ಮಹಿಳೆಯರ ಮೇಲೆ ಶೋಷಣೆ ನಿಲ್ಲದಿರುವುದು ವಿಷಾದನೀಯ

KannadaprabhaNewsNetwork | Published : Mar 25, 2025 12:46 AM

ಸಾರಾಂಶ

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಈ ಶ್ಲೋಕವನ್ನು ನಾವೆಲ್ಲ ಕೇಳುತ್ತ ಬಂದಿದ್ದರೂ ಇಂದಿನ ಕಾಲದಲ್ಲಿ ಸಹ ಮಹಿಳೆಯರ ಮೇಲೆ ಶೋಷಣೆ ನಿಲ್ಲದಿರುವುದು ವಿಷಾದನೀಯ ಎಂದು ಬೆಳಗಾವಿಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲದ

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಈ ಶ್ಲೋಕವನ್ನು ನಾವೆಲ್ಲ ಕೇಳುತ್ತ ಬಂದಿದ್ದರೂ ಇಂದಿನ ಕಾಲದಲ್ಲಿ ಸಹ ಮಹಿಳೆಯರ ಮೇಲೆ ಶೋಷಣೆ ನಿಲ್ಲದಿರುವುದು ವಿಷಾದನೀಯ ಎಂದು ಬೆಳಗಾವಿಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಶನಿವಾರ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ನಡೆದ ಮಹಿಳಾ ಸಂಸ್ಕೃತಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೊಟ್ಟಿಲು ತೂಗುವ ಕೈ ರಾಷ್ಟ್ರವನ್ನೇ ಮುನ್ನೆಡೆಸಬಲ್ಲಳು ಎಂಬುವುದಕ್ಕೆ ಪ್ರಸ್ತುತ ರಾಷ್ಟ್ರಪತಿಯೇ ಸಾಕ್ಷಿಯಾಗಿದ್ದಾರೆ ಎಂದರು.ಉಪವಿಭಾಗಾಧಿಕಾರಿ ಪ್ರಭಾವತಿ ಪಕ್ಕೀರಪೂರ ಮಾತನಾಡಿ, ಇಂತಹ ಮಹಿಳಾ ಸಂಸ್ಕೃತಿ ಹಬ್ಬವನ್ನು ಆಚರಿಸುವ ಮೂಲಕ ನಮ್ಮ ನಾಡಿನ ಸಂಸ್ಕೃತಿಯು ಇಂದಿನ ಯುವ ಪೀಳಿಗೆಗೆ ಪರಿಚಯ ಮಾಡಿಕೊಡುವುದರ ಮೂಲಕ ಗಣಾಚಾರಿ ಶಿಕ್ಷಣ ಸಂಸ್ಥೆಯು ಸದಾ ಯುವ ಪೀಳಿಗೆಗೆ ಸಾಂಸ್ಕ್ರತಿಕ ವೈಭವವನ್ನು ಉಣಬಡಿಸುವ ಕಾರ್ಯ ಮಾಡುತ್ತಿರುವುದು ಮೆಚ್ಚುವಂತದ್ದು. ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾದ ಮಹಿಳೆ ಪ್ರಸ್ತುತ ರಂಗಗಳಲ್ಲಿಯೂ ಸಾಧನೆ ಮಾಡಿ ಮಹಿಳಾ ಕುಲವನ್ನು ಎತ್ತಿ ಹಿಡಿಯುವಂತಹ ಶ್ರೇಯಸ್ಸನ್ನು ಮಾಡುತ್ತಿರುವುದು ದೇಶಕ್ಕೆ ಕೀರ್ತಿ ತರುವಂತದ್ದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರ್ದಿಷ್ಟ ಗುರಿ ಹೊಂದಿ ಅದನ್ನು ಸಾಧಿಸುವ ಛಲ ಹೊಂದಬೇಕು. ಅಂದಾಗ ಮಾತ್ರ ಶ್ರಮಪಟ್ಟು ಶಿಕ್ಷಣ ಪೂರೈಸಿದ್ದು ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಬಿ.ಬಿ.ಗಣಾಚಾರಿ, ಸವಿತಾ ರವಿ ನಾಯ್ಕ, ಅಪರ್ಣಾ ಗಣಾಚಾರಿ, ಕಿರುತೆರೆ ನಟಿ ರಾಜೇಶ್ವರಿ ದೇಶಪಾಂಡೆ, ಸರಿಗಮಪ ಸೀಸನ್ 21ರ ಸ್ಪರ್ಧಿ ಅನಘಾ ಪಾಟೀಲ, ಸುನೀತಾ ಚಿಕ್ಕೊಪ್ಪ ವೇದಿಕೆ ಮೇಲಿದ್ದರು.ಕು.ಶ್ರೇಯಾ ಭದ್ರಶೆಟ್ಟಿ ಸ್ವಾಗತಿಸಿದಳು, ಕು.ಮೇಘಾನಾ ಅಂಗಡಿ ಮತ್ತು ನೀಶಾ ಮುಕಂದ ನಿರೂಪಿಸಿದರು. ಕುಮಾರಿ ವಿಜಯಲಕ್ಷ್ಮೀ ಉಳವಿ ವಂದಿಸಿದಳು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪರಂಪರೆ ಬಿಂಬಿಸುವ ರೂಪಕಗಳ ಪ್ರದರ್ಶನ

ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿಗೆ ಗಣ್ಯರು, ವಿದ್ಯಾರ್ಥಿನಿಯರು ತೆರಳಿ ಮಾಲಾರ್ಪಣೆ ನೆರವೇರಿಸಿದರು. ನಂತರ ಕಾಲೇಜುವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಹಳ್ಳಿಯ ಸೊಬಗಿನ ಸಾಂಸ್ಕ್ರತಿಕ ಪರಂಪರೆ ಬಿಂಬಿಸುವ ರೂಪಕಗಳನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿ ರಂಜಿಸಿದರು. ದೇಶಿ ಉಡುಗೆ ತೊಟ್ಟು ಸಂಭ್ರಮಿಸಿದರು. ಕಾಲೇಜಿನ ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ, ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕಾಲೇಜಿನಲ್ಲಿನ ಹಮ್ಮಿಕೊಂಡ ಮಹಿಳಾ ಸಂಸ್ಕ್ರತಿಯ ಹಬ್ಬ ನಮ್ಮ ನೆಲದ ಪರಂಪರೆ, ಅದರ ಶ್ರೀಮಂತಿಕೆಯನ್ನು ನೆನಪಿಸುವ ವಿಶಿಷ್ಟ ಕಾರ್ಯವನ್ನು ವಿದ್ಯಾರ್ಥಿನಿಯರು ಮಾಡಿರುವುದು ಪ್ರಶಂಸನೀಯವಾಗಿದೆ. ವೈವಿದ್ಯತೆಯಲ್ಲಿ ಏಕತೆ ಸಾರಿದ ಭಾರತದಲ್ಲಿ ಜಾನಪದ ಸಾಂಸ್ಕ್ರತಿಕ ಆಛರಣೆಗಳು ಸದಾ ಕಾಲ ಮೆರೆಯಬೇಕು.

-ಸೌಮ್ಯ ಬಾಪಟ,

ಬೆಳಗಾವಿಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ.

Share this article