ಜಿಲ್ಲೆಗೆ ಅಗತ್ಯ ಯೋಜನೆ ರೂಪಿಸುವುದು ಸರ್ಕಾರದ ಹೊಣೆ: ದಿನೇಶ್ ಗುಂಡೂರಾವ್‌

KannadaprabhaNewsNetwork | Published : Feb 6, 2025 12:15 AM

ಸಾರಾಂಶ

ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಸಭಾಭವನದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಜನರ ಕಷ್ಟಗಳಿಗೆ ಸ್ಪಂದಿಸುವುದೇ ಜನತಾದರ್ಶನದ ಮೂಲ ಆಶಯವಾಗಿದ್ದು, ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಒದಗಿಸುವುದರ ಜೊತೆಗೆ ಜಿಲ್ಲೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವುದು ನಮ್ಮಹೊಣೆ, ರಾಜ್ಯ ಸರ್ಕಾರ ಈ‌ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಸಭಾಭವನದಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಸಮಸ್ಯೆ ಅರಿತುಕೊಂಡು ಜನರಿಗೆ ಕೊಟ್ಟ ಮಾತು ಅನುಷ್ಠಾನ ಗೊಳಿಸುವುದೇ ಸರ್ಕಾರದ ಮುಖ್ಯ ಗುರಿ ಎಂದ ಅವರು, ಗ್ಯಾರಂಟಿ ಯೋಜನೆಗಳ ಯಶಸ್ವೀ ಅನುಷ್ಠಾನದ ಮೂಲಕ‌ ನಮ್ಮ ಸರ್ಕಾರ ದೇಶಕ್ಕೆ ಮಾದರಿಯಾಗಿದೆ ಎಂದರು.

ಜನಸ್ನೇಹಿಗಳಾಗಲು ಕರೆ:

ಅಧಿಕಾರಿಗಳು ಜವಾಬ್ದಾರಿ ಅರಿತು ಸಾರ್ವಜನಿಕರ ಜೊತೆ ದರ್ಪದಿಂದ‌ ವರ್ತಿಸದೆ ಜನಸ್ನೇಹಿಯಾಗಬೇಕು. ಸಮಸ್ಯೆಗಳ ಬಗ್ಗೆ ಹೇಳಿಕೊಂಡು ಕಚೇರಿಗೆ ಜನಸಾಮಾನ್ಯರು ಬಂದಾಗ ಅಧಿಕಾರಿಗಳು ದರ್ಪ ತೋರಿಸಬೇಡಿ. ಕಾನೂನಿನ ಅಡಿಯಲ್ಲಿ ಸಮಸ್ಯೆ ಬಗೆಹರಿಸಲು ‌ಸಾಧ್ಯವಾಗದ ಇದ್ದ ಸಂದರ್ಭದಲ್ಲಿಯೂ ‌ಕೂಡ ಅವರೊಂದಿಗೆ ತಾಳ್ಮೆ ಮತ್ತು ವಿನಯದಿಂದ‌ ವರ್ತಿಸಿ, ವಿಶ್ವಾಸದಿಂದ ಕೆಲಸ ಮಾಡಿ ಒಳ್ಳೆಯ ಅಧಿಕಾರಿಯೆಂದು ಹೆಸರು ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಜಿಲ್ಲಾಧಿಕಾರಿ ಎರಡು ದಿನಗಳ ಹಿಂದೆ ಕಾರ್ಯಕ್ರಮದ ಬಗ್ಗೆ ಮಾಹಿತಿ ‌ನೀಡಿದ್ದರು. ಇದು ಉತ್ತಮ ಕಾರ್ಯಕ್ರಮ. ಆದರೆ ಕಳೆದ ಎರಡು ವರ್ಷಗಳಿಂದ ನಾನು ಹಕ್ಕುಪತ್ರ ನೀಡುವ ಬಗ್ಗೆ ಬಹಳಷ್ಟು ಮನವಿ ಮಾಡಿಕೊಂಡರೂ ಸರ್ಕಾರಿ ವ್ಯವಸ್ಥೆಯಿಂದ‌ ಸಾಧ್ಯವಾಗಿರಲಿಲ್ಲ. ನನ್ನ ಬಳಿ ಎರಡು ಕುಟುಂಬಗಳು ಬಂದು ಹಕ್ಕು ಪತ್ರಕ್ಕಾಗಿ ಕಣ್ಣೀರಿಟ್ಟರು ಕೂಡ ಸಿಕ್ಕಿರಲಿಲ್ಲ ಎಂದರು.

ಶಾಸಕರನ್ನು ಕಾರ್ಯಕ್ರಮಕ್ಕೆ ಕರೆಯದ ಬಗ್ಗೆ ಕೂಡ ಸಚಿವರ ಮುಂದೆ ಹೇಳಿಕೊಂಡರು. ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ.ವಿರೋಧವನ್ನೂ ಮಾಡಿಲ್ಲ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಜನರ ಕಷ್ಟಗಳಿಗೆ ಪರಿಹಾರ ಹುಡುಕುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.

ಪುತ್ತೂರು ಶಾಸಕ‌ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್‌ ಮಾಜಿ ಸದಸ್ಯ ಹರೀಶ್ ಕುಮಾರ್, ಗ್ರಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಉಪಾಧ್ಯಕ್ಷ ಮೋನೀಶ್ ಆಲಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಪಂಚ ಗ್ಯಾರಂಟಿ ಯೋಜನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಮಾಜಿ ಸಚಿವ ರಮಾನಾಥ ರೈ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ಮುಲ್ಲೈಮುಗಿಲನ್,ಎಸ್ಪಿ ಯತೀಶ್,ಅರಣ್ಯ ಉಪ ಸಂರಕ್ಷಣಾಧಿಕಾರಿ ಅಂತೋನಿ ಮರಿಯಪ್ಪ, ಪಿಯೂಸ್ ಎಲ್ ರೋಡ್ರಿಗಸ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಸಮಸ್ಯೆಗಳ ಮಹಾಪೂರ:

ಕಲ್ಲಡ್ಕದಲ್ಲಿ ರಾಷ್ಟ್ರೀಕೃತ ಬ್ಯಾಂಕಿನವರು ವಿದ್ಯಾಭ್ಯಾಸಕ್ಕೆ ಸಾಲ ಕೊಡುತ್ತಿಲ್ಲ, ನೇರಂಬೋಳು ಎಂಬಲ್ಲಿ ಮನೆ ಕಟ್ಟಲು ವ್ಯಕ್ತಿಯೊಬ್ಬರು ಕಿರುಕುಳ‌ ಕೊಡುತ್ತಾರೆ, ಸಾಂತ್ವನ‌ ಕೇಂದ್ರದ ಸಿಬ್ಬಂದಿ ಗೌರವಧನ ಹೆಚ್ಚಿಸಿ, ಗೋಳ್ತಮಜಲಿನಲ್ಲಿ ಮಳೆಹಾನಿ ಪರಿಹಾರ ಕೊಡಿಸಿ, ತುಂಬೆ ಡ್ಯಾಂ ಎತ್ತರ ಹೆಚ್ಚಿಸಿದ್ದರಿಂದ ಮುಳುಗಡೆ ಪ್ರದೇಶಗಳಿಗೆ ಪರಿಹಾರ ಕೊಡಿಸಿ, ಅಮ್ಟಾಡಿ ಗ್ರಾ.ಪಂ.ಗೆ ಸಿಬ್ಬಂದಿಯನ್ನು ‌ಕೊಡಿ, ಸಾಲಮನ್ನಾ ಮಾಡಿಸಿ‌ ಕೊಡಿ ಸೇರಿದಂತೆ ಲಿಖಿತ ಹಾಗೂ ಮೌಖಿಕ ಅಹವಾಲುಗಳನ್ನು ಸ್ವೀಕರಿಸಿದ ಸಚಿವರು ನೇರ ಸ್ಪಂದನೆ ನೀಡಿದರು.

94 ಸಿ ಹಕ್ಕುಪತ್ರ ಹಾಗೂ ಇಲಾಖೆಗಳ ಅಡಿಯಲ್ಲಿ ಬರುವ ಸೌಲಭ್ಯಗಳನ್ನು ವಿತರಿಸಲಾಯಿತು.

Share this article