ಕನ್ನಡಪ್ರಭ ವಾರ್ತೆ ಹಿರಿಯೂರು
ದೊಡ್ಡದೊಂದು ನಿರೀಕ್ಷೆ ಮತ್ತು ಅಗಾಧವಾದ ನಂಬಿಕೆಯಿಟ್ಟು ಜನ ನನ್ನನ್ನು ಆರಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಕಾರ್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರ ಸಭೆ ನಡೆಸಿ ಅಹವಾಲು ಆಲಿಸಿದ ಅವರು, ಈ ವೇಳೆ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಬೇಕು. ಸಣ್ಣ ಪುಟ್ಟ ಕೆಲಸಗಳಿಗೆಲ್ಲಾ ಜನರು ಹತ್ತಾರು ಬಾರಿ ಕಚೇರಿಗಳಿಗೆ ಅಲೆಯುವಂತೆ ಮಾಡಬೇಡಿ. ಜನರ ವಿಶ್ವಾಸ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಆದಷ್ಟು ತಾಲೂಕನ್ನು ಅಭಿವೃದ್ಧಿ ಹಾದಿಯಲ್ಲಿ ಮುಂಚೂಣಿಗೆ ತಂದು ನಿಲ್ಲಿಸುವುದು ನಮ್ಮ ಗುರಿಯಾಗಿದೆ. ಜನರ ನಂಬಿಕೆ ಉಳಿಸುವ ಕೆಲಸ ಮಾಡಿಯೇ ಮಾಡುತ್ತೇನೆ. ಬಡವರನ್ನು ಯಾವುದೇ ಕಾರಣಕ್ಕೂ ಕಚೇರಿ ಅಲೆಸಬೇಡಿ. ಆತ್ಮತೃಪ್ತಿಯ ವೃತ್ತಿ ನಿರ್ವಹಣೆ ಬಹು ದೊಡ್ಡ ಶ್ರೀಮಂತಿಕೆ ಎಂಬುದನ್ನು ಯಾರೂ ಮರೆಯಬಾರದು. ಜನರ ಋಣವನ್ನು ಅವರ ಸೇವೆ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳೋಣ. ಈಗಾಗಲೇ ಇಡೀ ತಾಲೂಕಿಗೆ ಶುದ್ಧ ಕುಡಿವ ನೀರು ನೀಡುವ ಯೋಜನೆ ಕಾರ್ಯ ರೂಪದಲ್ಲಿದೆ. ತಾಲೂಕಿನ ರಸ್ತೆಗಳ ರಿಪೇರಿ ತುರ್ತಾಗಿ ಮಾಡುವ ಕ್ರಮ ಕೈಗೊಳ್ಳಲಾಗುವುದು. ಮಾತು ಕೊಟ್ಟಂತೆ ನಾವು ನಡೆದುಕೊಳ್ಳಲು ಸದಾ ಸಿದ್ಧರಿದ್ದೇವೆ. ಜನರೂ ಅಷ್ಟೇ ಕಾಂಗ್ರೆಸ್ ಪಕ್ಷದ ಮೇಲೆ ಮುಂದೆಯೂ ಇದೇ ರೀತಿಯ ವಿಶ್ವಾಸ ಇಟ್ಟುಕೊಳ್ಳಿ ಎಂದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಟ್ಟಿ ತಿಪ್ಪೇಸ್ವಾಮಿ ಹಾಗೂ 33 ಗ್ರಾಮ ಪಂಚಾಯ್ತಿಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು,ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರುಗಳು, ನಗರಸಭೆ ಸದಸ್ಯರು, ಯುವ ಕಾಂಗ್ರೆಸ್ ಸದಸ್ಯರು, ಕಾರ್ಮಿಕ ಘಟಕದ ಸದಸ್ಯರು ಉಪಸ್ಥಿತರಿದ್ದರು.