ಅಧ್ಯಕ್ಷರಾಗಿ ಗಣೇಶ್ ಕುಮಾರಸ್ವಾಮಿ ಆಯ್ಕೆ

KannadaprabhaNewsNetwork | Published : May 4, 2025 1:36 AM

ಸಾರಾಂಶ

ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಎನ್‌ಡಿಎ ಅಭ್ಯರ್ಥಿ ಗೆಲುವಿನ ಅಂತರವನ್ನು 16 ರಿಂದ 18ಕ್ಕೆ ಏರಿಸಿದರು

ಕನ್ನಡಪ್ರಭ ವಾರ್ತೆ ಹುಣಸೂರು ಹುಣಸೂರು ನಗರಸಭೆಯ ಅಧ್ಯಕ್ಷರಾಗಿ ಎನ್‌ಡಿಎ ಕೂಟದ ಬಿಜೆಪಿಯ ಗಣೇಶ್ ಕುಮಾರಸ್ವಾಮಿ ಆಯ್ಕೆಯಾದರು. ಇಬ್ಬರು ಕಾಂಗ್ರ್ರೆಸ್ ಸದಸ್ಯರು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಮೈತ್ರಿ ಅಭ್ಯರ್ಥಿ ಗೆಲುವಿನ ಅಂತರವನ್ನು ಹೆಚ್ಚಿಸಿದ್ದು ವಿಶೇಷವಾಗಿತ್ತು. ಪಟ್ಟಣದ ನಗರಸಭೆ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಅಧ್ಯಕ್ಷಗಾದಿ ಚುನಾವಣೆಯಲ್ಲಿ 26ನೇ ವಾರ್ಡ್‌ನ ಬಿಜೆಪಿ ಸದಸ್ಯ ಗಣೇಶ್ ಕುಮಾರಸ್ವಾಮಿಗೆ ಎನ್‌ಡಿಎ ಮೈತ್ರಿಕೂಟದ ಜೆಡಿಎಸ್‌ನ 7 ಸದಸ್ಯರು, ಅಭ್ಯರ್ಥಿ ಸೇರಿದಂತೆ ಬಿಜೆಪಿಯ ಮೂವರು, 4 ಪಕ್ಷೇತರರು, ಶಾಸಕ ಜಿ.ಡಿ. ಹರೀಶ್‌ ಗೌಡ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಂಬಲ ಮಾತ್ರವಲ್ಲದೇ ಇಬ್ಬರು ಕಾಂಗ್ರೆಸ್ ಸದಸ್ಯರಾದ 24ನೇ ವಾರ್ಡಿನ ಗೀತಾ ನಿಂಗರಾಜು ಮತ್ತು 28ನೇ ವಾರ್ಡಿನ ಶ್ವೇತಾ ಮಂಜುನಾಥ್ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಎನ್‌ಡಿಎ ಅಭ್ಯರ್ಥಿ ಗೆಲುವಿನ ಅಂತರವನ್ನು 16 ರಿಂದ 18ಕ್ಕೆ ಏರಿಸಿದರು.ಮೈತ್ರಿ ಅಭ್ಯರ್ಥಿ 18-15 ಅಂತರದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ನಾಲ್ಕನೇ ವಾರ್ಡಿನ ಭವ್ಯ ಚಂದ್ರಶೇಖರ್ ಪಕ್ಷದ ಒಟ್ಟು 14 ಸದಸ್ಯರ ಪೈಕಿ 12 ಸದಸ್ಯರ ಬೆಂಬಲ, ಎಸ್‌ಡಿಪಿಐನ ಇಬ್ಬರು ಸದಸ್ಯರು ಮತ್ತು ಒಬ್ಬ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ 15 ಮತಗಳಿಸಿ ಸೋಲು ಒಪ್ಪಿಕೊಂಡರು. ಶಾಸಕರ ನಿರ್ದೇಶನದಂತೆ ಮತ್ತು ಪಕ್ಷದೊಳಗಿನ ಒಳ ಒಪ್ಪಂದದಂತೆ ನಿಕಟಪೂರ್ವ ಅಧ್ಯಕ್ಷ ಎಸ್. ಶರವಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆ ಚುನಾವಣೆ ಆಯೋಜಿಸಲಾಗಿತ್ತು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುದ ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಎನ್‌ಡಿಎ ಅಭ್ಯರ್ಥಿ ಗಣೇಶ್ ಕುಮಾರಸ್ವಾಮಿ ಗೆಲುವಿನ ಫಲಿತಾಂಶ ಘೋಷಿಸಿದರು. ಪಕ್ಷಾತೀತ ಗೆಲುವು ಇದಾಗಿದೆ: ಶಾಸಕ ಜಿ.ಡಿ. ಹರೀಶ್‌ ಗೌಡ ಮಾತನಾಡಿ, ಎನ್‌.ಡಿಎ ಮೈತ್ರಿಕೂಟಕ್ಕೆ ಇತರ ಪಕ್ಷದ ಬೆಂಬಲ ಸಿಕ್ಕಿರುವುದು ನಗರಸಭೆಯಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಎನ್‌ಡಿಎ ಅಭ್ಯರ್ಥಿ ಗೆಲುವು ನಮ್ಮ ಗುರಿಯಾಗಿತ್ತು. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಂಸತ್ ಕ್ಷೇತ್ರ ಮಟ್ಟದಲ್ಲಿ ಆಯೋಜನೆಗೊಳ್ಳುವ ದಿಶಾ ಸಭೆಯಗಳಲ್ಲಿ ಚರ್ಚಿಸಲಿದ್ದೇನೆ. ಅದಕ್ಕೆ ಅದರದೇ ಆದ ರೀತಿ ನೀತಿಗಳಿವೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಾಸಕರೊಂದಿಗೆ ಕೈಜೋಡಿಸಿ ದುಡಿಯುತ್ತಿದ್ದೇವೆ ಎಂದರು.ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ಶಾಸಕ ಮತ್ತು ಸಂಸದರ ಸಹಕಾರದೊಂದಿಗೆ ನಗರದ ಸಮಗ್ರ ಏಳಿಗೆಗಾಗಿ ದುಡಿಯುತ್ತೇನೆ ಎಂದು ತಿಳಿಸಿದರು.ನಿಕಟಪೂರ್ವ ಅಧ್ಯಕ್ಷ ಎಸ್. ಶರವಣ, ಸದಸ್ಯರಾದ ಕೃಷ್ಣರಾಜ ಗುಪ್ತ, ಎಚ್.ಪಿ. ಸತೀಶ್‌ ಕುಮಾರ್, ದೇವರಾಜ್, ವಿವೇಕಾನಂದ, ಉಪಾಧ್ಯಕ್ಷೆ ಆಶಾ ಕೃಷ್ನನಾಯಕ, ರಾಣಿ ಪೆರುಮಾಳ್, ಮಾಲಿಕ್ ಪಾಷಾ, ದೇವನಾಯ್ಕ, ರಾಧ, ಶ್ರೀನಾಥ್, ಹರೀಶ್‌ಕುಮಾರ್, ಪೌರಾಯುಕ್ತೆ ಕೆ. ಮಾನಸ ಇದ್ದರು.

Share this article