ಕನ್ನಡಪ್ರಭವಾರ್ತೆ ಸಾಗರ
ಲೋಕಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಅಭ್ಯರ್ಥಿ ಗೀತಾ ಅವರಿಗೆ ಅತಿಹೆಚ್ಚು ಮತ ಕೊಡಿಸುವ ಹೊಣೆಗಾರಿಕೆ ನಮ್ಮದಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಮನೆಮನಸ್ಸಿಗೆ ತಲುಪಿದೆ. ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ಪಟ್ಟಣದ ಗಾಂಧಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕರೆಯಲಾಗಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೋಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬಂದ ಮೇಲೆ ₹೨೦ ಕೋಟಿ ಮೊದಲ ಕಂತು ಬಿಡುಗಡೆಯಾಗಿದ್ದು, ಇನ್ನು ₹೭೦ ಕೋಟಿ ಸದ್ಯದಲ್ಲಿಯೆ ಬಿಡುಗಡೆಯಗಲಿದೆ. ಬಿ.ವೈ.ರಾಘವೇಂದ್ರ ಮತ್ತು ಎಚ್.ಹಾಲಪ್ಪ ಕಾಮಗಾರಿಗಳಿಗೆ ಆದೇಶ ಮಾಡಿದ್ದಾರೆ ವಿನಾಃ ಯಾವುದಕ್ಕೂ ಹಣ ಬಿಡುಗಡೆ ಮಾಡಿಸಿರಲಿಲ್ಲ ಎಂದು ದೂರಿದರು.
ಹಿಂದಿನ ಸರ್ಕಾರ ಜನಪರವಾಗಿ ಕೆಲಸ ಮಾಡಿಲ್ಲ. ಜನಪರ ಕೆಲಸ ಮಾಡುವ ಜೊತೆಗೆ ಅಭಿವೃದ್ಧಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಜನರ ಆಶೋತ್ತರಗಳಿಗೆ ಪೂರಕವಾಗಿ ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಗೀತಾ ನಮ್ಮ ಅಭ್ಯರ್ಥಿ. ಆದರೆ ನಾವೇ ಸ್ಪರ್ಧೆ ಮಾಡಿದ್ದೇವೆ ಎನ್ನುವ ರೀತಿಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಮಹಿಳೆಯರು, ರೈತರು, ಬಡವರಿಗೆ ನೀಡಿರುವ ಯೋಜನೆಗಳು ಯಾವ ಸರ್ಕಾರವೂ ನೀಡಿರಲಿಲ್ಲ. ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದಕ್ಕಿಂತ ಸಂವಿಧಾನ ಬದಲಾವಣೆ ಮಾಡುವತ್ತ ಹೆಚ್ಚು ಆಸಕ್ತಿ ಹೊಂದಿದೆ. ಇಂತಹ ಹೊತ್ತಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪ್ರಜಾಪ್ರಭುತ್ವದ ಮೌಲ್ಯ ಉಳಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಅತ್ಯಗತ್ಯ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಎನ್. ಮಾತನಾಡಿದರು. ಎಚ್.ಎಂ.ರವಿಕುಮಾರ್, ಐ.ಎನ್.ಸುರೇಶಬಾಬು, ಕೆ.ಹೊಳೆಯಪ್ಪ, ತಸ್ರೀಫ್, ಸರಸ್ವತಿ ನಾಗರಾಜ್, ಗಣಪತಿ ಮಂಡಗಳಲೆ, ಲಲಿತಮ್ಮ, ಮಹಾಬಲ ಕೌತಿ, ಮೈಕೆಲ್ ಡಿಸೋಜ ಇನ್ನಿತರರು ಹಾಜರಿದ್ದರು.