ಮಾಗಡಿ: ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಪಟ್ಟಣದ ಒಂದು ರಸ್ತೆಗೆ ಅವರ ಹೆಸರಿಡಲಾಗುವುದು ಎಂದು ಶಾಸಕ ಬಾಲಕೃಷ್ಣ ಭರವಸೆ ನೀಡಿದರು.
ಪಟ್ಟಣದ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸುವರ್ಣ ಸಂಭ್ರಮ ಕನ್ನಡ ಹಬ್ಬ ಹಾಗೂ ಚಂದ್ರಶೇಖರ ಕಂಬಾರರಿಗೆ ನುಡಿ ನಮನ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾಗಡಿ ತಾಲೂಕು ಅನೇಕ ಗಣ್ಯರಿಗೆ ಜನ್ಮ ನೀಡಿರುವುದು ನಮ್ಮ ಹೆಮ್ಮೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರು ಆಗಮಿಸಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು. ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ ಪುರಸಭೆಯಿಂದ ಜಾಗ ನಿಗದಿಪಡಿಸಲಾಗಿದೆ. ಭವನ ನಿರ್ಮಾಣಕ್ಕೂಶೀಘ್ರದಲ್ಲೇ ಹಣ ಬಿಡುಗಡೆ ಮಾಡಿಸಲಾಗುತ್ತದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ವ್ಯವಹಾರಕ್ಕೆ ಯಾವ ಭಾಷೆಯನ್ನು ಬಳಸಿದರೂ, ಮಾತೃ ಭಾಷೆಗೆ ಮೊದಲ ಗೌರವ ಕೊಡಬೇಕು. ಪ್ರತಿಯೊಬ್ಬ ಕನ್ನಡಿಗರು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದು ತಿಳಿಸಿದರು.ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಮಾತನಾಡಿ, ನಾಡಿನ ಪ್ರಜ್ಞಾವಂತ ಜನತೆ ಜಾನಪದ ರಂಗಭೂಮಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಜಾನಪದ ಪರಿಕರಗಳು, ಜಾನಪದ, ತತ್ವಪದಗಳು, ದಾಸರ ಪದಗಳು, ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪರಂಪರೆಯನ್ನು ಬಿಂಬಿಸುತ್ತವೆ. ದೇಶದ ಶ್ರೀಮಂತಿಕೆ ನಿಂತಿರುವುದೇ ಜಾನಪದ ಸೊಗಡಿನಲ್ಲಿ ಎಂದು ಹೇಳಿದರು.
ಕನ್ನಡ ಭಾಷೆ ನಿಂತ ನೀರಾಗದೆ ಸದಾ ಹರಿಯುವ ನದಿಯಾಗಬೇಕು. ಮರಾಠಿ, ಹಿಂದಿ ,ತಮಿಳು, ತೆಲುಗು ನಾನಾ ಭಾಷೆಗಳನ್ನು ಕರಗಿಸಿಕೊಂಡು ಕನ್ನಡ ರಾಜ್ಯದಲ್ಲಿ ಮತ್ತಷ್ಟು ಬೆಳೆಯಬೇಕು. ಕನ್ನಡಿಗರು ಕನ್ನಡ ಮಾತನಾಡುವುದರಿಂದ ನಮ್ಮ ತಾಯಿ ಬೇರು ಜಾನಪದವನ್ನು ಉಳಿಸುವುದರಿಂದ ಮಾತ್ರ ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಮುಂದಿನ ಪೀಳಿಗೆಗೆ ಶ್ರೀಮಂತವಾಗಿ ಉಳಿಸಿಕೊಡಬಹುದು ಎಂದರು.ತಾ.ಕಸಾಪ ಅಧ್ಯಕ್ಷ ತಿ.ನಾ.ಪದ್ಮನಾಭ್ ಮಾತನಾಡಿ, ಕರಲಮಂಗಲ ಶ್ರೀಕಂಠಯ್ಯ ಸಿರಿಬಲಯ್ಯ ಎಂಬ ಅಂಕ ಶಾಸ್ತ್ರದ ಪುಸ್ತಕ ತರ್ಜಮೆ ಮಾಡಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಪಡೆದು ಆ ಬಹುಮಾನದ ಹಣವನ್ನು ಜ್ಞಾನಪೀಠ ಪ್ರಶಸ್ತಿಗೆ ದತ್ತಿ ನಿಧಿ ಇಟ್ಟು ಔದಾರ್ಯತೆ ಮೆರೆದರು. ಇಂದು ದೇಶಾದ್ಯಂತ 59 ಗಣ್ಯರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿದೆ. ಅವರಲ್ಲಿ ಕಂಬಾರರು ಇದ್ದಾರೆಂಬುದು ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಗೌರವ ಎಂದರು.
2 ಸಾವಿರ ಅಡಿ ಉದ್ದದ ಕನ್ನಡ ಧ್ವಜ:ಪಟ್ಟಣದ ಎನ್ಇಎಸ್ ವೃತ್ತದಿಂದ ಕಲ್ಯಾಗೇಟ್ ಮಾರ್ಗವಾಗಿ ಡೂಮ್ ಲೈಟ್ ಸರ್ಕಲ್‌ವರೆಗೂ 2 ಸಾವಿರ ಅಡಿ ಉದ್ದದ ಕನ್ನಡ ಬಾವುಟವನ್ನು ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಸಿದ್ದಲಿಂಗಸ್ವಾಮಿ, ಡಾ.ತೋಟದ ಮನೆ ಗಿರೀಶ್, ವಿಜಯ್ ಕುಮಾರ್, ಲಿಖಿತ್ ಬರೆದಿರುವ ನಾಲ್ಕು ಪುಸ್ತಕಗಳನ್ನು ಚಂದ್ರಶೇಖರ ಕಂಬಾರರು ಬಿಡುಗಡೆ ಮಾಡಿದರು. ಕನ್ನಡ ಸ್ವಯಂ ಸೇವಾ ವೇದಿಕೆ ಅಧ್ಯಕ್ಷ ವಿದ್ಯಾರ್ಥಿ ಮಿತ್ರ ಕಿರಣ್ ಸಂಘದ ಲಾಂಛನ ಬಿಡುಗಡೆಗೊಳಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕಸಾಪ ಹಾಗೂ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಕನ್ನಡ ನಾಡು ನುಡಿ ವಿಚಾರದ ಪ್ರಬಂಧ ವಿಜೇತ ವಿದ್ಯಾರ್ಥಿಗಳಿಗೆ ಅಂಜನಾದ್ರಿ ಶಿಕ್ಷಣ ಸಂಸ್ಥೆಯಿಂದ ಬಹುಮಾನ ನೀರಿ ಪುರಸ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ರಮ್ಯಾ ನರಸಿಂಹಮೂರ್ತಿ, ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಡಿ.ಜೈಪಾಲ್, ಬಿಇಒ ಚಂದ್ರಶೇಖರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾಜಣ್ಣ, ಇಸಿಒ ಗಂಗಾಧರ್, ನಾರಾಯಣ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಂ, ಅನೇಕ ಮುಖಂಡರು ಭಾಗವಹಿಸಿದ್ದರು.
28ಮಾಗಡಿ1ಮಾಗಡಿಯಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಕನ್ನಡ ಹಬ್ಬಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರರು ಸನ್ಮಾನಿಸದರು. ಶಾಸಕ ಬಾಲಕೃಷ್ಣ ಇತರರು ಹಾಜರಿದ್ದರು.
28ಮಾಗಡಿ2 :ಮಾಗಡಿಯ ಸುವರ್ಣ ಸಂಭ್ರಮ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಕ್ಕಳು.