ರಾಮನಗರ: ಅಕ್ಷರ ಜ್ಞಾನವೇ ಇಲ್ಲದಿದ್ದ ಮೂಲ ಜನಪದ ಕಲಾವಿದರು ಹಾಡಿದ್ದ ಪ್ರಾಸಬದ್ಧ ಹಾಡುಗಳನ್ನು, ಯುವ ಸಮುದಾಯ ತಿರುಚಿ ಹಾಡುತ್ತಿರುವುದು ನೋವಿನ ಸಂಗತಿ ಎಂದು ಅಂತಾರಾಷ್ಟ್ರೀಯ ಮಟ್ಟದ ಗಾಯಕ ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ವಿಜಯನಗರದ ಬನ್ನಿಮಂಟಪದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನಾದ ಸಂಜೀವಿನಿ ಸಾಂಸ್ಕ್ರತಿಕ ಕಲಾ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅನಕ್ಷರಸ್ಥ ಜಾನಪದರ ಬಾಯಿಂದ ಬಾಯಿಗೆ ಪಸರಿಸಿದ ಜನಪದ ಕಲೆಯನ್ನು ಕಲಿಯುವ ಅಭ್ಯಾಸವನ್ನು ಯುವ ಸಮುದಾಯ ಓದಿನ ಜೊತೆಗೆ ಮಾಡಬೇಕು. ಜನಪದರ ಮಾತುಗಳು ಎಂದಿಗೂ ಸುಳ್ಳಾಗುವುದಿಲ್ಲ. ಬದಲಿಗೆ ಸಮಾಜದಲ್ಲಿ ಸಂತೋಷದ ಬದುಕನ್ನು ಕಟ್ಟಿಕೊಡುತ್ತವೆ ಎಂದು ತಿಳಿಸಿದರು.
ಜನಪದ ಕಲೆಯನ್ನು ಕೇಳಿ, ಕಲಿತು ಹಾಡುವವರು ಮುಂದಿನ ಜನಾಂಗಕ್ಕೆ ಕಲಿಸಿ ಪೋಷಿಸುವ ಕೆಲಸ ಮಾಡಬೇಕು. ಕಲಾವಿದರ ದಿನನಿತ್ಯದ ಬದುಕು ಕಷ್ಟಕರವಾಗಿ ಸಾಗಿಸಬೇಕಿದೆ. ಸರ್ಕಾರ ಟ್ರಸ್ಟ್ ಗಳಿಗೆ ಆರ್ಥಿಕ ನೆರವು ನೀಡುವ ಅಗತ್ಯವಿದೆ ಎಂದು ಮಹದೇವಸ್ವಾಮಿ ಹೇಳಿದರು.ನಗಾರಿ ಬಾರಿಸುವ ಮೂಲಕ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಜಾನಪದ ಎಲ್ಲರನ್ನು ಆಸ್ವಾದಿಸುವ ಕಲೆಯಾಗಿದೆ. ಎಲ್ಲರಲ್ಲೂ ಇರುವ ಪ್ರತಿಭೆಯನ್ನು ಅನಾವರಣ ಮಾಡಲು ಇಂತಹ ವೇದಿಕೆಗಳು ನೆರವಾಗಲಿವೆ. ಸಾಂಸ್ಕೃತಿಕ ಕ್ಷೇತ್ರ ಒತ್ತಡದ ಜೀವನದಲ್ಲಿರುವ ವ್ಯಕ್ತಿಯನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಅದಕ್ಕೆ ಪೂರಕವಾಗಿ ಟ್ರಸ್ಟ್ ಯಶಸ್ವಿ ಕಾರ್ಯಕ್ರಮಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಜನಪದ ಕಲಾವಿದರಿಂದ ಗಾಯನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಮಹದೇವಸ್ವಾಮಿ ಅವರು ಹಾಡಿದ ಸೋಜುಗಾರ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮೇಲೆ ದುಂಡು ಮಲ್ಲಿಗೆ.... ಅನ್ಯಾಯಕಾರಿ ಬ್ರಹ್ಮ ಸುಂದರನ ಮಾಡಬಹುದಾ... ದೇವ ಮಹದೇವ ಬಾರೋ ಸ್ವಾಮಿ ಮಲೆಯ ಮಹದೇವ ಬಾರೋ.... ಜಾನಪದ ಹಾಡುಗಳಿಗೆ ನೆರೆದಿದ್ದ ಪ್ರೇಕ್ಷಕರು ತಲೆ ತೂಗಿದರು.ಕಲಾವಿದರಾದ ಮೈಸೂರು ಗುರುರಾಜ್, ನಗರಸಭೆ ಸದಸ್ಯರಾದ ಶಿವಸ್ವಾಮಿ(ಅಪ್ಪಿ), ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿಸುರೇಶ್, ಆಶ್ರಯ ಸಮಿತಿ ಸದಸ್ಯ ಶಿವಕುಮಾರಸ್ವಾಮಿ, ಟ್ರಸ್ಟ್ ಅಧ್ಯಕ್ಷೆ ಶಶಿಕಲಾ, ಸಂಸ್ಥಾಪಕ ರಘು, ವಾರ್ಡ್ ಮುಖಂಡರಾದ ಚಂದ್ರು, ಶಿವಶಂಕರ್, ಕೃಷ್ಣಮೂರ್ತಿ, ಗಾಯಕರಾದ ಶಿವು, ಚೌ.ಪು.ಸ್ವಾಮಿ, ಯಶಸ್ವಿನಿ, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ್.............ಜಿಲ್ಲೆಯಲ್ಲಿ ಕಲೆಯನ್ನೇ ಪೂಜಿಸಿ ಆರಾಧಿಸುವ ಜನಪದ ಕಲಾವಿದರು ಇದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ ಗೌರವಿಸ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಿರಿಯ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಕಲೆಯನ್ನು ಪೋಷಿಸುವ ಅಗತ್ಯವಿದೆ.
-ಇಕ್ಬಾಲ್ ಹುಸೇನ್ ಶಾಸಕರು, ರಾಮನಗರ4ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ವಿಜಯನಗರದ ಬನ್ನಿಮಂಟಪದ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಜನಪದ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದರು.