ಮುಂಡಗೋಡ: ಹಿರಿಯರ ಮಾರ್ಗದರ್ಶನದ ಕೊರತೆಯಿಂದಾಗಿ ಇಂದಿನ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ನಶಿಸಿ ಹೋಗುತ್ತಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ನಮ್ಮದು ಎಂದು ವಿಪ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಡಗೋಡ ಐಕ್ಯೂಎಸಿ ಮತ್ತು ಕಲಾ ವಿಭಾಗ ಆಶ್ರಯದಲ್ಲಿ ಜನಪದ ಉತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಾಣಿಗಳು ಮತ್ತು ಮನುಷ್ಯರಿಗೆ ಇರುವ ವ್ಯತ್ಯಾಸ ಏನೆಂದರೆ ಆಚಾರ, ವಿಚಾರ, ಭಾಷೆ, ನಡವಳಿಕೆ ಹೀಗೆ ಒಟ್ಟಾರೆಯಾಗಿ ಸಂಸ್ಕತಿ ಮತ್ತು ಜ್ಞಾನದಿಂದ ಮನುಷ್ಯ ಪ್ರಾಣಿಗಿಂತ ಭಿನ್ನವಾಗಿದ್ದಾನೆ. ಇದಕ್ಕೆ ಸಂಸ್ಕೃತಿ ಎನ್ನಲಾಗುತ್ತದೆ. ಸಂಸ್ಕೃತಿ, ಸಂಸ್ಕಾರ, ಕಲೆ, ನಮ್ಮ ಸಮಾಜ, ದೇಶ ನಮ್ಮ ರಾಷ್ಟ್ರ ಎಂಬ ವಕ್ತಿತ್ವ ಹೊಂದಿದಾಗಲೇ ಮನುಷ್ಯ ಪರಿಪೂರ್ಣನಾಗಲು ಸಾಧ್ಯ. ಉಡುಗೆ, ತೊಡಿಗೆ ಸಂಪ್ರದಾಯ, ಪದ್ಧತಿಗಳನ್ನು ಮನೆಯಿಂದಲೇ ಆಚರಣೆಗೆ ತಂದು ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕಿದೆ.
ಹಳೆತನವನ್ನು ನಾವು ಮರೆಯುತ್ತಿದ್ದೇವೆ. ಗ್ರಾಮೀಣ ಸೊಗಡನ್ನು ಅನುಭವಿಸಿದವರಿಗೆ ಅದರ ಮಹತ್ವ ಏನು ಎಂಬುವುದು ಗೊತ್ತಿರುತ್ತದೆ. ಕಡೆ ಪಕ್ಷ ಸಂಸ್ಕೃತಿ ನೋಡಲಿಕ್ಕಾದರೂ ಸಿಗಲಿ ಎಂಬ ಕಾರಣಕ್ಕೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ ಪಾಟೀಲ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪಾಶ್ಚಿಮಾತ್ಯದ ಬರಾಟೆಯಿಂದ ಗ್ರಾಮೀಣ ಸೊಗಡು ನಶಿಸಿ ಹೋಗುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸುವ ಫಣ ತೊಟ್ಟು ನಿರಂತರ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ನಾವು ಕೂಡ ಕೈಜೋಡಿಸಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜು, ಗೊಟಗೊಡಿ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪುರಸ್ಕೃತ ಜೋತಿರ್ಲಿಂಗ ಹೊನಕಟ್ಟಿ, ಧಾರವಾಡ ದ ಜಾನಪದ ಕಲಾವಿದ ಬಿ.ಎನ್ ಗೊರವರ, ಜಾನಪದ ಹಾಡುಗಾರ್ತಿ ಸುಲೋಚನಾ ರಾಮಣ್ಣನವರ, ಯಲ್ಲಾಪುರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಾಗೂ ಯಕ್ಷಗಾನ ಕಲಾವಿದರಾದ ದತ್ತಾತ್ರೇಯ ಗಾಂವಕರ ಮುಂಡಗೋಡ ಪಿಎಸ್ಐ ಪರಶುರಾಮ ಮಿರ್ಜಿಗಿ, ಬಸವರಾಜ ಸಂಗಮೇಶ್ವರ ಮುಂತಾದವರು ಉಪಸ್ಥಿತರಿದ್ದರು.