ಲ. ಅಂದು ₹8 ಸಾವಿರ ಕೋಟಿ ವೆಚ್ಚದೊಂದಿಗೆ ಪ್ರಾರಂಭವಾದ ಯೋಜನೆ ಈಗ ₹40 ಸಾವಿರ ಕೋಟಿಗೆ ತಲುಪಿದೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಎತ್ತಿನ ಹೊಳೆ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ 12 ವರ್ಷ ಕಳೆದರೂ ಸಹ ಜಿಲ್ಲೆಗೆ ಒಂದು ಹನಿ ನೀರು ಹರಿಯಲಿಲ್ಲ. ಇದು ಎತ್ತಿನ ಹೊಳೆ ಯೋಜನೆಯಲ್ಲ, ಹಣ ಹರಿಸುವ ಯೋಜನೆಯಾಗಿ ಪರಿವರ್ತನೆಯಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಲೇವಡಿ ಮಾಡಿದರು.

ಪಟ್ಟಣದ ಹೊರವಲಯದ ಕೊಂಡಂವಾರಿಪಲ್ಲಿ ಗ್ರಾಮದ ಎಸ್‍ಎಲ್‍ಎನ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಎನ್.ಡಿ.ಎ.ಸಮನ್ವಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 12 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಿದ್ದರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎತ್ತಿನ ಹೊಳೆ ಯೋಜನೆಯಲ್ಲಿ 2 ವರ್ಷದೊಳಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಯುತ್ತದೆ ಎಂಬುದಾಗಿ ಭಾವಿಸಿ, ಕ್ಷೇತ್ರದಿಂದ ಸುಮಾರು 50 ಸಾವಿರ ಜನರನ್ನು ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸೇರಿಸಿದ್ದೆ. ಆದರೆ ಈ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ 12 ವರ್ಷಗಳು ಕಳೆದರೂ ಸಹ ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಯೋಜನೆಯಿಂದ ಒಂದೇ ಒಂದು ಹನಿ ನೀರು ಸಹ ಬರಲಿಲ್ಲ. ಅಂದು ₹8 ಸಾವಿರ ಕೋಟಿ ವೆಚ್ಚದೊಂದಿಗೆ ಪ್ರಾರಂಭವಾದ ಯೋಜನೆ ಈಗ ₹40 ಸಾವಿರ ಕೋಟಿಗೆ ತಲುಪಿದೆ ಎಂದರು.

ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ನಡೆದ 10 ಚುನಾವಣೆಗಳ ಪೈಕಿ 8ರಲ್ಲಿ ಬಿಜೆಪಿ ಜಯ ಗಳಿಸಿದೆ. 2 ಸಲ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ. ಆದರೆ ಕಾಂಗ್ರೆಸ್ ಪಕ್ಷ ಇದುವರೆಗೂ ಖಾತೆ ತೆರೆದಿಲ್ಲ ಎಂದ ಅವರು, ಪದವೀಧರರ ಮತದಾರರ ಪಟ್ಟಿ ಮುಂದಿಟ್ಟುಕೊಂಡು ಪ್ರತಿ ಮತದಾರರನ್ನು ಭೇಟಿ ಮಾಡಿ ಎನ್‍ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಎರಡೂ ಪಕ್ಷಗಳ ಮುಖಂಡರು ಪ್ರತಿ ಗ್ರಾಮದಲ್ಲಿರುವ ಪದವೀಧರ ಮತದಾರರನ್ನು ಸಂಪರ್ಕಿಸಿ, ಅಭ್ಯರ್ಥಿಯ ಪರ ಮತಯಾಚಿಸಬೇಕು. ಬೂತ್ ಮಟ್ಟದಲ್ಲಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ನಿಕಟಪೂರ್ವ ಅಧ್ಯಕ್ಷ ರಾಮಲಿಂಗಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಮುಕ್ತ ಮುನಿಯಪ್ಪ, ಎನ್‍ಡಿಎ ಮುಖಂಡ ಹರಿನಾಥರೆಡ್ಡಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್.ನರಸಿಂಹನಾಯ್ಡು, ಆಚಿಗಾನಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಆರ್.ವೆಂಕಟೇಶ್, ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್ , ಪ್ರಧಾನ ಕಾರ್ಯದರ್ಶಿ ಬಿ.ಎಸ್.ಲೋಕೇಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.15ರ ವರೆಗೆ ಕಾಲುವೆಗೆ ನೀರು ಹರಿಸಲು ರೈತ ಸಂಘ ಅಧ್ಯಕ್ಷ ಮಾಧವರೆಡ್ಡಿ ಆಗ್ರಹ
ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ಅಸ್ತಂಗತ