ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಗಳಿಸಲು ಸಾಧ್ಯ

KannadaprabhaNewsNetwork | Published : Feb 1, 2024 2:03 AM

ಸಾರಾಂಶ

ರಕ್ತಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವವರು ಮತ್ತು ಅಪಘಾತದಂತಹ ತುರ್ತು ಸಂದರ್ಭಗಳಿಗೆ ರಕ್ತದ ಅಗತ್ಯತೆ ಇರುತ್ತದೆ. ರಕ್ತದಾನದ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಇದರಿಂದಾಗಿ ಬಹುತೇಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ, ರಕ್ತದಾನ ಮಾಡುವುದರಿಂದ ಯಾವುದೇ ಹಾನಿಯಿಲ್ಲ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ರಿಯಲ್ಲಿ ಬುಧವಾರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ರಕ್ತದಾನದ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಇದರಿಂದಾಗಿ ಬಹುತೇಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ, ರಕ್ತದಾನ ಮಾಡುವುದರಿಂದ ಯಾವುದೇ ಹಾನಿಯಿಲ್ಲ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಬುಧವಾರ ತಾಲೂಕಿನ ಉದ್ರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಯುವಕರ ಸಂಘ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಗ್ರಾಮ ಪಂಚಾಯಿತಿ ಉದ್ರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 4ನೇ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವವರು ಮತ್ತು ಅಪಘಾತದಂತಹ ತುರ್ತು ಸಂದರ್ಭಗಳಿಗೆ ರಕ್ತದ ಅಗತ್ಯತೆ ಇರುತ್ತದೆ. ಪ್ರತಿನಿತ್ಯ ಜನರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಕ್ತದ ಕೊರತೆಯಿಂದ ಸಾಕಷ್ಟು ಜನ ತೊಂದರೆಗೆ ಒಳಗಾಗುತ್ತಿದ್ದಾರೆ. ಯುವಪೀಳಿಗೆ ರಕ್ತದಾನಕ್ಕೆ ಮುಂದಾಗುವುದರೊಂದಿಗೆ ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ರಕ್ತದಾನ ಮಾಡುವುದರಿಂದ ಮನುಷ್ಯನ ಆಯಸ್ಸು ವೃದ್ಧಿ ಆಗುವುದರೊಂದಿಗೆ ಉತ್ತಮ ಆರೋಗ್ಯ, ಚಟುವಟಿಕೆಯಿಂದ ಇರಬಹುದು. ಹೀಗಾಗಿ, ಪರೋಪಕಾರದ ಧ್ಯೇಯ ಇಟ್ಟುಕೊಂಡು ರಕ್ತದಾನ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು ಎಂದು ತಿಳಿಸಿದರು.

ಆಯುಷ್ ವೈದ್ಯಾಧಿಕಾರಿ ಡಾ. ಎಂ.ಕೆ. ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು ಕಲ್ಪನೆ. ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ, ಕಣ್ಣು, ಹೃದಯ ಇನ್ನಿತರ ಭಾಗಗಳನ್ನು ಇನ್ನೊಬ್ಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದೆ. ಅವುಗಳನ್ನು ದಾನದ ರೂಪವಾಗಿ ನೀಡುವುದು ಪುಣ್ಯದ ಕೆಲಸ. ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾರೇ ಮುಂದಾದರೂ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಇಂದು ನಡೆದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.

ತಾ.ಪಂ. ಇಒ ಡಾ. ಪ್ರದೀಪ್‌ಕುಮಾರ್ ಮಾತನಾಡಿ, ತಾಲೂಕು ಸರ್ಕಾರಿ ವೈದ್ಯರಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರಶಂಶನೀಯವಾಗಿದೆ ಎಂದರು.

ಪತ್ರಕರ್ತ ಮಧುಕೇಶ್ವರ 24ನೇ ಬಾರಿಗೆ ರಕ್ತದಾನ ಮಾಡಿದ್ದು, ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಾನ ಪ್ರಮಾಣಪತ್ರ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ತಾರ, ರಕ್ತನಿಧಿ ಸಂಸ್ಥೆ ಮುಖ್ಯಸ್ಥೆ ಡಾ. ಗಂಗಾ, ತಾಲೂಕು ವೈದ್ಯಾಧಿಕಾರಿ ಡಾ. ಪ್ರಭು ಸಾಹುಕಾರ್, ಮೆಗ್ಗಾನ್ ರಕ್ತನಿಧಿ ಕೇಂದ್ರದ ಹನುಮಂತಪ್ಪ, ಶಿಕ್ಷಕ ರಮೇಶ ನಾಯ್ಕ, ನಾಗರಾಜ, ಗ್ರಾಮಸ್ಥರಾದ ಸದಾ ಪಾಟೀಲ್, ಚಾಲುಕ್ಯ ಪಾಟೀಲ್, ತಾರಕೇಶ್ ಗೌಳಿ, ಸತೀಶ್‌ಗೌಡ, ದೇಸಾಯಿಗೌಡ, ಸುರೇಂದ್ರಗೌಡ, ಹನುಮಂತಪ್ಪ, ದರ್ಶನ್, ಪ್ರದೀಪ್, ಮಹೇಶ್‌ಗೌಡ, ಪುರುಷೋತ್ತಮ, ಸುರೇಶ, ಶ್ಯಾಮಣ್ಣ, ಕರಾವೇ ತಾಲೂಕು ಅಧ್ಯಕ್ಷ ಬಲೀಂದ್ರಪ್ಪ ಚಿಕ್ಕಾವಲಿ ಸೇರಿದಂತೆ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

- - -

ಕೋಟ್‌

ಬಹುತೇಕ ಜನರಲ್ಲಿ ರಕ್ತ ದಾನದ ಕುರಿತಾಗಿ ವಿವರವಾದ ಮಾಹಿತಿ ಇಲ್ಲ. ಹೀಗಾಗಿ, ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ. ಹಣ ಕೊಟ್ಟ ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆ ಆಗಬೇಕಾಗಿದೆ

ಡಾ. ಎಂ.ಕೆ.ಮಹೇಶ್‌, ಆಯುಷ್‌ ವೈದ್ಯಾಧಿಕಾರಿ

- - - -31ಕೆಪಿಸೊರಬ01:

ಸೊರಬ ತಾಲೂಕಿನ ಉದ್ರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 4ನೇ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಪತ್ರಕರ್ತ ಮಧುಕೇಶ್ವರ ಅವರಿಗೆ ಸಚಿವ ಮಧು ಬಂಗಾರಪ್ಪ ಪ್ರಮಾಣಪತ್ರ ನೀಡಿದರು.

Share this article