ಭವಿಷ್ಯದಲ್ಲಿ ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ: ಶಿವರಾಮ ಹೆಬ್ಬಾರ್

KannadaprabhaNewsNetwork |  
Published : Apr 11, 2026, 02:30 AM IST
ಮುಂಡಗೋಡ ಪಟ್ಟಣದ ತಾಪಂ ಕಾರ್ಯಾಲಯ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಮುಂಡಗೋಡ ಪಟ್ಟಣದ ತಾಪಂ ಕಾರ್ಯಾಲಯ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಂಡಗೋಡ: ಗರ್ಭಕೋಶ ಕ್ಯಾನ್ಸರ್ ಬರದಂತೆ ತಡೆಯಲು ೮ ಹಾಗೂ ೯ನೇ ತರಗತಿ ಮಕ್ಕಳಿಗೆ ಕೇಂದ್ರ ಹಾಗೂ ಸರ್ಕಾರ ವ್ಯಾಕ್ಸಿನ್ ನೀಡುವಂತಹ ಕಾರ್ಯಕ್ರಮ ಜಾರಿ ಮಾಡಿದ್ದು, ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು, ಶಿಕ್ಷಣ ಇಲಾಖೆ ಕೂಡ ಕೈಜೋಡಿಸಿದರೆ ಭವಿಷ್ಯದಲ್ಲಿ ಕ್ಯಾನ್ಸರ್‌ಮುಕ್ತ ಸಮಾಜ ನಿಮಾಣ ಮಾಡಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಗುರುವಾರ ಪಟ್ಟಣದ ತಾಪಂ ಕಾರ್ಯಾಲಯ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾಲಕರ ಕೀಳರಿಮೆ ಹಾಗೂ ಭಯದಿಂದ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಅಲ್ಲದೇ ಕಾಯಿಲೆ ತಡೆಯಲು ವ್ಯವಸ್ಥಿತವಾಗಿ ಸಿದ್ಧರಾಗಿರಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಸಣ್ಣ ಪುಟ್ಟ ಸಮಸ್ಯೆಗೂ ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಲಾಗುತ್ತದೆ, ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ನರೇಂದ್ರ ಪವಾರ, ಇಲ್ಲಿಯ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ಮತ್ತು ಫಿಜಿಷಿಯನ್ ಇಲ್ಲದೆ ಇರುವ ಕಾರಣಕ್ಕೆ ತುರ್ತು ಪರಿಸ್ಥಿತಿ ಕಂಡು ಬಂದರೆ ಹುಬ್ಬಳ್ಳಿಗೆ ಕಳುಹಿಸುವುದು ಅನಿವಾರ್ಯ ಎಂದು ಹೇಳಿದರು.

ಅರಣ್ಯ ಇಲಾಖೆ ಮತ್ತು ಅರಣ್ಯ ಅತಿಕ್ರಮಣದಾರರ ತೀವ್ರ ಗೊಂದಲವಿದ್ದು, ಯಾವ ಕಾರಣಕ್ಕೂ ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿಕೊಳ್ಳಲು ಅವಕಾಶ ನೀಡಬೇಡಿ. ಜತೆಗೆ ಜಿಪಿಎಸ್ ಆಗಿರುವ ಅರಣ್ಯ ಅತಿಕ್ರಮಣದಾರರಿಗೆ ತೊಂದರೆ ನೀಡದಂತೆ ಹೇಳಿದ ಅವರು, ಗ್ಯಾಸ್ ಸಮಸ್ಯೆ ಇರುವ ಕಾರಣ ಬಹುತೇಕರು ಸೌದೆಒಲೆ ಅವಲಂಬಿಸುವುದು ಅನಿವಾರ್ಯವಾಗಿದೆ. ಕೆಲವೆಡೆ ಅರಣ್ಯ ಪ್ರದೇಶದಲ್ಲಿ ಬಿದ್ದ ಮರಗಳನ್ನು ವರ್ಷ ಕಳೆದರೂ ಹಾಗೆಯೇ ಬಿಡಲಾಗುತ್ತಿದೆ. ಬಿದ್ದ ಜಾಗದಲ್ಲಿಯೇ ಕಟ್ಟಿಗೆ ಸಂಪೂರ್ಣ ಕೊಳೆತು ಹೋಗುತ್ತಿವೆ. ಅವುಗಳನ್ನು ಹರಾಜು ಮಾಡಿದರೆ ಸರ್ಕಾರಕ್ಕೆ ಹಣ ಬರುತ್ತದೆ. ಅಲ್ಲದೇ ಅಕೇಷಿಯಾ, ನೀಲಗಿರಿ ಬದಲು ಪಶು ಪಕ್ಷಿಗಳ ಹಿತದೃಷ್ಟಿಯಿಂದ ಅರಣ್ಯ ಪ್ರದೇಶದಲ್ಲಿ ಹಣ್ಣು-ಹಂಪಲು ಗಿಡಗಳನ್ನು ನೆಡುವಂತೆ ಹೇಳಿದ ಶಾಸಕರು, ಅರಣ್ಯ ಪ್ರದೇಶದ ಕೆರೆಗಳನ್ನು ಇಲಾಖೆಯಿಂದಾದರೂ ಹೂಳೆತ್ತಿ ಅಥವಾ ರೈತರಿಗಾದರೂ ಹೂಳೆತ್ತಿ ಮಣ್ಣು ಸಾಗಿಸಲು ಅವಕಾಶ ಮಾಡಿ ಕೊಡಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ಯುದ್ಧದ ಪರಿಣಾಮ ಈ ಬಾರಿ ರಸಗೊಬ್ಬರದ ಕೊರತೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ಗೊಬ್ಬರವನ್ನು ಮಿತವಾಗಿ ಬಳಸಿ, ಸಾವಯವ ಗೊಬ್ಬರ ಬಳಸುವುದರಿಂದ ಭೂಮಿ ಮತ್ತು ಜನರ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ತಾಲೂಕಿಗೆ ಬರುವ ಗೊಬ್ಬರವನ್ನು ಪಕ್ಕದ ಜಿಲ್ಲೆಗೆ ಸಾಗಾಟವಾಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಅಧಿಕಾರರಿಗೆ ಸೂಚಿಸಿದರು.

ತಾಲೂಕಿನಲ್ಲಿ ಮಾವು ಮತ್ತು ಶುಂಠಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದರೂ ಬೆಳೆ ವಿಮೆ ಮಾಡಿಸುವವರ ಸಂಖ್ಯೆ ಕಡಿಮೆ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ಬೆಳೆಗಳು ವಿಮಾ ವ್ಯಾಪ್ತಿಯಿಂದ ಬಿಟ್ಟುಹೋಗಲಿದೆ, ಈಗಲೇ ಎಚ್ಚೆತ್ತುಕೊಂಡು ರೈತರು ವಿಮೆ ಮಾಡಿಸುವಂತೆ ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಡಿಪಿ ಸದಸ್ಯರಾದ ಎಂ.ಎನ್. ದುಂಡಸಿ, ಎಚ್.ಎಂ. ನಾಯ್ಕ, ದ್ಯಾಮಣ್ಣ ಮಡ್ಲಿ, ಗೋಪಾಲ ಪಾಟೀಲ್, ಭಾರತಿ ಮನ್ನಪ್ಪಗೌಡ್ರ, ತಾಪಂ ಇಒ ಟಿ.ವೈ. ದಾಸನಕೊಪ್ಪ, ತಹಸೀಲ್ದಾರ್‌ ಶಂಕರ ಗೌಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿಕಾರರ ಮಗಳು ಪಿಯುಸಿಯಲ್ಲಿ ಜಿಲ್ಲೆಗೆ ಮೂರನೇ ಟಾಪರ್
ಕದ್ರಿ ಕಂಬಳ ಜಂಕ್ಷನ್‌ ರಸ್ತೆ 1 ಕೋಟಿ ರು.ಗಳಲ್ಲಿ ಕಾಂಕ್ರಿಟ್‌ಗೆ ಶಿಲಾನ್ಯಾಸ