ಕನ್ನಡಪ್ರಭ ವಾರ್ತೆ, ಬೀದರ್‌ಪ್ರತಿ 10ಲಕ್ಷ ಜನಸಂಖ್ಯೆಗೆ 100 ವೈದ್ಯಕೀಯ ಸೀಟುಗಳನ್ನು ಸೀಮಿತಗೊಳಿಸುವಂತೆ ಎನ್‌ಎಂಸಿ ಹೊರಡಿಸಿರುವ ಸುತ್ತೋಲೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಿದ್ದು, ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಎನ್‌ಎಂಸಿಗೆ ಪತ್ರ ಬರೆದು ವಿರೋಧಿಸಲಾಗುತ್ತದೆ ಎಂದು ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಬ್ರಿಮ್ಸ್ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಆಯೋಜಿಸಿದ್ದ ಮೆಡಿಕಾನ್-2023 ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಎನ್‌ಎಂಸಿ ಸುತ್ತೋಲೆ ಜಾರಿಗೊಳಿಸಿದ್ದೆಯಾದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಮಂಜೂರಿಗೆ ಹಾಗೂ ಈಗಿರುವ ಕಾಲೇಜು ನಡೆಸಲು ಅನಾನುಕೂಲ. ಈ ಸುತ್ತೋಲೆ ದಕ್ಷಿಣ ಭಾರತದ ರಾಜ್ಯಗಳ ವಿರೋಧಿಯಾಗಿದೆ ಎಂದು ಸ್ಪಷ್ಟಪಡಿಸಿದರು.ಇದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಕೆಲವೇ ರಾಜ್ಯಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳ ಸಲಹೆ, ಸೂಚನೆ ಪಡೆಯದೇ ನಿರ್ಣಯ ಕೈಗೊಂಡು ಸುತ್ತೋಲೆ ಹೊರಡಿಸಿ ಹೇರಿಕೆ ಮಾಡುವದು ಸೂಕ್ತವಲ್ಲ. ಉತ್ತರ ಭಾರತ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸದಿರುವದು ನಮ್ಮ ತಪ್ಪಲ್ಲ, ಈಗಲಾದರೂ ಪ್ರಾರಂಭಿಸಲಿ ಆದರೆ ಸುತ್ತೋಲೆ ಮೂಲಕ ದಕ್ಷಿಣ ಭಾರತ ರಾಜ್ಯಗಳ ಮಕ್ಕಳಿಗೆ ಅನ್ಯಾಯ ಮಾಡುವದನ್ನು ನಾವು ಸಹಿಸಲ್ಲ. ಈ ಕುರಿತಂತೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.ಜನರಿಕ್ ಔಷಧಿ ವೈದ್ಯರಿಗೆ ಹೇರಿಕೆಯಾಗದಿರಲಿ:ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಪೂರೈಸುವ ವ್ಯವಸ್ಥೆ ಇರುವಾಗ ಅಲ್ಲಿ ಜನೌಷಧಿ ಕೇಂದ್ರದ ಮಳಿಗೆ ಆರಂಭಿಸುವದು ಯಾತಕ್ಕಾಗಿ, ಮತ್ತೇ ಜನೌಷಧಿ ಮಳಿಗೆ ಆಸ್ಪತ್ರೆಯಲ್ಲಿದ್ದರೆ ವೈದ್ಯರು ಚೀಟಿ ಬರೆಯುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು ಹೀಗಾಗಿ ಜನೌಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸುವದು ಸೂಕ್ತವಲ್ಲ ಅದನ್ನು ಬೇರೆ ಮಾರುಕಟ್ಟೆ ಪ್ರದೇಶಗಳಲ್ಲಿ ಸ್ಥಾಪಿಸುವದಕ್ಕೆ ಮಾತ್ರ ನನ್ನ ಸಹಮತವಿದೆ ಎಂದರು. ದರ ನಿಯಂತ್ರಣ ನೀತಿ ಜಾರಿಗೊಳಿಸಿ :ಜನರಿಕ್ ಔಷದಿಗಳನ್ನೇ ರೋಗಿಗಳಿಗೆ ನೀಡುವಂತೆ ಕೇಂದ್ರ ಸರ್ಕಾರ ನಿರ್ಬಂಧಿಸುವ ಕ್ರಮ ಆತಂಕಕಾರಿಯಾಗಿದ್ದು, ಸರ್ಕಾರ ಜನ ಹಿತದೃಷ್ಟಿಯಿಂದ ನಿರ್ಧಾರ ಕೈಗೊಂಡಿದ್ದರೂ ರೋಗಿಯ ಚಿಕಿತ್ಸೆಗೆ ಔಷಧಿಯ ಗುಣಮಟ್ಟವೂ ಅತ್ಯಂತ ಮಹತ್ವಪೂರ್ಣವಾಗಿದ್ದರಿಂದ ಮೊದಲು ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಗುಣಮಟ್ಟದ ಔಷಧಿಗಳನ್ನು ತಯಾರಿಸುವ ಕಂಪನಿಗಳ ಮೇಲೆ ದರ ನಿಯಂತ್ರಣ ನಿಯಮ ಜಾರಿಗೆ ತರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿಂದೆ ಪ್ರತಿ ರಾಜ್ಯದಿಂದ ಇಬ್ಬರು ತಜ್ಞ ವೈದ್ಯರು ಎಂಸಿಐಗೆ ನೇಮಕಗೊಂಡು ಸ್ವತಂತ್ರವಾಗಿ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿತ್ತು ಇದೀಗ ಜಾರಿಗೆ ಬಂದಿರುವ ಎನ್‌ಎಂಸಿ ಸಂಪೂರ್ಣ ಅಧಿಕಾರಿಗಳಿಂದ ತುಂಬಿಹೋಗಿ ಕೇಂದ್ರ ಸರ್ಕಾರದ ಒಂದು ಸಂಸ್ಥೆಯಾಗಿ ರೂಪಗೊಂಡಂತಿದೆ. ಹೀಗಾದಲ್ಲಿ ಪ್ರಜಾತಂತ್ರದ ಚಿಂತನೆ ಮೂಲೆಗುಂಪಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಔಷಧಿಗಳನ್ನೇ ಖರೀದಿಸಿ ರೋಗಿಗಳಿಗೆ ಪೂರೈಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಇದು ಹೊಸದೇನಿಲ್ಲ ಹೀಗಾಗಿ ಜನರಿಕ್ ವೈದ್ಯರಿಗೆ ಹೊಸದೇನಿಲ್ಲ. ಆದರೆ ಇದನ್ನು ಸಲಹೆಗಳನ್ನು ಆಮಂತ್ರಿಸದೇ ನಿಯಮ ರೂಪಿಸಿದರೆ ಸೂಕ್ತವಲ್ಲ ಎಂದು ಡಾ. ಶರಣಪ್ರಕಾಶ ಪಾಟೀಲ್ ನುಡಿದರು.